ಧಾರವಾಡದ ಅಭೂತಪೂರ್ವ ಚಾತುರ್ಮಾಸ್ಯದಲ್ಲಿ ಸ್ವಯಂಸೇವಕರ ಅನನ್ಯ ಸೇವೆ

Shreya Hegde
0



ಧಾರವಾಡ: ಪರಮಪೂಜ್ಯ 1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇ ಚಾತುರ್ಮಾಸ್ಯವು ಧಾರವಾಡದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. "ಅನ್ನದಾತಾ ಸುಖೀಭವ" ಎಂಬ ಸಂತೃಪ್ತಿಯ ಹಾರೈಕೆ ಇಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು.


ಭೀಮ ಮಂಟಪ ಹಾಗೂ ಪಾಕಶಾಲೆ:

ಚಾತುರ್ಮಾಸ್ಯದ ಸ್ಥಳದಲ್ಲಿ ನಿರ್ಮಿಸಲಾಗಿದ್ದ "ಭೀಮ ಮಂಟಪ" ಎಂಬ ವಿಶಾಲವಾದ ಪಾಕಶಾಲೆ ಇದರ ಪ್ರಮುಖ ಕೇಂದ್ರವಾಗಿತ್ತು. ಮುಂಜಾನೆಯ ಫಲಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಭೋಜನ ಇಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಅಗ್ನಿದೇವನು ಶಾಂತನಾದ ಕ್ಷಣವೇ ಇಲ್ಲಿರಲಿಲ್ಲ. ಸಾಕ್ಷಾತ್ ತಾಯಿ ಅನ್ನಪೂರ್ಣೆಯನ್ನೇ ಒಲಿಸಿಕೊಂಡವರಂತೆ ನೂರಾರು ಪಾಚಕರು ಕಾರ್ಯನಿರ್ವಹಿಸಿದರು. ಸಕಲ ಶಾಸ್ತ್ರ ಸಂಪನ್ನರಾದ ಅನೇಕ ವಿದ್ವಾಂಸರು ಕೈಯಲ್ಲಿ ಸೌಟು ಹಿಡಿದು ರಾಮದೇವರ ಪ್ರಸಾದ ವಿತರಣೆಯ ಪುಣ್ಯ ಕಾರ್ಯದಲ್ಲಿ ನಿರತರಾದರು. ಚಾತುರ್ಮಾಸ್ಯ ಮುಗಿಯುವವರೆಗೆ ಭೋಜನ ವ್ಯವಸ್ಥೆಯಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಬಾರದು ಎಂಬುದು ಇವರ ಅಚಲ ನಿಷ್ಠೆಯಾಗಿತ್ತು. ನಿತ್ಯವೂ ಅಡುಗೆ ಸಿದ್ಧಪಡಿಸುವುದು, ಆಯಾ ಸ್ಥಳಗಳಿಗೆ ತಲುಪಿಸುವುದು ಹಾಗೂ ಊಟಕ್ಕೆ ಕುಳಿತ ಸಹಸ್ರಾರು ಭಕ್ತರಿಗೆ ತಾಯಿಯಂತೆ ವಾತ್ಸಲ್ಯದಿಂದ ಬಡಿಸುತ್ತಿದ್ದ ಪುರುಷ ಸ್ವಯಂಸೇವಕರ ಸೇವೆ ವರ್ಣನಾತೀತ; ಅದು ಅನುಭವಕ್ಕಷ್ಟೇ ಗಮ್ಯ.


ದಿನವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಭಕ್ತರಿಂದ ಗುರುಗಳ ಪಾದಪೂಜೆ, ಮುದ್ರಾಧಾರಣೆ ಹಾಗೂ ಮಂತ್ರಾಕ್ಷತೆ ಸ್ವೀಕಾರ ಕಾರ್ಯಕ್ರಮಗಳು ಜರುಗಿದರೂ, ವ್ಯವಸ್ಥೆಯಲ್ಲಿ ಎಂದೂ ಲೋಪ ಉಂಟಾಗಲಿಲ್ಲ. ಅಷ್ಟು ಸುಸಜ್ಜಿತವಾಗಿತ್ತು ಸ್ವಯಂಸೇವಕರ ಆಯೋಜನೆ.


ಮಹಿಳಾ ಸ್ವಯಂಸೇವಕಿಯರ ಆದರ್ಶ ಸೇವೆ

ಮಹಿಳಾ ಸ್ವಯಂಸೇವಕಿಯರ ಸೇವೆ ಹಾಗೂ ಸಮರ್ಪಣಾ ಮನೋಭಾವದ ಕುರಿತು ಎಷ್ಟು ಬರೆದರೂ ಕಡಿಮೆಯೇ. ಉದ್ಯೋಗದಲ್ಲಿರುವ ಅನೇಕ ಮಹಿಳೆಯರು ಚಾತುರ್ಮಾಸ್ಯದಲ್ಲಿ ಸೇವೆ ಸಲ್ಲಿಸಲೆಂದೇ ತಮ್ಮ ಬಿಡುವಿನ ವೇಳೆಯನ್ನು ಮೀಸಲಿಟ್ಟಿದ್ದರು. ವಿವಿಧ ಭಜನಾ ಮಂಡಳಿಗಳ ವಯೋವೃದ್ಧೆಯರು ಸಹ ನಿತ್ಯವೂ ಕೈಗೊಂಡ ಸೇವೆ ನಿಜಕ್ಕೂ ಆದರ್ಶಪ್ರಾಯ.


ಎಮ್.ಕಾಂ, ಇಂಜಿನಿಯರಿಂಗ್ ಮುಂತಾದ ಉನ್ನತ ಶಿಕ್ಷಣ ಪಡೆದರೂ, ವೈದಿಕ ವಿದ್ವಾಂಸರು ಹಾಗೂ ಪುರೋಹಿತರ ಪತ್ನಿಯರಾದ ಈ ಗೃಹಿಣಿಯರು ತಮ್ಮ ವೃತ್ತಿಜೀವನಕ್ಕಿಂತ ಸನಾತನ ಸಂಪ್ರದಾಯ ಹಾಗೂ ವ್ರತನಿಯಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಮುಂಜಾನೆಯೇ ಮಡಿ ಸ್ನಾನ ಮುಗಿಸಿ, ಶ್ರಾವಣ ಗೌರಿ ಪೂಜೆ, ಅಡುಗೆಯ ಸಿದ್ಧತೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಯಾವುದೇ ತಡವಿಲ್ಲದೆ ಮಠಕ್ಕೆ ಸೇವೆಗೆ ಹಾಜರಾಗುತ್ತಿದ್ದರು. ಮಠದಲ್ಲಿ ಬ್ರಾಹ್ಮಣರು ಊಟ ಮಾಡಿದ ಎಲೆಗಳನ್ನು ತೆಗೆಯುವುದು, ತಮ್ಮ ಚಿಕ್ಕ ಮಕ್ಕಳ ಕಡೆಗೂ ಗಮನ ಹರಿಸದೆ ಸಂಜೆಯವರೆಗೂ ಶ್ರಮಿಸುವುದು, ರಾತ್ರಿ ಅತಿಥಿಗಳಿಗಾಗಿ ಮಡಿಯಿಂದ ಚಪಾತಿ ಹಾಗೂ ಭಕ್ಕರಿಗಳನ್ನು ಒಲೆಯ ಮುಂದೆ ಕುಳಿತು ಸಿದ್ಧಪಡಿಸುವುದು—ಇವೆಲ್ಲವನ್ನೂ ಅವರು ಯಾವುದೇ ಪ್ರಚಾರ ಅಥವಾ ತೋರಿಕೆಯ ಆಡಂಬರವಿಲ್ಲದೆ ನಿಭಾಯಿಸಿದರು. ವೈದಿಕ ಜೀವನದ ತ್ಯಾಗ ಮತ್ತು ಸಹನೆಗೆ ಈ ಮಾತೆಯರೇ ಸಾಕ್ಷಿ. ತೆರೆಮರೆಯಲ್ಲಿ ನಿಂತು ನಿಸ್ವಾರ್ಥ ಸೇವೆಗೈದ ಈ ಎಲ್ಲ ಸಹೋದರಿಯರ ತಾಳ್ಮೆ ಮತ್ತು ಶ್ರಮಕ್ಕೆ ನಮ್ಮ ಹೃತ್ಪೂರ್ವಕ ನಮನಗಳು.


ಸಮರ್ಥ ಆಡಳಿತ ಮತ್ತು ಸ್ವಯಂಸೇವಕರ ವೇಗ:

ಸೇವೆಯಲ್ಲಿ ತಾರತಮ್ಯವಿಲ್ಲದಿದ್ದರೂ, ಪುರುಷರು ಒಂದು ಕೆಲಸಕ್ಕೆ ತೊಡಗಿಕೊಂಡರೆ ಹಗಲಿರುಳು ದುಡಿಯುತ್ತಾರೆ; ಆದರೆ ಸ್ತ್ರೀ ಜವಾಬ್ದಾರಿಯೊಂದಿಗೆ ತನ್ನ ಸಾಂಪ್ರದಾಯಿಕ ಕರ್ತವ್ಯಗಳನ್ನೂ ಎಂದಿಗೂ ಬಿಡುವುದಿಲ್ಲ. ಅವಳು ಎರಡೂ ದಂಡೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವವಳು. ಕುಡಿಯುವ ನೀರಿನ ವ್ಯವಸ್ಥೆಯಿಂದ ಹಿಡಿದು ಭೋಜನ ವಿತರಣೆಯವರೆಗೆ ಎಲ್ಲವೂ ಅಚ್ಚುಕಟ್ಟಾಗಿ ಸಾಗಿತು.


ಪ್ರತಿದಿನವೂ ಆರೇಳು ಪಂಕ್ತಿಗಳ ಊಟ ಸಾಮಾನ್ಯವಾಗಿದ್ದು, ಶನಿವಾರ ಮತ್ತು ಭಾನುವಾರಗಳಂತೂ ಕನಿಷ್ಠ ಎಂಟು ಪಂಕ್ತಿಗಳಾಗುತ್ತಿದ್ದವು. ಸ್ವಯಂಸೇವಕರು ಕೇವಲ 8 ರಿಂದ 10 ನಿಮಿಷಗಳಲ್ಲಿ ಎಲೆಗಳನ್ನು ತೆಗೆದು, ಆ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಘಗೊಳಿಸುತ್ತಿದ್ದರು. ಯಂತ್ರಗಳಂತೆ ಕಾರ್ಯನಿರ್ವಹಿಸುವ ಇವರ ವೇಗದಿಂದಾಗಿ ಮುಂದಿನ ಪಂಕ್ತಿಯವರಿಗೆ ಆ ಸ್ಥಳದಲ್ಲಿ ಒಂದು ಹನಿ ನೀರೂ ಇಲ್ಲದಂತೆ ಶುಚಿಯಾಗುತ್ತಿತ್ತು. ಮೂಲರಾಮದೇವರ ಸಂಸ್ಥಾನ ಪೂಜೆಯ ದರ್ಶನಕ್ಕೆ ಬಂದ ಭಕ್ತರಿಗೆ ನೂಕುನುಗ್ಗಲಿಗೆ ಅವಕಾಶವೇ ಇಲ್ಲದಂತೆ ಸುವ್ಯವಸ್ಥೆ ಕಲ್ಪಿಸಲಾಯಿತು.


ಧಾರವಾಡ ಯುವಾತ್ಮಾ ತಂಡದ ಕೊಡುಗೆ:

ಈ ಚಾತುರ್ಮಾಸ್ಯದ ಯಶಸ್ಸಿನಲ್ಲಿ "ಧಾರವಾಡ ಯುವಾತ್ಮಾ" ಎಂಬ ಯುವಕ-ಯುವತಿಯರ ಧಾರ್ಮಿಕ ಗುಂಪಿನ ಸೇವೆ ಬಹು ಶ್ಲಾಘನೀಯ. ನಿತ್ಯದ ವ್ಯವಸ್ಥೆಗಳನ್ನು ನೋಡಿಕೊಳ್ಳುವುದರ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೂರದ ಭಕ್ತರೂ ಮನೆಯಲ್ಲಿಯೇ ವೀಕ್ಷಿಸುವಂತೆ ಲೈವ್ ಪ್ರಸಾರ ಮಾಡುವ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು. ಅಲ್ಲದೆ, ಶ್ರೀಮಠದ ಇತಿಹಾಸ ಬಿಂಬಿಸುವ ನಾಟಕ ಪ್ರದರ್ಶನದ ಮೂಲಕ ಧಾರ್ಮಿಕತೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು.


ಸಮರ್ಪಣಾ ಭಾವ:

ಭವ್ಯ ಚಾತುರ್ಮಾಸ್ಯದ ಈ ವೈಭವದ ಯಶಸ್ಸಿನಲ್ಲಿ ಅತಿ ದೊಡ್ಡ ಪಾತ್ರ ವಹಿಸಿದ ಸುಮಾರು 2000 ಕ್ಕೂ ಹೆಚ್ಚು ಸ್ವಯಂಸೇವಕರು ಹಾಗೂ ಸೇವಕಿಯರು ಪ್ರಶಂಸನಾರ್ಹರು. 5000 ದಿಂದ ಆರಂಭವಾಗಿ 15000 ಜನ ಭಕ್ತರು ಸೇರಿದ್ದರೂ ವ್ಯವಸ್ಥೆಯಲ್ಲಿ ಕಿಂಚಿತ್ತೂ ವ್ಯತ್ಯಾಸವಾಗದಿರುವುದು ಇವರ ಪೂರ್ವತಯಾರಿ ಮತ್ತು ಮನೋಬಲವನ್ನು ತೋರಿಸುತ್ತದೆ. ಆದರೆ, ಇಷ್ಟೆಲ್ಲಾ ಯಶಸ್ಸಿನ ಹೊರತಾಗಿಯೂ ಅವೆಲ್ಲರ ಬಾಯಿಂದ ಮೊಳಗಿದ ಧ್ವನಿ ಒಂದೇ:


"ಈ ಚಾತುರ್ಮಾಸ್ಯ ಇಷ್ಟು ವೈಭವದಿಂದ ನೆರವೇರಲು ನಾವು ಕಾರಣರಲ್ಲ; ಇದು ಕೇವಲ ಪರಮಪೂಜ್ಯ ಗುರುಗಳಾದ ಶ್ರೀಸತ್ಯಾತ್ಮತೀರ್ಥರ ಪಾದಧೂಳಿಯ ಮಹಿಮೆ ಮಾತ್ರ." ಇದು ಅವರ ಅನನ್ಯ ಗುರುಭಕ್ತಿಯನ್ನು ಎತ್ತಿ ತೋರಿಸುತ್ತದೆ.


– ಮೇಧಾ ಪ್ರಹ್ಲಾದಾಚಾರ್ಯ ಜೋಶಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top