ಬ್ರಾಹ್ಮಣರ ಆಚರಣೆಗಳಿಂದಲೇ ಬ್ರಾಹ್ಮಣತ್ವ: ಡಾ. ಹರಿಕೃಷ್ಣ ಪುನರೂರು

Shreya Hegde
0


ಸುರತ್ಕಲ್: "ಬ್ರಾಹ್ಮಣತ್ವ ಎನ್ನುವುದು ಕೇವಲ ಹುಟ್ಟಿನಿಂದ ಬರುವುದಲ್ಲ, ಅದು ವ್ಯಕ್ತಿಯ ಆಚರಣೆಗಳಿಂದ ರೂಪುಗೊಳ್ಳುತ್ತದೆ" ಎಂದು ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟಿದ್ದಾರೆ. ಅವರು ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ ಇದರ ವಾರ್ಷಿಕೋತ್ಸವ ಮಹಾಸಭೆ ಹಾಗೂ ಸನ್ಮಾನ-ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬ್ರಾಹ್ಮಣ ಸಮಾಜ ಹಿತ ರಕ್ಷಣಾ ವೇದಿಕೆ ಸುರತ್ಕಲ್ ಅಧ್ಯಕ್ಷ ಹಾಗೂ ಸ್ನೇಹ ಕೆಟರರ್ಸ್ ಮಾಲಕರಾದ ರಮೇಶ್ ಟಿ.ಎನ್. ಮಾತನಾಡಿ, ಬ್ರಾಹ್ಮಣರನ್ನು ಹಾಗೂ ಬ್ರಾಹ್ಮಣ್ಯವನ್ನು ನಿಂದಿಸುವವರ ವಿರುದ್ಧ ಸಮಾಜದ ಎಲ್ಲರೂ ಒಗ್ಗಟ್ಟಾಗಿ ದನಿ ಎತ್ತಬೇಕು ಎಂದರು.


ಮತ್ತೊಬ್ಬ ಅತಿಥಿ ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದ ಮ್ಯಾನೇಜರ್ ಶ್ರೀನಿಧಿ ಎಂ. ಭಟ್ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಉಳಿಯಲು ಹಿರಿಯರು ಮೊದಲು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉಡುಗೆ-ತೊಡುಗೆ, ಆಹಾರ ಪದ್ಧತಿ ಹಾಗೂ ಜಪ-ತಪಗಳಲ್ಲಿ ಹಿರಿಯರನ್ನು ನೋಡಿಯೇ ಮಕ್ಕಳು ಸಂಸ್ಕಾರ ಕಲಿಯುತ್ತಾರೆ ಎಂದು ತಿಳಿಸಿದರು.


ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀಮತಿ ಶಕುಂತಲಾ ರಮಾನಂದ ಭಟ್ ಅವರು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ. ಬಿ. ಗುರುರಾಜ್ ಮತ್ತು ಕಾಟಿಪಳ್ಳ-ಕೃಷ್ಣಾಪುರ ಬ್ರಾಹ್ಮಣ ಸಂಘದ ಅಧ್ಯಕ್ಷ ರವೀಂದ್ರ ರಾವ್ ಉಪಸ್ಥಿತರಿದ್ದರು.


ಸಾಧಕರಿಗೆ ಗೌರವಾರ್ಪಣೆ:

ಕಾರ್ಯಕ್ರಮದಲ್ಲಿ SSLC, PUC ಹಾಗೂ ಪದವಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು, ಪಾಕ ತಜ್ಞರು, 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ವಿಪ್ರ ಬಾಂಧವರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಶ್ರೀಮತಿ ರಮಾ ವೆಂಕಟ್ರಾವ್ ಮತ್ತು ಶ್ರೀಮತಿ ಮಹಾಲಕ್ಷ್ಮಿ ದಿವಾಕರ್ ಪ್ರಾರ್ಥನೆ ಗೈದರು. ಸಂಘದ ಅಧ್ಯಕ್ಷ ವಿಶ್ವೇಶ್ವರ ಬದವಿದೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಕೆ. ಕಲಾವತಿ ವರದಿ ವಾಚಿಸಿದರು ಮತ್ತು ಕೋಶಾಧಿಕಾರಿ ಸದಾಶಿವ ಕಾರಂತ ಲೆಕ್ಕಪತ್ರ ಹಾಗೂ ಮುಂಗಡ ಪತ್ರ ಮಂಡಿಸಿದರು. ಮುರಾರಿ ರಾವ್ ನೂತನ ಪದಾಧಿಕಾರಿಗಳ ಪಟ್ಟಿ ವಾಚನ ಮಾಡಿದರು. ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ವಂದನಾರ್ಪಣೆಗೈದರೆ, ಶ್ರೀಮತಿ ಯಮುನಾ ಪಿ. ರಾವ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top