ಬೆಂಗಳೂರು: ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 16ನೇ ಪದವಿ ಪ್ರದಾನ (ಸ್ನಾತಕ ಹಾಗೂ ಸ್ನಾತಕೋತ್ತರ) ಸಮಾರಂಭ ಇಂದು (ಸೆ.26) ಅತ್ಯಂತ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದಲ್ಲಿ ಒಟ್ಟು 1402 ಅರ್ಹ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸಿದರು. ಸ್ನಾತಕ ವಿಭಾಗದಲ್ಲಿ 1159 ಹಾಗೂ ಸ್ನಾತಕೋತ್ತರ (ಬಿ.ಇ, ಎಂ.ಟೆಕ್, ಎಂ.ಬಿ.ಎ ಹಾಗೂ ಎಂ.ಸಿ.ಎ) ವಿಭಾಗದಲ್ಲಿ 243 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1402 ವಿದ್ಯಾರ್ಥಿಗಳು ಪದವಿ ಪಡೆದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೆಂಟ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷರಾದ ಭಾಗ್ಯ ಚಂದ್ರ ರಾವ್ ಅವರು ನೂತನ ಪದವೀಧರರಿಗೆ ಮೂರು ಪ್ರಮುಖ ಜೀವನ ಪಾಠಗಳನ್ನು ಬೋಧಿಸಿದರು. ಮೊದಲನೆಯದಾಗಿ 'ಯಾವಾಗಲೂ ನೀವಾಗಿರಿ ಮತ್ತು ವ್ಯಕ್ತಿತ್ವಕ್ಕೆ ಒತ್ತು ನೀಡಿ', ಎರಡನೆಯದಾಗಿ 'ನಿರಂತರ ಕಲಿಕೆಯ ಮೂಲಕ ಬೆಳವಣಿಗೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಮತ್ತು ಆರಂಭಿಕ ವೇತನಕ್ಕಿಂತ ಕಲಿಕೆ ಹಾಗೂ ಮಾರ್ಗದರ್ಶನಕ್ಕೆ ಪ್ರಾಮುಖ್ಯತೆ ನೀಡಿ' ಮತ್ತು ಮೂರನೆಯದಾಗಿ 'ಪ್ರಶ್ನಾತೀತ ಪ್ರಾಮಾಣಿಕತೆ ಹಾಗೂ ಮೂಲಭೂತ ಮೌಲ್ಯಗಳನ್ನು ಅಳವಡಿಸಿಕೊಳ್ಳಿ' ಎಂದು ಕರೆ ನೀಡಿದರು.
ಅಧ್ಯಕ್ಷೀಯ ನುಡಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಮಾತನಾಡಿ, ಪದವಿಯು ಶಿಕ್ಷಣದ ಅಂತ್ಯವಲ್ಲ, ಬದಲಿಗೆ ಜೀವನಪರ್ಯಂತ ಮುಂದುವರಿಯುವ ಸುದೀರ್ಘ ಪಯಣದ ಆರಂಭ ಎಂದರು. ಅಲ್ಲದೆ, ಶಾಂತಚಿತ್ತದಿಂದ ಆಲಿಸುವ ಸಾಮರ್ಥ್ಯ ಮತ್ತು ಆತ್ಮಾವಲೋಕನದ ಮಹತ್ವವನ್ನು ವಿವರಿಸಿದರು.
ಚಿನ್ನದ ಪದಕ ವಿಜೇತರು:
ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಜಯ್ ಪಾಟೀಲ್ ಎಂ (9.91 ಸಿ.ಜಿ.ಪಿ.ಎ) ಅವರು ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕವನ್ನು ಪಡೆದರು.
ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಕಂಪ್ಯೂಟರ್ ಸೈನ್ಸ್ ವಿಭಾಗದ ಎಸ್. ಹರಿಪ್ರಿಯ ಅವರಿಗೆ ಲಭಿಸಿತು.
ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರುವ ಜಸ್ಟಿಸ್ ಕೆ.ಎಸ್. ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್ ವಿಭಾಗದ ಅಭಿಶೇಕ್ ಪಡೆದರು.
ಒಟ್ಟು 14 ಚಿನ್ನದ ಪದಕಗಳು ಹಾಗೂ 101 ರ‍್ಯಾಂಕ್ ಪ್ರಮಾಣಪತ್ರಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಪರೀಕ್ಷಾ ನಿಯಂತ್ರಕ ಡಾ. ಪ್ರಶಾಂತ್ ವಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.
