" ಅಂಗಾಂಗ ದಾನದ ಅರಿವು ಮೂಡಿಸುವುದು ಅಗತ್ಯ: ಡಾ.ರವಿಶಂಕರ್ ಶೆಟ್ಟಿ "
ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ವಿಶ್ವ ಅಂಗಾಂಗ ದಾನ ದಿನಾಚರಣೆ ಗುರುವಾರ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜೀವ ಸಾರ್ಥಕತೆಯ ರಾಜ್ಯ ಸಂಯೋಜಕ ಡಾ.ರವಿಶಂಕರ್ ಶೆಟ್ಟಿ ಮಾತನಾಡಿ "ಪರರ ಜೀವ ಉಳಿಸುವ ಅಂಗಾಂಗ ದಾನಕ್ಕಿಂತ ಮಿಗಿಲಾದ ದಾನವಿಲ್ಲ. ಜನತೆ ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ನೋಂದಣಿಯಾಗುವ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸುವ ಅನಿವಾರ್ಯತೆ ಇದೆ. ಖಾಸಗಿ ಅಸ್ಪತ್ರೆಗಳು, ರೆಡ್‌ಕ್ರಾಸ್‌ನಂತಹ ಸೇವಾ ಸಂಸ್ಥೆಗಳು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು' ಎಂದರು.
ಮಿದುಳು ನಿಷ್ಕ್ರಿಯ ಆದವರ ಅಂಗಾಂಗ ದಾನದಲ್ಲಿ (198) ಕರ್ನಾಟಕ ದೇಶದಲ್ಲಿ ತೃತೀಯ ಸ್ಥಾನದಲ್ಲಿದೆ. ರಾಜ್ಯದಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಕಿಡ್ನಿ ದಾನದ ಅಗತ್ಯವಿದೆ. ಆದರೆ ನೋಂದಣಿ ಸಂಖ್ಯೆ ತೀರಾ ಕಡಿಮೆ. ಮಂಗಳೂರು ಶಿಕ್ಷಣ ಕೇಂದ್ರವಾಗಿ ಬೆಳೆದಿದ್ದರೂ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಜನರಲ್ಲಿ ಇರುವ ತಪ್ಪು ತಿಳುವಳಿಕೆಗಳನ್ನು ನಿವಾರಿಸಿ ಅಂಗಾಂಗ ದಾನಕ್ಕೆ ಪ್ರೇರಣೆ ನೀಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾದ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಮತ್ತು ಎಎಂಸಿ ಮಂಗಳೂರು ಘಟಕದ ಅಧ್ಯಕ್ಷ ಡಾ.ಪ್ರಶಾಂತ್.ಬಿ. ಅವರು ಅಂಗಾಂಗ ದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಂಗಾಂಗ ದಾನ ಪಡೆದ ಡಾ.ಸುಭಾಶ್ಚಂದ್ರ ರೈ ಮಾತನಾಡಿ ಸಕಾಲದಲ್ಲಿ ಅಂಗಾಂಗ ದಾನ ಮಾಡಿದವರು ನನಗೆ ಮರುಜನ್ಮ ನೀಡಿದರು' ಎಂದರು.
ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೂತ್ ರೆಡ್‌ಕ್ರಾಸ್ ಉಪ ಸಮಿತಿ ನಿರ್ದೇಶಕಿ ಡಾ.ಸುಮನಾ.ಬಿ. ಮುಖ್ಯ ಅತಿಥಿಯನ್ನು ಪರಿಚಯಿಸಿದರು. ರೆಡ್‌ಕ್ರಾಸ್ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ, ರಾಘವೇಂದ್ರ ರಾವ್ ಯೇನೆಪೊಯ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ನಿತ್ಯಶ್ರೀ ಬಿ.ವಿ., ಬೆಸೆಂಟ್ ಕಾಲೇಜಿನ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ದೀಕ್ಷಿತಾ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಉಪಾಧ್ಯಕ್ಷ ಡಾ.ಬಿ. ಸಚ್ಚಿದಾನಂದ ರೈ ಸ್ವಾಗತಿಸಿ, ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಖೈರುನ್ನಿಸಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

