ಸುರತ್ಕಲ್: ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ಕಾರಂತಜ್ಜಿಯರು ಕೇವಲ ಸುಕ್ಕು ಗಟ್ಟಿದ ವಯಸ್ಸಾದ ಅಜ್ಜಿಯರಲ್ಲ. ಬದಲಾಗಿ, ಬದುಕಿನ ಸಮೃದ್ಧ ಅನುಭವಗಳಿಂದ ಮಾಗಿದ ಶತಮಾನಗಳ ಪ್ರಬುದ್ಧತೆಯನ್ನು ಹಾಗೂ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ವರ್ಗಾಯಿಸುವ ಅಪೂರ್ವ ಹಿರಿಯ ಜೀವಿಗಳು ಎಂದು ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಹಾಗೂ ಹಿರಿಯ ವಿಮರ್ಶಕಿ ಡಾ. ರೇಖಾ ವಿ. ಬನ್ನಾಡಿ ಅಭಿಪ್ರಾಯಪಟ್ಟಿದ್ದಾರೆ.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ‘ಗಿಳಿವಿಂಡು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ’ಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಬಾರಿಸು ಕನ್ನಡ ಡಿಂಡಿಮವ' ಗಿಳಿವಿಂಡು ಯಾನ ಮರಳಿ ಮನೆಗೆ ನುಡಿ ಸರಣಿಯ ಅಂಗವಾಗಿ ಆಯೋಜಿಸಲಾಗಿದ್ದ 'ಕಾರಂತಜ್ಜಿಯರು' ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಶಿವರಾಮ ಕಾರಂತರ ಪ್ರತಿಯೊಂದು ಕಾದಂಬರಿಯೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಆ ಕೃತಿಗಳ ಮರು ಓದು ಮತ್ತು ವಿಮರ್ಶಾತ್ಮಕ ಚಿಂತನೆಗಳು ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಯು.ಎಸ್. ಶೆಣೈ ಅವರು, ಹಿರಿಯ ಸಾಹಿತಿಗಳ ಕಾಲಾತೀತ ಸಾಹಿತ್ಯಿಕ ಕೊಡುಗೆಗಳನ್ನು ಮತ್ತು ವಿಚಾರಗಳನ್ನು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಗಿಳಿವಿಂಡು ಸಂಸ್ಥೆಯ ಶ್ರಮಾರ್ಹ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಗಿಳಿವಿಂಡು ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ. ಶಿವರಾಮ ಶೆಟ್ಟಿ ಮಾತನಾಡಿ, ವ್ಯಕ್ತಿಯೊಬ್ಬನ ಬದುಕು ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಾನು ಶಿಕ್ಷಣ ಪಡೆದ ಸಂಸ್ಥೆಯ ಪಾತ್ರ ದೊಡ್ಡದು. ಹೀಗಾಗಿ ತಾವು ಕಲಿತ ಮಾತೃ ಸಂಸ್ಥೆಯೊಂದಿಗಿನ ಸಂಬಂಧ ಹಾಗೂ ಒಡನಾಟ ಸದಾ ನಿರಂತರವಾಗಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಉಪಸ್ಥಿತರಿದ್ದರು.
ಆರಂಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಕೆ.ಎಸ್. ಪ್ರಸ್ತಾವಿಕವಾಗಿ ಎಲ್ಲರನ್ನೂ ಸ್ವಾಗತಿಸಿದರು. ಗಿಳಿವಿಂಡು ಸಂಸ್ಥೆಯ ಸದಸ್ಯ ಕೃಷ್ಣ ಮೂರ್ತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರ್ಚನಾ ಶೆಟ್ಟಿ ಮತ್ತು ಸುಶ್ಮಿತಾ ಶೆಟ್ಟಿ ಆಗಮಿಸಿದ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಡಾ. ಮೋಹನ್ ಬಿ. ಧನ್ಯವಾದ ಸಮರ್ಪಿಸಿದರು. ಮಮತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.


