ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ (ಆ 14) ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಗ್ರಾಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಂಗೀತ ಕಲಾವಿದ ರಿಕಿ ಕೇಜ್ ಅವರು ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.
ನಮ್ಮ ಸೇವೆಗೆ ದೇಶ ಅಥವಾ ಭಾಷೆಯ ಗಡಿಗಳು ಇಲ್ಲ. ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಇಡೀ ಮಾನವಕುಲದ ಮೂಲಭೂತ ಹಕ್ಕು. ಬಲಿಷ್ಠರು ಮಾತ್ರವೇ ಉಳಿಯಬೇಕು ಎನ್ನುವುದಲ್ಲ, ನಾವು ಸಮಾಜದ ಅತ್ಯಂತ ದುರ್ಬಲರೂ ಉಳಿಯುವ ಸಮಾಜ ರೂಪಿಸಬೇಕಾಗಿದೆ ಎಂದು ತಮ್ಮ ಆಶಯ ಹಂಚಿಕೊಂಡರು.
ನೈಜಿರಿಯಾ, ಫಿಜಿ, ನೇಪಾಳ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ನಮ್ಮ ಮಿಷನ್ ಸಕ್ರಿಯವಾಗಿದೆ. ಈ ಮಕ್ಕಳು ಮುಂದೆ ಓದಿ ತಮ್ಮ ದೇಶಗಳಿಗೆ ಸಂಪನ್ಮೂಲಗಳಾಗಿ ಹೋಗುತ್ತಾರೆ. ಇದು ತಾಯಿ ಭಾರತಿಯು ತನ್ನ ಸೋದರ ದೇಶಗಳಿಗೆ ನೀಡುವ ಕೊಡುಗೆ ಎಂದು ವಿವರಿಸಿದರು.
"ಒನ್ ವರ್ಲ್ಡ್ ಒನ್ ಫ್ಯಾಮಿಲಿ" ಎನ್ನುವುದು ನಮಗೆ ಹೊಸ ವಿಚಾರವಲ್ಲ. "ವಸುಧೈವ ಕುಟುಂಬಕಂ" ಎನ್ನುವ ನಮ್ಮ ಋಷಿಗಳ ಆಶಯವು ಅದೇ ಆಗಿದೆ. ಒಮ್ಮೆ ನಮ್ಮ ಮನಸ್ಸಿನಲ್ಲಿ ಈ ಭಾವನೆ ಬಂದುಬಿಟ್ಟರೆ ಜಗತ್ತಿನಲ್ಲಿ ಯಾರೂ ನಮಗೆ ಸಂಬಂಧಪಡದವರು ಎನ್ನಿಸುವುದಿಲ್ಲ. ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ಮನೋಭಾವ ಬಂದುಬಿಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್" ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, "ಹಲವು ಇತಿಹಾಸಕಾರರು, ತತ್ತ್ವಶಾಸ್ತ್ರಜ್ಞರು ಭಾರತದ ಮಾರ್ಗವೇ ಜಾಗತಿಕ ಮಾದರಿ ಎಂದು ಹೇಳಿದ್ದಾರೆ. ಆಧುನಿಕ ಕಾಲದಲ್ಲಿ ಸಾಯಿ ಬಾಬಾ ಅವರು ಭಾರತದ ಮಾದರಿಯನ್ನು ದೊಡ್ಡಮಟ್ಟದಲ್ಲಿ ಜಗತ್ತಿಗೆ ಪರಿಚಯಿಸಿದರು. ಅವರ ಶಿಷ್ಯ ಸದ್ಗುರು ಶ್ರೀ ಮಧುಸೂದನ ಸಾಯಿ ಇದೇ ಸಂದೇಶವನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ದಿದ್ದಾರೆ" ಎಂದು ಶ್ಲಾಘಿಸಿದರು.
///ನನ್ನಂತೆ ಯಾರೂ ತಾಯಿಯನ್ನು ಕಳೆದುಕೊಳ್ಳಬಾರದು///
ಕಾರ್ಯಕ್ರಮದಲ್ಲಿ ತನ್ನ ಬದುಕಿನ ಕಥನ ಹಂಚಿಕೊಂಡ 'ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ'ನ ನಲ್ಲಕದಿರೇನಹಳ್ಳಿ ಕ್ಯಾಂಪಸ್‌ನ ವಿದ್ಯಾರ್ಥಿನಿ, ನೇಪಾಳ ಮೂಲದ ಶ್ರೀಶಾ ಸಾಯಿಪ್ರಿಯಾ, ತನಗಿರುವ ವೈದ್ಯೆಯಾಗಬೇಕು ಎನ್ನುವ ಕನಸು ಹಂಚಿಕೊಂಡರು.
"ವೈದ್ಯಕೀಯ ಸೇವೆ ಸಿಗದ ಕಾರಣಕ್ಕೆ ನಾನು ನನ್ನ ಒಂದೂವರೆ ವರ್ಷ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡೆ. ನನ್ನ ತಂದೆ ನನ್ನನ್ನು ಅನಾಥಾಶ್ರಮಕ್ಕೆ ಸೇರಿಸಿ ಕೈತೊಳೆದುಕೊಂಡರು. ದೇವರದಯೆಯಿಂದ ನನಗೆ ಸತ್ಯ ಸಾಯಿ ಬಾಬಾ ಅವರ ಬಗ್ಗೆ ತಿಳಿಯಿತು. ಹುಡುಕಿ ಇಲ್ಲಿಗೆ ಬಂದೆ. ಇಲ್ಲಿ ಎಲ್ಲರೂ ನನ್ನನ್ನು ಆದರಿಸಿ, ಪೋಷಿಸಿದರು. ಈಗ ನಾನು ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮುಂದೆ ನಾನು ಡಾಕ್ಟರ್ ಆಗಿ ನನ್ನ ಹಳ್ಳಿಗೆ ಹೋಗಿ ಸೇವೆ ಮಾಡುತ್ತೇನೆ. ನನ್ನಂತೆ ಯಾವುದೇ ಮಗು ತಮ್ಮ ತಾಯಿಯನ್ನು ಕಳೆದುಕೊಳ್ಳಬಾರದು" ಎಂದು ತನ್ನ ಆಶಯ ಹಂಚಿಕೊಂಡರು.
"ಈ ಶಾಲೆಯಲ್ಲಿ ನನಗೆ ಆಹಾರ, ವಸತಿ, ಶಿಕ್ಷಣ ಅಷ್ಟೇ ಅಲ್ಲ ಸಾಕಷ್ಟು ಪ್ರೀತಿ ಸಿಕ್ಕಿದೆ. ನಾನು ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ಬದುಕು ಮತ್ತು ಭವಿಷ್ಯ ಸಿಕ್ಕಿದೆ. ನನಗೆ ಒಂದು ದೊಡ್ಡ ಕುಟುಂಬ ಸಿಕ್ಕಿದೆ" ಎಂದು ಶ್ರೀಶಾ ನಿರರ್ಗಳ ಇಂಗ್ಲಿಷಿನಲ್ಲಿ ವಿವರಿಸಿದಾಗ ಸಭೆಯಲ್ಲಿದ್ದ ಎಲ್ಲರೂ ಹನಿಗಣ್ಣಾದರು. ವಿಶ್ವಸಂಸ್ಥೆಯ ಪ್ರತಿನಿಧಿಯೂ ಆಗಿರುವ ರಿಕಿ ಕೇಜ್ ಆಸನದಿಂದ ಮೇಲೆದ್ದು ನಿಂತು ಚಪ್ಪಾಳೆ ಹೊಡೆದರು.
"ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್"ನ ಚೀಫ್ ಆಪರೇಟಿಂಗ್ ಆಫೀಸರ್ ಎಸ್.ಎಸ್.ಭರತ್‌ಕುಮಾರ್ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಬೃಹತ್ ಆಶಯಗಳನ್ನು ವಿವರಿಸಿದರು. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸಾಯಿ ಪ್ರಸಾದ್ ನಿರೂಪಿಸಿದರು.
ನಲ್ಲಕದಿರೇನಹಳ್ಳಿ ಕ್ಯಾಂಪಸ್ ವಿದ್ಯಾರ್ಥಿನಿಯರಿಂದ "ಶಿಷ್ಯ ಅನುಶಾಸನಂ" ಉಪನಿಷತ್ ಭಾಗದ ಪಾರಾಯಣದೊಂದಿಗೆ ಸಂವಾದ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.
ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಅಶ್ವಥ್ ನಾರಾಯಣ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.
ಸಾವಯವ ಕೃಷಿ ಪದ್ಧತಿಯಿಂದ ಕ್ಯಾನ್ಸರ್ ನಿಯಂತ್ರಣ
ಧೂಮಪಾನ ಅಥವಾ ಮದ್ಯಪಾನದಿಂದಷ್ಟೇ ಕ್ಯಾನ್ಸರ್ ಬರುವುದು ಎನ್ನುವುದು ತಪ್ಪು. ಕ್ಯಾನ್ಸರ್ ಬರಲು ಹಲವು ಕಾರಣಗಳಿವೆ. ನಮ್ಮ ಸುತ್ತಮುತ್ತಲಿನ ಕಲುಷಿತ ಪರಿಸರದಿಂದಲೂ ಕ್ಯಾನ್ಸರ್ ಸಮಸ್ಯೆ ವ್ಯಾಪಕವಾಗುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
"ದಿವ್ಯ ಸಂಜ್ಯೆ" ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜೀವನಪದ್ಧತಿ ಮತ್ತು ರೀತಿನೀತಿಗಳನ್ನು ಬದಲಾಯಿಸುವುದರ ಮೂಲಕ ಕ್ಯಾನ್ಸರ್‌ನಂಥ ರೋಗಗಳನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ರಸಗೊಬ್ಬರ ಆಧರಿತ ಕೃಷಿಯಿಂದ ಸಾವಯವ ಕೃಷಿಗೆ ಹೊರಳಿಕೊಳ್ಳುವುದು ಮಹತ್ವದ ಕೊಡುಗೆ ನೀಡಬಲ್ಲದು" ಎಂದು ಸಲಹೆ ಮಾಡಿದರು.
ಇದು ಭಾರತದ ಹೆಮ್ಮೆಯ ಸಿಫೋನಿ ಆರ್ಕೆಸ್ಟ್ರಾ: ರಿಕಿ ಕೇಜ್
ಭಾರತದಲ್ಲಿಯೇ ತರಬೇತಿ ಪಡೆದ ಏಕೈಕ ಸಿಫೋನಿ ಆರ್ಕೆಸ್ಟ್ರಾ ಇದು. ಮುಂದಿನ ದಿನಗಳಲ್ಲಿ ಸದ್ಗುರುಗಳ ನೇತೃತ್ವದ ಸಾಯಿ ಸಿಂಫೋನಿ ಆರ್ಕೆಸ್ಟ್ರಾದೊಂದಿಗೆ ನಾನೂ ಸಹಯೋಗವಹಿಸುತ್ತೇನೆ. ಹೊಸದೇನಾದರೂ ಮಾಡುತ್ತೇನೆ ಎಂದು ಖ್ಯಾತ ಸಂಗೀತ ಕಲಾವಿದ ಹಾಗೂ ಹಲವು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ರಿಕಿ ಕೇಜ್ ಭರವಸೆ ನೀಡಿದರು.
ನಾನು ವಿಶ್ವದ ಹಲವು ಸಿಂಪೋನಿ ಆರ್ಕೆಸ್ಟ್ರಾಗಳೊಂದಿಗೆ ಕೆಲಸ ಮಾಡುತ್ತೇನೆ. ಆಗೆಲ್ಲಾ ನನಗೆ ಸದಾ ಭಾರತದ ನೆನಪು ಬರುತ್ತದೆ. ಸಿಂಫೋನಿ ಆರ್ಕೆಸ್ಟ್ರಾದಲ್ಲಿ ಹಲವು ಶೈಲಿಯ, ಹಲವು ವಿಧದ ವಾದ್ಯಗಳಿವೆ. ಅದರಲ್ಲಿರುವ ಪ್ರತಿ ವಾದ್ಯವು ವಿಶಿಷ್ಟ ಮತ್ತು ತನ್ನದೇ ಆದ ಅಸ್ತಿತ್ವ ಹೊಂದಿರುತ್ತದೆ. ಅದು ಎಂದಿಗೂ ಮತ್ತೊಂದನ್ನು ಮೀರಲು ಅಥವಾ ಮತ್ತೊಂದರಂತೆ ಆಗಲು ಪ್ರಯತ್ನಿಸುವುದಿಲ್ಲ ಎಂದು ವಿವರಿಸಿದರು.
ಆದರೆ ಈ ಎಲ್ಲ ವಾದ್ಯಗಳು ಒಗ್ಗೂಡಿ ಒಂದು ಹದದಲ್ಲಿ ಮೇಳೈಸಿದಾಗ ಅದ್ಭುತವಾಗಿ ಸಂಗೀತ ಹೊರಹೊಮ್ಮುತ್ತದೆ. ಅದೇ ರೀತಿ ಭಾರತದಲ್ಲಿಯೂ ಹಲವು ಧರ್ಮ, ಭಾಷೆ, ಆಹಾರ ಪದ್ಧತಿಯಿದೆ. ಇದ್ಯಾವುದೂ ಮತ್ತೊಂದರಂತೆ ಅಲ್ಲ. ಆದರೆ ಎಲ್ಲವೂ ಸೇರಿ ಭಾರತೀಯ ಸಂಸ್ಕೃತಿಗೆ ಮೆರುಗು ತಂದಿದೆ ಎಂದು ವಿಶ್ಲೇಷಿಸಿದರು.
ನೂರು ಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ಒಂದೇ ಒಂದು ಸಿಂಫೋನಿ ಆರ್ಕೆಸ್ಟ್ರಾ ಇದೆ. ಅದು ಸಾಯಿ ಸಿಫೋನಿ ಆರ್ಕೆಸ್ಟ್ರಾ. ನಮ್ಮ ಜನರು ಇದರ ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


