ಎಸ್.ಡಿ.ಎಂ ಕಾಲೇಜು: ವಿದ್ಯಾರ್ಥಿ ತಯಾರಿಕೆಯ 30ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

Upayuktha
0

- ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಆಯೋಜನೆ

- ತಜ್ಜರಿಂದ ಉದ್ಯಮಶೀಲತೆ ಜಾಗೃತಿ ಕಾರ್ಯಾಗಾರ 

ಶಿಸ್ತು ಮತ್ತು ಸಂಯಮದಿಂದ ಉದ್ಯಮಗಳ ಬೆಳವಣಿಗೆ: ಪುನೀತ್ ರೈ 


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ ಭವಿಷ್ಯದ ನಾಯಕರನ್ನು ನಿರ್ಮಿಸುವ 'ಉದ್ಭವ -2026' ಎಂಬ ವಿದ್ಯಾರ್ಥಿಗಳ ತಯಾರಿಕೆಯ 30ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಉದ್ಯಮ ತಜ್ಜರಿಂದ ಉದ್ಯಮಶೀಲತೆಯ ಜಾಗೃತಿ ಕಾರ್ಯಾಗಾರ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. 


ನಿಟ್ಟೆಯ ಅಟಲ್ ಇನ್‌ಕ್ಯುಬೇಷನ್ ಸೆಂಟರ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪುನೀತ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ಒಂದು ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತನ್ನ ವಿದ್ಯಾಭ್ಯಾಸದ ನಡುವೆಯೆ ನಿರಂತರವಾದ ಪ್ರಯತ್ನ ಮತ್ತು ಪ್ರಾಯೋಗಿಕ ಪರಿಶ್ರಮದಿಂದ ಉದ್ದಿಮೆದಾರಾಗಿ ಬೆಳೆದಿರುವುದು ಕಾಲೇಜು ಹಾಗೂ ಉದ್ಯಮ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ. ಬಹುತೇಕ ವಿದ್ಯಾರ್ಥಿಗಳು ಉದ್ಯೋಗ ಹುಡುಕಾಡುತ್ತಿರುವ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಸುವಂತವರಾಗಿರುವು ನಿಜಕ್ಕೂ ಶ್ಲಾಘನೀಯ.


ನಮ್ಮಲ್ಲಿರುವ ಹೊಸ ಆಲೋಚನೆ, ಸೃಜನಶೀಲತೆ, ತಾಂತ್ರಿಕ ಜ್ಞಾನ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವೇ ಉದ್ಯಮಶೀಲತೆಯ ಮೂಲ ಅಡಿಪಾಯ.

ಮೊದಲ ಪ್ರಯತ್ನದಲ್ಲೇ ಎಲ್ಲವೂ ಯಶಸ್ವಿಯಾಗಬೇಕೆಂದಿಲ್ಲ. ಕೆಲವು ಆಲೋಚನೆ ಉತ್ಪನ್ನಗಳು ವಿಫಲವಾಗಬಹುದು. ಆದರೆ ಪ್ರತಿಯೊಂದು ವಿಫಲ ಪ್ರಯತ್ನವೂ ನಮಗೆ ಒಂದು ಹೊಸ ಅನುಭವವನ್ನು ಕಲಿಸುತ್ತದೆ. ಸಣ್ಣ ಕನಸಿನಿಂದ ಆರಂಭವಾಗುವ ಪ್ರತಿಯೊಂದು ಕಾರ್ಯಗಳು ವಂಚನೆ ಮತ್ತು ಅವಿಶ್ವಾಸಕ್ಕೆ ಸುಳಿಯದೆ ಇದ್ದಾಗ ಸಮಾಜದ ಬಹುದೊಡ್ಡ ಆಸ್ತಿಯಾಗಿ ಬೆಳೆಯುತ್ತದೆ. ಉದ್ದಿಮೆಯಲ್ಲಿ ಶಿಸ್ತು ಮತ್ತು ನೈತಿಕತೆಯನ್ನು ಸದಾ ಪಾಲಿಸಿದರೆ ಹಂತ ಹಂತವಾಗಿ ಬೆಳೆಯಲು ಸಾಧ್ಯ. ವಿದ್ಯಾರ್ಥಿಗಳು ಉದ್ದಿಮೆಯನ್ನು ಸೃಷ್ಟಿಮಾಡುವ ಜೊತೆಗೆ ಉದ್ದಿಮೆಯನ್ನು ನಿರಂತರವಾಗಿ ನಿರ್ವಹಿಸುವ ಮತ್ತು ಸುಸ್ಥಿರವಾಗಿ ಉಳಿಸಿಕೊಳ್ಳವ ಕೌಶಲ್ಯ ಬೆಳೆಸಿಕೊಳ್ಳಬೇಕು. ತಮ್ಮ ಉತ್ಪನ್ನವನ್ನು  ತಮ್ಮದೇ ಹೊಸ ಬ್ರಾಂಡ್ ಉಳಿದುಕೊಳ್ಳುವಂತೆ ಮಾಡಿ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಸಂಸ್ಥೆ ವಿಪುಲವಾದ ಅವಕಾಶ ಮತ್ತು ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಪೋಷಕರ ಪ್ರೋತ್ಸಾಹ ಮತ್ತು ಉಪನ್ಯಾಸಕರ ಮಾರ್ಗದರ್ಶನದಿಂದ ಬದುಕಿನ ಗುರಿಯತ್ತ ಹೆಜ್ಜೆ ಹಾಕಬೇಕು. ನಕಾರಾತ್ಮಕ ಚಿಂತನೆಗಳಿಗೆ ತಲೆದೂಗದೆ ಸಕಾರಾತ್ಮಕ ಯೋಚನೆ ಮತ್ತು ಯೋಜನೆಯೊಂದಿಗೆ ಮುಂದೆ ಸಾಗಬೇಕು. ವಿದ್ಯಾರ್ಥಿಗಳು ಯಾವುದೇ ಕ್ಷೇತ್ರ ತಲುಪಿದರು ಶಿಸ್ತು ಮತ್ತು ಸಂಯಮವನ್ನು ಪಾಲಿಸುವುದರ ಜೊತೆಗೆ ಸಮಾಜದಲ್ಲಾಗುವ ಹೊಸ ಬದಲಾವಣೆಗೆ ಅನುಗುಣವಾಗಿ ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.


ವಿದ್ಯಾರ್ಥಿ ತಯಾರಿಕೆಯ  ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಭೇಟಿ ನೀಡಿ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು. 


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರದ ಡೀನ್  ಡಾ. ಸೌಮ್ಯ ಬಿ.ಪಿ., ಇನ್‌ಕ್ಯುಬೇಷನ್ ಮತ್ತು ಎಂಟರ್‌ಪ್ರೆನರ್‌ಶಿಪ್ ಡೆವಲಪ್‌ಮೆಂಟ್ ಸೆಲ್ ಸಂಯೋಜಕರಾದ ಡಾ. ಶಶಿಪ್ರಭಾ, ಡೀನ್, ಬಿ.ವೊಕ್ ಕೋರ್ಸ್ ಸಂಯೋಜಕ ಡಾ. ಸುವೀರ್ ಜೈನ್, ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಆಶ್ವಿತ್ ಎಚ್.ಆರ್., ಉಪನ್ಯಾಸಕರಾದ ಪ್ರವೀಣ ಡಿ, ಮಾಧುರಿ ಗೌಡ ಮತ್ತು ಡಾ. ಶಶಾಂಕ್ ಬಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಡಿ ಸಂಯೋಜಿಸಿದರು.

 

30 ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ:


ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಸ್ನಾನದ ಸಾಬೂನು, ಹ್ಯಾಂಡ್‌ವಾಶ್, ಪರ್ಫ್ಯೂಮ್, ಹೇರ್ ಆಯಿಲ್, ರೋಸ್ ವಾಟರ್, ಹೇರ್ ಸೀರಮ್, ಫೇಸ್ ಕ್ರೀಮ್, ಆಭರಣಗಳು, ವಿವಿಧ ಆಕ್ಸೆಸರೀಸ್, ಕೀ ಚೈನ್‌ಗಳು, ಬೊಕೆಗಳು, ಕಸ್ಟಮೈಸ್ ಮಾಡಿದ ಟಿ-ಶರ್ಟ್‌ಗಳು, ಡ್ರ್ಯಾಗನ್ ಫ್ರೂಟ್ ಜ್ಯೂಸ್, ತೆಂಗಿನಕಾಯಿ ಮಿಲ್ಕ್‌ಶೇಕ್, ಪರಿಸರ ಸ್ನೇಹಿ ಉತ್ಪನ್ನಗಳು, ಕುನಾಫಾ ಕೇಕ್, ಸಾಂಬಾರ್ ಪೌಡರ್, ಚಟ್ನಿ ಪೌಡರ್ ಸೇರಿದಂತೆ ಹಲವು ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಯಿತು. ವಿದ್ಯಾರ್ಥಿಗಳು ಉತ್ಪನ್ನಗಳಿಗೆ ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ಪ್ರಚಾರ ತಂತ್ರಗಳನ್ನು ಅಳವಡಿಸಿಕೊಂಡು, ಉತ್ಪನ್ನಗಳ ವೈಶಿಷ್ಟ್ಯ ಹಾಗೂ ಪ್ರಯೋಜನಗಳನ್ನು ಗ್ರಾಹಕರಿಗೆ ವಿವರಿಸಿದರು.


-ಕೋಟ್ :


2019 ರ ಸಂದರ್ಭದಲ್ಲಿ ಯುಜಿಸಿಯ ಮಾರ್ಗಸೂಚಿಯಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಬಿ ಯಶೋವರ್ಮರವರ ಮಾರ್ಗದರ್ಶನದಲ್ಲಿ ನೂತನವಾಗಿ ಬಿವೋಕ್ ಕೋರ್ಸ್ ಆರಂಭವಾದಾಗ ಹಲವು ಸವಾಲುಗಳಿದ್ದವು. ಆದರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಮೇಲಿನ ಭರವಸೆಯಿಂದ ಧೈರ್ಯದಿಂದ ಮುಂದೆ ಹೆಜ್ಜೆ ಹಾಕಿತು. ಈ ನಡುವೆ ಇಂದು ಬಿವೋಕ್ ಕೋರ್ಸ್ ನ ವಿದ್ಯಾರ್ಥಿಗಳು ಉತ್ಪನ್ನಗಳ ತಯಾರಿಕೆಯ ಹಂತದವರೆಗೆ ಬೆಳೆದು ನಿಂತಿರುವುದು ಕೋರ್ಸ್ ಆರಂಭದ ಆಶಯವನ್ನು ಈಡೇರಿಸಿದಂತಾಗಿದೆ."


- ಪೂರನ್ ವರ್ಮ 

ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಸಿಇಒ

ಎಸ್.ಡಿ.ಎಂ ಶಿಕ್ಷಣ ಸಂಸ್ಥೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top