ಗಣೇಶ ಚತುರ್ಥಿಯು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿಯವರೆಗೆ ವಿಜೃಂಭಣೆಯಿಂದ ನಡೆಯುವ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ, ಸಾರ್ವಜನಿಕ ಮಂಟಪಗಳಲ್ಲಿ ಹಾಗೂ ಮನೆ-ಮನಗಳಲ್ಲಿ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹೂ-ಹಣ್ಣು ಮತ್ತು ವರ್ಣರಂಜಿತ ಅಲಂಕಾರಗಳೊಂದಿಗೆ ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ. ಮಹಾರಾಷ್ಟ್ರದಲ್ಲಂತೂ ಈ ಹಬ್ಬದ ಸಂಭ್ರಮ ತಿಂಗಳುಗಳ ಕಾಲ ಕಳೆಗಟ್ಟುತ್ತದೆ. ಯಾವುದೇ ಶುಭ ಕಾರ್ಯವಿರಲಿ, ವಿಘ್ನಗಳು ಎದುರಾಗದಿರಲಿ ಎಂದು ಪ್ರಥಮ ಪೂಜೆಯನ್ನು ಗಣಪತಿಗೆ ಸಲ್ಲಿಸಲಾಗುತ್ತದೆ. ಆತನಿಗೆ ಮೋದಕ ಹಾಗೂ ಪಂಚಕಜ್ಜಾಯ ಅತ್ಯಂತ ಪ್ರಿಯವಾದ ನೈವೇದ್ಯಗಳು. ಅನಂತ ಚತುರ್ದಶಿಯಂದು ಗಣಪತಿಯ ಮೂರ್ತಿಯನ್ನು ಶಾಸ್ತ್ರೀಯವಾಗಿ ವಿಸರ್ಜನೆ ಮಾಡಲಾಗುತ್ತದೆ.
ನಮ್ಮ ದೇಶದಲ್ಲಿ ಅನೇಕ ಪ್ರಸಿದ್ಧ ಗಣಪತಿ ದೇವಾಲಯಗಳಿದ್ದು, ಅವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 'ಉಕ್ಕಡ' ಎಂಬಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರವು ಧಾರ್ಮಿಕವಾಗಿ ಹಾಗೂ ಪ್ರವಾಸಿ ತಾಣವಾಗಿ ಅತ್ಯಂತ ಪ್ರಸಿದ್ಧವಾಗಿದೆ.
ಸೌತಡ್ಕ ಕ್ಷೇತ್ರದ ಇತಿಹಾಸ ಮತ್ತು ಹೆಸರಿನ ಹಿನ್ನೆಲೆ:
ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿಗ್ರಹವು ಹಿಂದೆ ರಾಜಮನೆತನದಿಂದ ಪೂಜಿಸಲ್ಪಡುತ್ತಿತ್ತು. ಕಾಲಕ್ರಮೇಣ ಶತ್ರುಗಳ ಆಕ್ರಮಣಕ್ಕೆ ಒಳಗಾದಾಗ, ಮೂರ್ತಿಗೆ ಹಾನಿಯಾಗದಂತೆ ತಡೆಯಲು ಸ್ಥಳೀಯ ಗೋಪಾಲಕರು (ದನ ಕಾಯುವವರು) ವಿಗ್ರಹವನ್ನು ಕಾಡಿನಿಂದ ತಂದು, ಸೌತೆಕಾಯಿ ಹೇರಳವಾಗಿ ಬೆಳೆಯುತ್ತಿದ್ದ ಬಯಲು ಜಾಗದಲ್ಲಿ ಕಟ್ಟೆಯೊಂದರ ಮೇಲೆ ಪ್ರತಿಷ್ಠಾಪಿಸಿದರು. ತುಳು ಮತ್ತು ಕನ್ನಡ ಭಾಷೆಯಲ್ಲಿ 'ಸೌತೆ' ಎಂದರೆ ಸೌತೆಕಾಯಿ, 'ಅಡ್ಕ' ಎಂದರೆ ಬಯಲು ಜಾಗ. ಹೀಗಾಗಿ ಈ ಕ್ಷೇತ್ರಕ್ಕೆ 'ಸೌತಡ್ಕ' ಎಂಬ ಹೆಸರು ಬಂದಿದೆ. ಗಣೇಶನ ಕೃಪೆಯಿಂದಲೇ ಇಲ್ಲಿ ಸೌತೆಕಾಯಿ ಉತ್ತಮವಾಗಿ ಬೆಳೆಯುತ್ತಿತ್ತು ಎಂಬ ನಂಬಿಕೆಯಿದ್ದು, ಇಂದಿಗೂ ಭಕ್ತರು ದೇವರಿಗೆ ಸೌತೆಕಾಯಿಯನ್ನು ಕಾಣಿಕೆಯಾಗಿ ಅರ್ಪಿಸುವುದನ್ನು ಕಾಣಬಹುದು.
ಕ್ಷೇತ್ರದ ಪ್ರಮುಖ ವೈಶಿಷ್ಟ್ಯಗಳು:
ಗರ್ಭಗುಡಿಯಿಲ್ಲದ ಮುಕ್ತ ಸನ್ನಿಧಿ: ಇತರ ದೇವಾಲಯಗಳಂತೆ ಇಲ್ಲಿ ಗರ್ಭಗುಡಿ, ನವರಂಗ, ಮುಖಮಂಟಪ ಅಥವಾ ರಾಜಗೋಪುರಗಳಿಲ್ಲ. ವಿಶಾಲವಾದ ಆಕಾಶವನ್ನೇ ಛಾವಣಿಯಾಗಿಸಿಕೊಂಡು, ತೆರೆದ ವಾತಾವರಣದ ಕಟ್ಟೆಯ ಮೇಲೆ ವಿರಾಜಮಾನನಾಗಿರುವ ಗಣಪತಿಯನ್ನು ಭಕ್ತರು ಕಣ್ಣಾರೆಯಾಗಿ ಕಣ್ತುಂಬಿಕೊಳ್ಳಬಹುದು.
ಹರಕೆ ಗಂಟೆಗಳ ಸಮರ್ಪಣೆ: ಈ ಕ್ಷೇತ್ರದಲ್ಲಿ ಹರಕೆ ಹೊತ್ತು ಪ್ರಾರ್ಥಿಸಿದರೆ ಮೂರು ತಿಂಗಳೊಳಗೆ ಅಭೀಷ್ಟೆ ಈಡೇರುತ್ತದೆ ಎಂಬ ದೃಢ ನಂಬಿಕೆಯಿದೆ. ಕೋರಿಕೆ ನೆರವೇರಿದ ಭಕ್ತರು ದೇವಸ್ಥಾನಕ್ಕೆ ಗಂಟೆಯನ್ನು ಕಾಣಿಕೆಯಾಗಿ ನೀಡುತ್ತಾರೆ. ಹೀಗಾಗಿ ದೇವಾಲಯದ ಆವರಣದಲ್ಲಿ ಸಾವಿರಾರು ಹರಕೆ ಗಂಟೆಗಳನ್ನು ಕಾಣಬಹುದು.
ಗೋಸೇವೆ: ಇಲ್ಲಿ ಪಂಚಕಜ್ಜಾಯ ಸೇವೆ ಮಾಡುವವರು ಪ್ರಸಾದವನ್ನು ಮೊದಲು ದೇವಾಲಯದ ವಿಶಾಲ ಗೋಶಾಲೆಯಲ್ಲಿರುವ ಹಸುಗಳಿಗೆ ಹಂಚುವ ವಿಶಿಷ್ಟ ಪರಂಪರೆಯಿದೆ.
ದೈನಂದಿನ ಸೇವೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು:
ಕ್ಷೇತ್ರದಲ್ಲಿ ಪ್ರತಿದಿನ ಗಣಹೋಮ, ೧೦೮ ತೆಂಗಿನಕಾಯಿ ಹಾಗೂ 108 ಎಳನೀರು ಅಭಿಷೇಕ ನೆರವೇರುತ್ತದೆ. ಜೊತೆಗೆ ಅಪ್ಪ ಕಜ್ಜಾಯ, ಪಂಚಕಜ್ಜಾಯ, ರಂಗಪೂಜೆ ಹಾಗೂ ಅತ್ಯಂತ ಪ್ರಸಿದ್ಧವಾದ 'ಮೂಡಪ್ಪ ಸೇವೆ'ಗಳು ಇಲ್ಲಿ ಜರುಗುತ್ತವೆ. ಭಕ್ತರ ಅನುಕೂಲಕ್ಕಾಗಿ ಈ ಕ್ಷೇತ್ರವು 24 ಗಂಟೆಯೂ ತೆರೆದಿರುತ್ತದೆ. ಪ್ರತಿವರ್ಷ ಗಣೇಶ ಚತುರ್ಥಿಯಂದು ಕ್ಷೇತ್ರದ ವಾರ್ಷಿಕ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದ್ದು, ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ.
– ತೃಪ್ತಿ ಮಯ್ಯಾಳ
ಸ್ನಾತಕೋತ್ತರ ವಿದ್ಯಾರ್ಥಿನಿ, ಮಂಗಳೂರು ವಿಶ್ವವಿದ್ಯಾನಿಲಯ


