ಪುತ್ತೂರು: ಗೃಹ ರಕ್ಷಕ ದಳ ಹಾಗೂ NDRF ಪಡೆಯ ಸುಸಜ್ಜಿತ ಕಚೇರಿಗೆ ಜಮೀನು ಕಾಯ್ದಿರಿಸಲು ಶಾಸಕರಿಗೆ ಮನವಿ

Upayuktha
0


ಪುತ್ತೂರು: ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕದಲ್ಲಿರುವ ಅಗ್ನಿಶಾಮಕ ದಳದ ಕಚೇರಿಯ ಬಳಿ ಲಭ್ಯವಿರುವ ಉಳಿಕೆ ಜಮೀನನ್ನು ಗೃಹ ರಕ್ಷಕ ದಳ (ಹೋಮ್ ಗಾರ್ಡ್ಸ್) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (NDRF) ಪ್ರತ್ಯೇಕವಾಗಿ ಕಾಯ್ದಿರಿಸಿ, ಪಹಣಿಯಲ್ಲಿ (RTC) ನಮೂದಿಸಲು ಕಂದಾಯ ಇಲಾಖೆಗೆ ಸೂಚಿಸಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಗಿದೆ.


ಕಚೇರಿ ಹಾಗೂ ಮೂಲಸೌಕರ್ಯವಿಲ್ಲದೆ ಪರದಾಟ:

ಪುತ್ತೂರು ಗೃಹ ರಕ್ಷಕ ದಳದ ಘಟಕದಲ್ಲಿ ಒಟ್ಟು 60 ಮಂದಿ (48 ಪುರುಷರು ಹಾಗೂ 12 ಮಹಿಳೆಯರು) ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಹಾಯಕ ಕಮಿಷನರ್ (AC) ಕಚೇರಿಯ ಬಳಿಯಿದ್ದ ಹಳೆಯ ಸರ್ಕಾರಿ ಕಟ್ಟಡದಲ್ಲಿ ಈ ಕಚೇರಿ ಕಾರ್ಯಾಚರಿಸುತ್ತಿತ್ತು. ಆದರೆ, ಆ ಕಟ್ಟಡವನ್ನು ತೆರವುಗೊಳಿಸಿದ ನಂತರ ಗೃಹ ರಕ್ಷಕ ಸಿಬ್ಬಂದಿಗೆ ಸೂಕ್ತ ಕಚೇರಿಯೇ ಇಲ್ಲದಂತಾಗಿದೆ. ಪ್ರಸ್ತುತ ಮಹಿಳಾ ಪೊಲೀಸ್ ಠಾಣೆಯ ಒಂದು ಬದಿಯಲ್ಲಿ ಟೇಬಲ್ ಹಾಕಿ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಗೆ ಹಾಗೂ ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಪಡೆದುಕೊಳ್ಳಲು ಮತ್ತು ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.


NDRF ಪಡೆಗೆ ಜಾಗದ ಅಭಾವ:

ಮಳೆಗಾಲದ ತುರ್ತು ಸ್ಪಂದನೆಗಾಗಿ ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರದಿಂದ ಅಕ್ಟೋಬರ್ ಮೊದಲ ವಾರದ ತನಕ ಎನ್‌ಡಿಆರ್‌ಎಫ್ (NDRF) ಪಡೆ ಅಗತ್ಯ ಉಪಕರಣಗಳೊಂದಿಗೆ ತಾಲೂಕಿನಲ್ಲಿ ಮೊಕ್ಕಾಂ ಹೂಡುತ್ತದೆ. ಪ್ರಸ್ತುತ ಈ ಪಡೆ ಎಪಿಎಂಸಿ ಪ್ರಾಂಗಣದಲ್ಲಿ ತಂಗುತ್ತಿದ್ದು, ಸೂಕ್ತ ಜಾಗದ ಕೊರತೆ ಎದುರಾಗಿದೆ.


ಉಳಿಕೆ ಜಾಗದಲ್ಲಿ ಸುಸಜ್ಜಿತ ಕಟ್ಟಡಕ್ಕೆ ಆಗ್ರಹ:

ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕದಲ್ಲಿ ಅಗ್ನಿಶಾಮಕ ದಳದ ಘಟಕಕ್ಕೆ ನಿಗದಿಯಾದ 2 ಎಕರೆ ಜಮೀನಿನಲ್ಲಿ ಕಾರ್ಯಾಚರಣೆ ಘಟಕ ಹಾಗೂ ಸಿಬ್ಬಂದಿ ನಿವಾಸ ನಿರ್ಮಾಣಗೊಂಡಿದ್ದು, ಜಾಗದ ಉಳಿಕೆ ಭಾಗ ಲಭ್ಯವಿದೆ. ಈ ಉಳಿಕೆ ಜಾಗವನ್ನು- ಗೃಹ ರಕ್ಷಕ ದಳ ಹಾಗೂ ಎನ್‌ಡಿಆರ್‌ಎಫ್ ಪಡೆಗೆ ಪ್ರತ್ಯೇಕವಾಗಿ ಗುರುತಿಸಿ, ಆರ್‌ಟಿಸಿ (RTC)ಯಲ್ಲಿ ದಾಖಲಿಸಬೇಕು ಹಾಗೂ ಆರ್‌ಟಿಸಿ ದಾಖಲಾದ ನಂತರ ಸಿಬ್ಬಂದಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಮಳೆಗಾಲದಲ್ಲಿ ಎನ್‌ಡಿಆರ್‌ಎಫ್ ಪಡೆ ಮೊಕ್ಕಾಂ ಹೂಡಲು ಮತ್ತು ಇತರೆ ದಿನಗಳಲ್ಲಿ ಈ ಜಾಗವನ್ನು ಇತರ ತುರ್ತು ಕಾರ್ಯಪಡೆಗಳ ಬಳಕೆಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಸ್ಥಳೀಯರು ಹಾಗೂ ಘಟಕದ ಅಧಿಕಾರಿಗಳು ಶಾಸಕರಲ್ಲಿ ವಿನಂತಿಸಿದ್ದಾರೆ.


ಇದಕ್ಕೆ ಸ್ಪಂದಿಸಿರುವ ಶಾಸಕರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top