ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನದ ಕೊನೆಯ ದಿನವಾದ ಇಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾನ್ಯ ಕೇಂದ್ರ ರೈಲ್ವೇ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಜಿಲ್ಲೆಯ ಪ್ರಮುಖ ರೈಲ್ವೇ ಸೇವೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕರಾವಳಿ ಭಾಗದ ಪ್ರಮುಖ ಮತ್ತು ಸುದೀರ್ಘ ಕಾಲದ ಬೇಡಿಕೆಗಳಾದ- ಮಂಗಳೂರು- ಬೆಂಗಳೂರು ರೈಲು ಮಾರ್ಗದ ಮೇಲ್ದರ್ಜೇಗೇರಿಸುವಿಕೆ ಹಾಗೂ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು- ಈ ಎರಡೂ ಪ್ರಮುಖ ವಿಷಯಗಳ ಕುರಿತು ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ಸಂಸದರು ಮತ್ತೊಮ್ಮೆ ತಂದರು.
ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣವನ್ನು ಮತ್ತಷ್ಟು ಸುಗಮ ಹಾಗೂ ವೇಗಗೊಳಿಸಲು ಮಾರ್ಗದ ಮೇಲ್ದರ್ಜೇಗೇರಿಸುವಿಕೆ ಅತ್ಯಗತ್ಯವಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೆ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದರಿಂದ ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ವಿವರಿಸಿದರು.
"ನಮ್ಮ ಪ್ರದೇಶಕ್ಕೆ ಉತ್ತಮ ರೈಲ್ವೇ ಮೂಲಸೌಕರ್ಯ, ಸುಧಾರಿತ ಸೇವೆಗಳು ಮತ್ತು ಉತ್ತಮ ಸಂಪರ್ಕವನ್ನು ಒದಗಿಸುವತ್ತ ನಮ್ಮ ಸಂಪೂರ್ಣ ಪ್ರಯತ್ನ ಸಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸೂಕ್ತ ಮತ್ತು ಧನಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ."
— ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ
ಕರಾವಳಿ ಜಿಲ್ಲೆಯ ರೈಲ್ವೇ ಸಂಪರ್ಕ ಮತ್ತು ಸುಧಾರಿತ ಸೇವೆಗಳ ಕುರಿತು ಕೇಂದ್ರ ರೈಲ್ವೇ ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಕ್ರಮಗಳ ಕುರಿತು ಪರಿಶೀಲಿಸುವ ಭರವಸೆ ನೀಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

