ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಆಸ್ಪತ್ರೆ ಸಾಮರ್ಥ್ಯ ವೃದ್ಧಿಗೆ ನಾರಾಯಣ ಹೆಲ್ತ್ ಮತ್ತು ನ್ಯೂ ಡೆವಲಪ್‌ ಮೆಂಟ್ ಬ್ಯಾಂಕ್ ನಡುವೆ ಒಪ್ಪಂದ

Upayuktha
0

ಬ್ರಿಕ್ಸ್ ಆರ್ಥಿಕ ಸಚಿವರ ಸಭೆಯ ವೇಳೆ ಐತಿಹಾಸಿಕ ತಿಳುವಳಿಕಾ ಪತ್ರಕ್ಕೆ ಅಂಕಿತ: ಎನ್‌ಡಿಬಿ ಮತ್ತು ಸದಸ್ಯ ರಾಷ್ಟ್ರಗಳಿಗೆ ಉನ್ನತ ಆರೋಗ್ಯ ಸೇವಾ ಜ್ಞಾನ ವಿನಿಮಯ ಮಾಡಲಿರುವ ಬೆಂಗಳೂರು ಮೂಲದ ನಾರಾಯಣ ಹೆಲ್ತ್


ಬೆಂಗಳೂರು: ಆಗಸ್ಟ್ 13, 2026: ಜಾಗತಿಕ ಮಟ್ಟದಲ್ಲಿ ಅತ್ಯಾಧುನಿಕ, ತಂತ್ರಜ್ಞಾನ ಆಧಾರಿತ ಹಾಗೂ ರೋಗಿ-ಕೇಂದ್ರಿತ ಸ್ಮಾರ್ಟ್ ಆಸ್ಪತ್ರೆಗಳ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ನಾರಾಯಣ ಹೃದಯಾಲಯ ಲಿಮಿಟೆಡ್ (ನಾರಾಯಣ ಹೆಲ್ತ್) ಮತ್ತು ನ್ಯೂ ಡೆವಲಪ್‌ ಮೆಂಟ್ ಬ್ಯಾಂಕ್ (ಎನ್ ಡಿ ಬಿ) ನಡುವೆ ಜ್ಞಾನ ವಿನಿಮಯ ಸಹಭಾಗಿತ್ವ ಒಪ್ಪಂದ ಏರ್ಪಟ್ಟಿದೆ. ಈ ಸಹಯೋಗದ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ಅತ್ಯಂತ ದಕ್ಷ ಹಾಗೂ ತಂತ್ರಜ್ಞಾನ ಆಧಾರಿತ ಆಸ್ಪತ್ರೆ ಸೇವೆಗಳನ್ನು ಒದಗಿಸುವ ತನ್ನ ಸುದೀರ್ಘ ಅನುಭವವನ್ನು ಎನ್‌ಡಿಬಿ ಹಾಗೂ ಅದರ ಸದಸ್ಯ ದೇಶಗಳೊಂದಿಗೆ ಹಂಚಿಕೊಳ್ಳಲಿದೆ.


ಜೈಪುರದಲ್ಲಿ ನಡೆಯುತ್ತಿರುವ ಪ್ರಥಮ ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ ಗಳ ಸಭೆಯ ಹಿನ್ನೆಲೆಯಲ್ಲಿ ಈ ಐತಿಹಾಸಿಕ ತಿಳುವಳಿಕಾ ಪತ್ರಕ್ಕೆ (ಎಂಓಯು) ಎನ್‌ಡಿಬಿ ಅಧ್ಯಕ್ಷೆ ಹೆಚ್.ಇ. ಶ್ರೀಮತಿ ಡಿಲ್ಮಾ ರೌಸೆಫ್ ಹಾಗೂ ನಾರಾಯಣ ಹೆಲ್ತ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು ಸಹಿ ಹಾಕಿದರು. ಕೇಂದ್ರ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಎನ್‌ಡಿಬಿಯ ಭಾರತದ ಪರ್ಯಾಯ ಗವರ್ನರ್ ಆಗಿರುವ ಶ್ರೀಮತಿ ಅನುರಾಧಾ ಠಾಕೂರ್ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಕ್ಕೆ ಅಂಕಿತ ಬಿದ್ದಿತು.


ಈ ಪ್ರಮುಖ ಜಾಗತಿಕ ಸಹಯೋಗವು ಮುಖ್ಯವಾಗಿ ಡಿಜಿಟಲ್ ಆರೋಗ್ಯ ವ್ಯವಸ್ಥೆಗಳು, ಡೇಟಾ ಸಿಸ್ಟಮ್‌ಗಳು, ತಂತ್ರಜ್ಞಾನ ವರ್ಗಾವಣೆ ಮತ್ತು ಪರಸ್ಪರ ಜ್ಞಾನ ವಿನಿಮಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.


ಒಪ್ಪಂದದ ಕುರಿತು ಮಾತನಾಡಿದ ಎನ್‌ಡಿಬಿ ಅಧ್ಯಕ್ಷೆ ಹೆಚ್.ಇ. ಶ್ರೀಮತಿ ಡಿಲ್ಮಾ ರೌಸೆಫ್ ಅವರು, "ಆರೋಗ್ಯ ಕ್ಷೇತ್ರದಲ್ಲಿ ಶ್ರೇಷ್ಠತೆ, ಹೊಸ ಆವಿಷ್ಕಾರ, ದಕ್ಷತೆ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ವೆಚ್ಚ ಇವೆಲ್ಲವೂ ಒಟ್ಟಿಗೆ ಸಾಧ್ಯವಾಗಬಹುದು ಮತ್ತು ಇರಲೇಬೇಕು ಎಂಬುದನ್ನು ಖಚಿತಪಡಿಸಲು ಈ ಸಾಂಸ್ಥಿಕ ಪಾಲುದಾರಿಕೆ ನೆರವಾಗಲಿದೆ. ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಎನ್‌ಡಿಬಿಯ ಆದ್ಯತೆಯ ಪಥದಲ್ಲಿ ಇಂದಿನ ಈ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿದೆ" ಎಂದು ಹೇಳಿದರು.


ಭಾಗಿದಾರಿಕೆಯ ಕುರಿತು ಹರ್ಷ ವ್ಯಕ್ತಪಡಿಸಿದ ನಾರಾಯಣ ಹೆಲ್ತ್ ಸಂಸ್ಥಾಪಕ-ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, "ಈ ಜ್ಞಾನ ವಿನಿಮಯ ಸಹಯೋಗದ ಮೂಲಕ, ಉದಯೋನ್ಮುಖ ಆರ್ಥಿಕತೆಗಳಲ್ಲಿ ಅತ್ಯಂತ ಬಲವಾದ ಮತ್ತು ತಂತ್ರಜ್ಞಾನ ಆಧಾರಿತ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ನಿರ್ಮಿಸಲು ನಾವು ಎನ್‌ಡಿಬಿ ಹಾಗೂ ಅದರ ಸದಸ್ಯ ದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದರು.


ಈ ವರ್ಷದ ಮಾರ್ಚ್‌ (2026) ತಿಂಗಳಿನಲ್ಲಿ ಬೆಂಗಳೂರಿನಲ್ಲಿರುವ ನಾರಾಯಣ ಹೆಲ್ತ್ ಸಿಟಿಗೆ ಭೇಟಿ ನೀಡಿದ್ದ ಶ್ರೀಮತಿ ಡಿಲ್ಮಾ ರೌಸೆಫ್ ಅವರು, ಸಂಸ್ಥೆಯು ರೋಗಿ-ಕೇಂದ್ರಿತ ಆರೈಕೆ ಮತ್ತು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಕೈಗೆಟುಕುವ ವೆಚ್ಚದಲ್ಲಿ ನೀಡುತ್ತಿರುವ ಉನ್ನತ ಮಟ್ಟದ ಆರೋಗ್ಯ ಸೇವೆಯ ನವೀನ ಮಾದರಿಯನ್ನು ಖುದ್ದಾಗಿ ವೀಕ್ಷಿಸಿ ಶ್ಲಾಘಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.


ಸಂಸ್ಥೆಗಳ ಹಿನ್ನೆಲೆ ಮಾಹಿತಿ


ನ್ಯೂ ಡೆವಲಪ್‌ ಮೆಂಟ್ ಬ್ಯಾಂಕ್ (ಎನ್ ಡಿ ಬಿ):

ಉದಯೋನ್ಮುಖ ಮಾರುಕಟ್ಟೆಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ (ಇಎಂಡಿಸಿ) ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸುವ ಉದ್ದೇಶದಿಂದ 2015 ರಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಸೇರಿ ಈ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಅನ್ನು ಸ್ಥಾಪಿಸಿದವು. ಇದು ಜಾಗತಿಕ ಬೆಳವಣಿಗೆಗೆ ಶ್ರಮಿಸುತ್ತಿರುವ ಹಾಲಿ ಹಣಕಾಸು ಸಂಸ್ಥೆಗಳ ಪ್ರಯತ್ನಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. 2021 ರಲ್ಲಿ ತನ್ನ ಮೊದಲ ಸ್ಥಾಪಕೇತರ ಸದಸ್ಯರನ್ನು ಸೇರ್ಪಡೆಗೊಳಿಸಿಕೊಂಡ ಈ ಬ್ಯಾಂಕ್, ಪ್ರಸ್ತುತ 10 ಸದಸ್ಯ ರಾಷ್ಟ್ರಗಳನ್ನು ಹೊಂದುವ ಮೂಲಕ ತನ್ನ ವಿಸ್ತರಣೆಯನ್ನು ಮುಂದುವರಿಸಿದೆ.


ನಾರಾಯಣ ಹೆಲ್ತ್ ಕುರಿತು:

ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಈ ಸಂಸ್ಥೆಯು ಜಾಗತಿಕ ಮಟ್ಟದ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ ಸಂಸ್ಥೆಯು ಭಾರತ ಮತ್ತು ಕೆರಿಬಿಯನ್‌ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಬಹಳ ಪ್ರಸಿದ್ಧವಾಗಿದೆ. ಸಂಸ್ಥೆಯು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು 18,822ರಷ್ಟು ವೃತ್ತಿಪರರ ತಂಡವನ್ನು ಹೊಂದಿದೆ. ಇದರಲ್ಲಿ 3,868 ನುರಿತ ವೈದ್ಯರು ಮತ್ತು ತಜ್ಞರು ಇದ್ದಾರೆ. ಅತ್ಯುತ್ತಮ ಸೌಲಭ್ಯ ಮತ್ತು ತಂಡಗಳ ಮೂಲಕ ಉತ್ಕೃಷ್ಟ ಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿದೆ.


ನಾರಾಯಣ ಒನ್ ಹೆಲ್ತ್ (ಎನ್‌ಎಚ್ ಇಂಟಿಗ್ರೇಟೆಡ್ ಕೇರ್) ಮತ್ತು ನಾರಾಯಣ ಹೆಲ್ತ್ ಇನ್ಶೂರೆನ್ಸ್ ಇವು ನಾರಾಯಣ ಹೆಲ್ತ್‌ ನ ಅಂಗಸಂಸ್ಥೆಗಳಾಗಿವೆ.


ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.narayanahealth.org/


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top