ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರದ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ, ಕಾಲೇಜಿನ ಸಭಾಂಗಣದಲ್ಲಿ “ಕರ್ನಾಟಕದಲ್ಲಿ ನಾಥ ಸಂಪ್ರದಾಯ” ಕುರಿತಾದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವು ಜರುಗಿತು. ದಿ. ಟೈಲರ್ ಕೊಗ್ಗ ಜೋಗಿ ಮತ್ತು ಶ್ರೀಮತಿ ಗಂಗಮ್ಮ ಅವರ ಸ್ಮರಣಾರ್ಥವಾಗಿ ದಿ. ಜೋಗಿ ಆನಂದನಾಥ್ ಅವರು ಸ್ಥಾಪಿಸಿರುವ ಈ ದತ್ತಿನಿಧಿ ಉಪನ್ಯಾಸವನ್ನು ಕಾಲೇಜಿನ ಪ್ರಾಚಾರ್ಯರಾದ ಹಾರ್ದಿಕ್ ಪಿ. ಚೌಹಾನ್ ಅವರು ಉದ್ಘಾಟಿಸಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಗಾಯತ್ರಿ ಬಿ.ಕೆ. ಅವರು ಮಾತನಾಡಿ, ನಾಥ ಪಂಥವು ಅತ್ಯಂತ ಪುರಾತನವಾಗಿದ್ದು ತನ್ನದೇ ಆದ ವಿಶೇಷ ವೈಶಿಷ್ಟ್ಯವನ್ನು ಹೊಂದಿದೆ ಎಂದರು. ಇಂದಿನ ಯುವಜನತೆಗೆ ಈ ಪಂಥದ ಇತಿಹಾಸ ಹಾಗೂ ಸಂಪ್ರದಾಯಗಳ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅನಿವಾರ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, ಕಾಸಪಾ ವತಿಯಿಂದ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ನಾಥ ಪಂಥ ಪ್ರಚಾರ ಸಮಿತಿ ಕರ್ನಾಟಕ ಇದರ ಕಾರ್ಯದರ್ಶಿ ಡಾ. ಪಿ. ಕೇಶವನಾಥ್ ಉಪಸ್ಥಿತರಿದ್ದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಚಿತ್ರ ಪಿ. ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ ಕು. ಸರಸ್ವತಿ ಚಿನ್ನಕಟ್ಟಿ ವಂದಿಸಿದರು. ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮವನ್ನು ನಿರೂಪಿಸಿದರು. ದತ್ತಿ ದಾಸರಾದ ದಿ. ಕೊಗ್ಗ ಜೋಗಿ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮೆರಗು ತಂದರು.
