ಗುರುಸ್ಮೃತಿ- 2026: ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ

Upayuktha
0


ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ “ಗುರುಸ್ಮೃತಿ- 2026” ಕಾರ್ಯಕ್ರಮವನ್ನು ಅತ್ಯಂತ ವೈಭವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅವರು, "ಶಿಕ್ಷಕರು ಕೇವಲ ಪಾಠ ಬೋಧಕರಲ್ಲ, ವಿದ್ಯಾರ್ಥಿಗಳ ಬದುಕಿಗೆ ಉತ್ತಮ ಮೌಲ್ಯಗಳನ್ನು ಬಿತ್ತುವ ಶಿಲ್ಪಿಗಳು. ಶಿಕ್ಷಣದ ಮುಖ್ಯ ಉದ್ದೇಶ ವ್ಯಕ್ತಿತ್ವ ನಿರ್ಮಾಣ. ಗುರ ಶಿಷ್ಯರ ನಡುವಿನ ಆತ್ಮೀಯತೆ ಹಾಗೂ ಗೌರವದ ಬಾಂಧವ್ಯವು ಉತ್ತಮ ಸಮಾಜದ ನಿರ್ಮಾಣಕ್ಕೆ ದಾರಿಯಾಗುತ್ತದೆ" ಎಂದು ಅಭಿಪ್ರಾಯಪಟ್ಟರು.


ಕಲಾ ಸಂಘದ ಅಧ್ಯಕ್ಷ ನೆವಿಲ್ ನವೀನ್ ಮೊರಾಸ್ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಪೋಷಕರಷ್ಟೇ ಪ್ರಮುಖ ಸ್ಥಾನಮಾನ ಹೊಂದಿದ್ದಾರೆ ಎಂದರು.


ಸಾಂಸ್ಕೃತಿಕ ವೈಭವ: ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಜೊತೆಯಾಗಿ ಗಾಯನ, ನೃತ್ಯ ಹಾಗೂ ಮನರಂಜನಾ ಕಲಾ ಪ್ರದರ್ಶನಗಳನ್ನು ನಡೆಸಿ ಸಂಭ್ರಮಿಸಿದರು.


ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುವೃಂದಕ್ಕೆ ವಿವಿಧ ಗೌರವ ಸಮರ್ಪಣೆಗಳ ಮೂಲಕ ಪ್ರೀತಿ ಮತ್ತು ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ವತಿಯಿಂದ ಸಿದ್ಧಪಡಿಸಲಾದ ಪ್ರೀತಿಯ ಭೋಜನಕೂಟ ನಡೆಯಿತು.


ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಚಾರ್ಯೆ ಪ್ರೊ. ನಂದಾ ಕುಮಾರಿ, ಆಡಳಿತ ಕುಲಸಚಿವ ಪ್ರೊ. ಶ್ರೀಧರ ಎನ್. ಭಟ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೇಯಸ್ ಬಿ. ಉಪಸ್ಥಿತರಿದ್ದರು.


ವಿಜ್ಞಾನ ಸಂಘದ ಅಧ್ಯಕ್ಷ ರಂಜನ್ ಸ್ವಾಗತಿಸಿ, ಪ್ರಥಮ ಬಿಬಿಎ ವಿದ್ಯಾರ್ಥಿನಿ ವಸುಧಾ ಹಾಗೂ ತೃತೀಯ ಬಿಎ ವಿದ್ಯಾರ್ಥಿನಿ ಸನುಷಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಸಂಘದ ಅಧ್ಯಕ್ಷ ಭವಿಷಿತ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕ-ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top