ಮೋಹನ ಗೌಡ ಪ್ರಕರಣ: ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಹೈಕೋರ್ಟ್ ಐತಿಹಾಸಿಕ ತೀರ್ಪು

Shreya Hegde
0

  ಹಾಗೂ ಡಿಜಿ-ಐಜಿಪಿ ಕಟ್ಟುನಿಟ್ಟಿನ ಸುತ್ತೋಲೆ


ಬೆಂಗಳೂರು: ನಾಗರಿಕರ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಕಾನೂನುಬಾಹಿರವಾಗಿ ಬಂಧನಗಳನ್ನು ನಡೆಸುವ ಪೊಲೀಸ್ ಇಲಾಖೆಯ ಧೋರಣೆಯ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯವು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದು, ಐತಿಹಾಸಿಕ ತೀರ್ಪು ನೀಡಿದೆ. ಈ ಮಹತ್ವದ ತೀರ್ಪಿನ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಮಹಾನಿರ್ದೇಶಕರು (ಡಿಜಿ-ಐಜಿಪಿ) ಬಿಎನ್‌ಎಸ್‌ಎಸ್ (BNSS) ಸೆಕ್ಷನ್ 35ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.


ಘಟನೆಯ ಹಿನ್ನೆಲೆ

ಶೋ ರದ್ದು: ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ 'ಉರು' (Uru) ಮೈದಾನದಲ್ಲಿ ಕುನಾಲ್ ಕಮ್ರಾ ಅವರ ಕಾಮಿಡಿ ಶೋ ಆಯೋಜನೆಗೆ ನಿಗದಿಯಾಗಿತ್ತು. ಇದನ್ನು ವಿರೋಧಿಸಿ 'ಹಿಂದೂ ರಾಷ್ಟ್ರ ಸಮನ್ವಯ ಸಮಿತಿ'ಯು ನೀಡಿದ ಮನವಿಯ ಮೇರೆಗೆ ಆ ಶೋ ರದ್ದುಗೊಂಡಿತು.


ಫೇಸ್‌ಬುಕ್ ಪೋಸ್ಟ್: ಶೋ ರದ್ದಾದ ನಂತರ, ಮೋಹನ ಗೌಡ ಅವರು ಇದು "ಹಿಂದೂ ಒಗ್ಗಟ್ಟಿನ ವಿಜಯ" ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು.


ಸ್ವಯಂಪ್ರೇರಿತ ದೂರು: ಈ ಪೋಸ್ಟ್ ಅನ್ನು ಆಧರಿಸಿ, ಯಾರಿಗೂ ಯಾವುದೇ ದೂರು ಇಲ್ಲದಿದ್ದರೂ, ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸ್ವಯಂಪ್ರೇರಿತವಾಗಿ (Suo Motu) ದೂರು ದಾಖಲಿಸಿಕೊಂಡು ಅಶಾಂತಿ ಮೂಡಿಸಿದ ಆರೋಪದಡಿ (BNS ಸೆಕ್ಷನ್ 217 ಮತ್ತು 353(2)) ಪ್ರಕರಣ ದಾಖಲಿಸಿದರು. ಕಾನೂನುಬಾಹಿರ ವಶ: ಉಡುಪಿಯಲ್ಲಿದ್ದ ಮೋಹನ ಗೌಡ ಅವರನ್ನು ಬಂಧಿಸಲು ರಾತ್ರಿ ವೇಳೆ ತೆರಳಿದ ಪೊಲೀಸರು, ಠಾಣೆಗೆ ಕರೆತರುವ ಮಾರ್ಗಮಧ್ಯೆ ನೋಟಿಸ್ ಜಾರಿಗೊಳಿಸಿ ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದರು.


ನ್ಯಾಯಾಲಯದಲ್ಲಿ ವಕೀಲರ ವಾದ

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಗಿರೀಶ್ ಭಾರದ್ವಾಜ್ ಅವರು ಅತ್ಯಂತ ಸಮರ್ಥವಾಗಿ ವಾದ ಮಂಡಿಸಿದರು. ಪೊಲೀಸರು BNSS ಸೆಕ್ಷನ್ 35(3) ರಡಿ ನೋಟಿಸ್ ನೀಡುವುದಾಗಿ ಸುಳ್ಳು ಹೇಳಿದ್ದಾರೆ, ವಾಸ್ತವದಲ್ಲಿ ಅದಕ್ಕೂ ಮುನ್ನವೇ ವಶಕ್ಕೆ ಪಡೆದು ದಬ್ಬಾಳಿಕೆ ನಡೆಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.


ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನೇ ಆಧರಿಸಿ ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ಕಾರಣವಿಲ್ಲದೆ ಬಂಧನ ಮಾಡುವುದು ನಾಗರಿಕರ ಮೂಲಭೂತ ಹಕ್ಕುಗಳ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ವಾದಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಪೊಲೀಸರ ಅತಿವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. "ಸ್ವಾತಂತ್ರ್ಯವೇ ನಿಯಮ, ಬಲಪ್ರಯೋಗವೇ ಅಪವಾದ ಮತ್ತು ಕಾನೂನಿನ ಪ್ರಕ್ರಿಯೆಯೇ ರಕ್ಷಣೆ" ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವ ಪ್ರಕರಣಗಳಲ್ಲಿ BNSS ಸೆಕ್ಷನ್ 35ರ ಪ್ರಕಾರ ನೋಟಿಸ್ ನೀಡುವುದು ಕಡ್ಡಾಯ ನಿಯಮವಾಗಿದ್ದು, ಬಂಧನವು ಕೇವಲ ಅಂತಿಮ ಅಸ್ತ್ರವಾಗಿರಬೇಕೇ ಹೊರತು ಯದ್ವಾತದ್ವಾ ಮಾಡುವ ಪ್ರಕ್ರಿಯೆಯಲ್ಲ  ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.


ಡಿಜಿ-ಐಜಿಪಿಯಿಂದ ಕಟ್ಟುನಿಟ್ಟಿನ ಸುತ್ತೋಲೆ ಜಾರಿ

ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ, ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಮ್ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ:


ಸೆಕ್ಷನ್ 35 ಪಾಲನೆ ಕಟ್ಟುನಿಟ್ಟು: BNSS ಸೆಕ್ಷನ್ 35 ರ ನಿಯಮಗಳನ್ನು ಎಲ್ಲಾ ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಮೀರಿದರೆ ಶಿಸ್ತು ಕ್ರಮ ಹಾಗೂ ದಂಡದ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಗಳೇ ಭರಿಸಬೇಕಾಗುತ್ತದೆ.


ಬಂಧನ ಅನಿವಾರ್ಯವಲ್ಲ: 7 ವರ್ಷದವರೆಗೆ ಶಿಕ್ಷೆ ಇರುವ ಅಪರಾಧಗಳಲ್ಲಿ ನೋಟಿಸ್ ನೀಡುವುದು ನಿಯಮವಾಗಿದ್ದು, ಸಮರ್ಪಕ ಕಾರಣಗಳಿಲ್ಲದೆ ಮಾಡುವ ಯಾಂತ್ರಿಕ ಬಂಧನಗಳಿಗೆ ಅವಕಾಶವಿಲ್ಲ.


ಅಧಿಕಾರಿಗಳ ಜವಾಬ್ದಾರಿ: ಎಸ್‌ಎಚ್‌ಒ (SHO) ಮತ್ತು ತನಿಖಾಧಿಕಾರಿಗಳು ಇದರ ನೇರ ಹೊಣೆಗಾರಿಕೆಯನ್ನು ಹೊಂದಿರಬೇಕು. ಕಾನೂನುಬಾಹಿರ ಬಂಧನಗಳು ಕಂಡುಬಂದಲ್ಲಿ ಉನ್ನತ ಅಧಿಕಾರಿಗಳು (DCP/SP) ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.


ಈ ತೀರ್ಪು ಮತ್ತು ಸರ್ಕಾರದ ಸುತ್ತೋಲೆಯು ಕಾನೂನುಬಾಹಿರವಾಗಿ ಕಿರುಕುಳ ನೀಡುವ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೊಲೀಸ್ ಧೋರಣೆಗೆ ಬ್ರೇಕ್ ಹಾಕುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top