ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶ ಚತುರ್ಥಿ ಹಬ್ಬ ಬರುತ್ತದೆ. ಈ ಹಬ್ಬವನ್ನು ಗೌರಿ ಗಣೇಶ ಹಬ್ಬ ಎಂದೂ ಕೂಡ ಕರೆಯುತ್ತಾರೆ. ಈ ದಿನ ಗಣೇಶನನ್ನು ವಿಧಿವಿಧಾನವಾಗಿ ಆರಾಧಿಸಿ ಪೂಜಿಸಿದರೆ ಇಷ್ಟಾರ್ಥ ಫಲಗಳು ಪ್ರಾಪ್ತಿಯಾಗಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಘ್ನಗಳು ದೂರವಾಗಿ ಜಯವನ್ನು ಲಭಿಸುತ್ತದೆ. ಗಣೇಶ ಮೂರ್ತಿಯನ್ನು ಮನೆಗೆ ತರುವುದಕ್ಕಿಂತ ಮುಂಚೆ ಮನೆ ಹಾಗೂ ಮನೆಯ ಸುತ್ತಮುತ್ತ ಶುಚಿ ಗೊಳಿಸಬೇಕು.
ಈ ವರ್ಷ 14-09-2026 ಗೌರಿ ಗಣೇಶ ಹಬ್ಬವನ್ನು ಒಂದೇ ದಿನ ಆಚರಿಸಲಾಗುತ್ತದೆ. ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಸುಖ ಶಾಂತಿ, ಸಮೃದ್ಧಿ ದೊರೆಯುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಂದು ಶುಭಕಾರ್ಯಕ್ಕೂ ಮುಂಚೆ ವಿಘ್ನನಿವಾರಕನಾದ ಗಣೇಶನನ್ನು ನೆನೆಸಿಕೊಳ್ಳುತ್ತಾರೆ. ಯಾವುದೇ ಪೂಜೆಗೂ ಮೊದಲು ಗಣಪತಿಯನ್ನು ಪೂಜಿಸುವುದು ವಾಡಿಕೆ. ಗಣೇಶನನ್ನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರು ಎಂದು ಪೂಜಿಸಲಾಗುತ್ತದೆ.
ಈ ವರ್ಷ ಚತುರ್ಥಿ ತಿಥಿಯು ಸೆಪ್ಟೆಂಬರ್ 14ರ ಬೆಳಿಗ್ಗೆ 7:06ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 15ರ ಬೆಳಿಗ್ಗೆ 7:44ಕ್ಕೆ ಮುಕ್ತಾಯವಾಗುತ್ತದೆ.
ಗಣೇಶ ಹಬ್ಬವು ಭಾದ್ರಪದ ಮಾಸದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿ ತಿಥಿಯವರೆಗೆ ಮುಂದುವರಿಯುತ್ತದೆ.
ಭಾರತದಲ್ಲಿ ವೈಭವದಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯನ್ನು ಗಣೇಶೋತ್ಸವ ಎಂದೂ ಕರೆಯಲಾಗುತ್ತದೆ. ಗಣೇಶನನ್ನು ಗಣೇಶ, ವಿನಾಯಕ, ಮೂಷಿಕವಾಹನ ಮತ್ತು ವಿನಾಯಕ ಹಾಗೂ ಇನ್ನಿತರ ಹೆಸರುಗಳಿವೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸಿ, ವ್ರತವನ್ನು ಆಚರಿಸಲಾಗುತ್ತದೆ.
ಹಬ್ಬದ ದಿನ ಮಡಿಯಲ್ಲಿ ಮೋದಕ, ಕಡುಬು, ನಾನಾ ಬಗೆಯ ಪಂಚಭಕ್ಷ್ಯಗಳು, ಪಾಯಸ, ಸಿಹಿತಿಂಡಿ, ಊಟದ ಜೊತೆಗೆ ಮೂಡೆ, ಪತ್ರೊಡೆ ರೊಟ್ಟಿ
ನಾನಾ ರೀತಿಯ ಭಕ್ಷ್ಯಗಳನ್ನಿಟ್ಟು ಪೂಜೆ ಮಾಡುತ್ತಾರೆ. ಆ ದಿನ ಪ್ರತಿಷ್ಠಾಪಿಸಲ್ಪಟ್ಟ 21 ಗಣಪತಿಗಳನ್ನು ನೋಡಿದರೆ (ಪ್ರತ್ಯಕ್ಷ/ಪರೋಕ್ಷ) ಇಷ್ಟಾರ್ಥಗಳು ನೆರವೇರಿ ಕಷ್ಟ ಪರಿಹಾರವಾಗುತ್ತದೆ ಎಂಬ ಪ್ರತೀತಿ ಕೂಡ ಇದೆ, ಹಾಗಾಗಿ ಜನಸಾಮಾನ್ಯರು 21 ಮನೆಗಳಿಗೆ ಹೋಗಿ ದೇವರಿಗೆ ಅಕ್ಷತೆ ಹಾಕಿ ಆಶೀರ್ವಾದ ಪಡೆಯುತ್ತಾರೆ.
ವಿವಿಧ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಕೂಡ 3, 5, 9, 11 ಅಥವಾ 21 ದಿನಗಳ ಕಾಲ ಆಚರಿಸಿ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಗಣೇಶನನ್ನು ಪೂಜಿಸುವ ಗಣೇಶನ ಸೊಂಡಿಲು ಎಡಭಾಗಕ್ಕೆ ತಿರುಗಿ ಇರಬೇಕು. ಗಣಪತಿಯನ್ನು ಆರಾಧಿಸುವಾಗ ಸೊಂಡಿಲು ಎಡಭಾಗಕ್ಕೆ ಇರುವಂತೆ ನೋಡಿಕೊಂಡು ಪೂಜಿಸಬೇಕು, ಮನೆಗೆ ತರಲು ಐಶ್ವರ್ಯ ತರಲು ಎಡಕ್ಕೆ ಇರುವ ಸೊಂಡಿಲ ಗಣೇಶನೇ ಅತ್ಯಂತ ಶ್ರೇಷ್ಠ, ಎಡಮುರಿ ಗಣಪತಿಯನ್ನು ವಾಮಮುಖಿ ಗಣಪತಿ ಎಂದು ಕರೆಯಲಾಗುತ್ತದೆ, ಎಡಮುರಿ ಗಣಪತಿಯನ್ನು ಪೂಜಿಸುವುದು ಸುಲಭ ಹಾಗೂ ಶಾಂತ ಸ್ವರೂಪದ ಪೂಜೆಗೆ ಸೂಕ್ತ. ಅಲ್ಲದೇ ಬಲಗಡೆ ಸೊಂಡಿಲಿರುವ ಗಣಪತಿಯನ್ನು "ಸಿದ್ಧಿ ವಿನಾಯಕ" ಎಂದು ಕರೆಯಲಾಗುತ್ತದೆ, ಬಲಮುರಿ ಗಣಪತಿಯ ಪೂಜಾ-ಪುನಸ್ಕಾರ, ನಿತ್ಯನಿಯಮ ಹಾಗೂ ಆಚಾರ-ವಿಚಾರಗಳು ಬಹಳ ಕಟ್ಟುನಿಟ್ಟಾಗಿರಬೇಕು.
ನಿಂತಿರುವ ಅಥವಾ ನೃತ್ಯ ಮಾಡುತ್ತಿರುವ ಗಣಪತಿ ವಿಗ್ರಹವನ್ನು ತಂದು ಪೂಜಿಸುವ ಬದಲು ಸ್ಥಿರವಾಗಿ ಕುಳಿತಿರುವ ಗಣಪತಿ ವಿಗ್ರಹವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಪೂರ್ವ, ಉತ್ತರ, ಈಶಾನ್ಯ ದಿಕ್ಕಿನಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ನಾವು ಮಾಡುವ ಪೂಜೆಗಳಿಗೆ ಖಂಡಿತ ಶ್ರೇಷ್ಠಫಲ ಲಭಿಸುತ್ತದೆ.
ಅಲ್ಲದೆ ಮನೆಯ ಮುಖ್ಯ ಬಾಗಿಲಿಗೆ ಮಾವಿನ ತೋರಣ ಕಟ್ಟಬೇಕು, ಸುವಾಸನೆಭರಿತ ಧೂಪದಿಂದ ಬಾಗಿಲನ್ನು ಅಲಂಕರಿಸುವುದು ಒಳ್ಳೆಯದು. ಇದರಿಂದ ಗಣಪತಿಯ ಅನುಗ್ರಹದ ಜೊತೆಗೆ ಆ ಮನೆಗೆ ಲಕ್ಷ್ಮಿದೇವಿಯ ಹೆಚ್ಚಿ ಇಡುತ್ತಾಳೆ, ನಿನ್ನ ಆ ಮನೆ ಸಂಪತ್ತಿನಿಂದ ಕೂಡಿರುತ್ತದೆ.
-ಎಂ.ಬಾಲಕೃಷ್ಣ ನಾಯಕ್
ಮೂಡಬಿದಿರೆ
7996186521


