ಅಂತರಂಗದಲ್ಲಿ ಶಾಂತಿ ನೆಲೆಸಿದಾಗ ಮಾತ್ರ ವಿಶ್ವಶಾಂತಿ ಸಾಧ್ಯ: ಪ್ರೊ. ನಂದಕಿಶೋರ್ ಎಸ್
ಉಜಿರೆ: ಇಂದಿನ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಗತಿ ಕಂಡುಬಂದಿದ್ದರೂ, ಮಾನವೀಯ ಮೌಲ್ಯಗಳ ಕುಸಿತ ಮತ್ತು ಯುದ್ಧ ಮನೋಭಾವದ ಹೆಚ್ಚಳವು ವಿಶ್ವದ ಶಾಂತಿಗೆ ಸವಾಲಾಗಿ ಪರಿಣಮಿಸಿದೆ. ಮನುಷ್ಯರು ಸ್ವಾರ್ಥ, ಅಹಂಕಾರ ಮತ್ತು ಅಸಹಿಷ್ಣುತೆಗೆ ಒಳಗಾಗುತ್ತಿರುವ ಕಾರಣ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಪುತ್ತೂರಿನ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ನಂದಕಿಶೋರ್ ಎಸ್ ಅಭಿಪ್ರಾಯಪಟ್ಟರು. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಶಾಂತಿ ದಿನದ ಅಂಗವಾಗಿ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಾಂತಿ ಎಂದಿಗೂ ಯುದ್ಧಭೂಮಿಯಲ್ಲಿ ಹುಟ್ಟುವುದಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ, ಮನಸ್ಸಿನಲ್ಲಿ ಮತ್ತು ಚಿಂತನೆಗಳಲ್ಲಿ ಮೊಳಕೆಯೊಡೆಯಬೇಕು. ಮನುಷ್ಯನ ಮನಸ್ಸಿನಲ್ಲಿ ಶಾಂತಿ ನೆಲೆಸಿದಾಗ ಮಾತ್ರ ಕುಟುಂಬದಲ್ಲಿ, ಸಮಾಜದಲ್ಲಿ ಹಾಗೂ ರಾಷ್ಟ್ರಗಳಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಇತಿಹಾಸದಲ್ಲಿ ನಡೆದ ಅನೇಕ ಯುದ್ಧಗಳು ಮಾನವಕುಲಕ್ಕೆ ಅಪಾರ ನಷ್ಟವನ್ನುಂಟುಮಾಡಿವೆ. ಆದ್ದರಿಂದ ಯುವಜನತೆ ಶಾಂತಿ, ಸಹನೆ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಂತಿಯ ವ್ಯಾಖ್ಯಾನವು ಪ್ರದೇಶದಿಂದ ಪ್ರದೇಶಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನವಾಗಿರಬಹುದು. ಆದರೆ ಎಲ್ಲ ವ್ಯಾಖ್ಯಾನಗಳ ಮೂಲ ಉದ್ದೇಶ ಮಾನವಕುಲದ ಒಳಿತೇ ಆಗಿದೆ. ಪ್ರತಿಯೊಬ್ಬರೂ ತಮ್ಮ ಅಂತರಂಗದಲ್ಲಿ ಶಾಂತಿಯನ್ನು ಕಾಪಾಡಿಕೊಂಡರೆ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಮತ್ತು ವಿಶ್ವದಲ್ಲಿ ಶಾಶ್ವತ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಗಣೇಶ್ ನಾಯಕ್ ಮಾತನಾಡಿ, ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಶಾಂತಿಯ ಅಗತ್ಯತೆಯನ್ನು ವಿವರಿಸಿದರು. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಯುದ್ಧಗಳು ಮಾನವ ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ. ಶಾಂತಿ ಎನ್ನುವುದು ಕೇವಲ ಯುದ್ಧದ ಅನುಪಸ್ಥಿತಿ ಮಾತ್ರವಲ್ಲ, ಅದು ನ್ಯಾಯ, ಸಮಾನತೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ನಿರ್ಮಾಣವಾಗುವ ಮೌಲ್ಯ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಟರಾಜ್ ಎಚ್.ಕೆ. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ಅಂತಾರಾಷ್ಟ್ರೀಯ ಶಾಂತಿ ದಿನದ ಇತಿಹಾಸ, ಉದ್ದೇಶ ಮತ್ತು ಅದರ ಸಮಕಾಲೀನ ಪ್ರಸ್ತುತತೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಪಿ.ಪಿ., ಸಪ್ನ ಕೆ.ಎಸ್. ಹಾಗು ವಿದ್ಯಾರ್ಥಿ ಸಂಯೋಜಕಿ ತನು ಕೆ ಸಿ ಹೆಗ್ಡೆ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಿಂಧ್ಯಾ ನಿರೂಪಿಸಿ, ವಿದ್ಯಾರ್ಥಿನಿ ಲಾವಣ್ಯ ವಂದಿಸಿದರು.
"ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆ ಶಾಂತಿಯ ಸಂದೇಶವನ್ನು ಯುವಪೀಳಿಗೆಗೆ ತಲುಪಿಸುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ವಿಶ್ವದಾದ್ಯಂತ ಶಾಂತಿ, ಸಹಬಾಳ್ವೆ, ಮಾನವೀಯ ಮೌಲ್ಯಗಳು ಹಾಗೂ ಪರಸ್ಪರ ಗೌರವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು"
- ನಟರಾಜ್ ಎಚ್.ಕೆ.
ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ ಎಸ್.ಡಿ.ಎಂ ಕಾಲೇಜು
