ಪುತ್ತೂರು: ಪ್ರಸಾದಿನಿ ಆಯುರ್‌ನಿಕೇತನ ಆಯುರ್ವೇದ ಆಸ್ಪತ್ರೆ ,ನರಿಮೊಗರು , ಇಂದು ಆಸ್ಪತ್ರೆಯ ಸಿಬ್ಬಂದಿಗಾಗಿ ಸಾಮಾನ್ಯ ತ್ಯಾಜ್ಯ ನಿರ್ವಹಣೆ ಹಾಗೂ ಜೈವ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಸ್ಪತ್ರೆಯಲ್ಲಿ ತ್ಯಾಜ್ಯವನ್ನು ಸುರಕ್ಷಿತವಾಗಿ, ವ್ಯವಸ್ಥಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ನಿರ್ವಹಿಸುವ ಕುರಿತು ಸಿಬ್ಬಂದಿಯಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ತ್ಯಾಜ್ಯಗಳ ಸರಿಯಾದ ವಿಂಗಡಣೆ, ಸಂಗ್ರಹಣೆ, ಸಾಗಣೆ, ತಾತ್ಕಾಲಿಕ ಶೇಖರಣೆ ಮತ್ತು ಸೂಕ್ತ ವಿಲೇವಾರಿ ಕುರಿತು ಮಾಹಿತಿ ನೀಡಲಾಯಿತು. ಜೈವ ವೈದ್ಯಕೀಯ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಉಂಟಾಗಬಹುದಾದ ಆರೋಗ್ಯ ಹಾಗೂ ಪರಿಸರದ ಅಪಾಯಗಳ ಬಗ್ಗೆಯೂ ಸಿಬ್ಬಂದಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಾಂತ್, ಸಹಾಯಕ ಪ್ರಾಧ್ಯಾಪಕರು ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು , ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ , ನೆಹರೂನಗರ , ಪುತ್ತೂರು ಇವರು ಭಾಗವಹಿಸಿ ತರಬೇತಿ ನೀಡಿದರು. ತ್ಯಾಜ್ಯ ನಿರ್ವಹಣೆಯ ಮೂಲಭೂತ ತತ್ವಗಳು, ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲಿಯೇ ಸರಿಯಾದ ವಿಂಗಡಣೆಯ ಮಹತ್ವ ಹಾಗೂ ಆರೋಗ್ಯ ಸಿಬ್ಬಂದಿಯ ಜವಾಬ್ದಾರಿಗಳ ಕುರಿತು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಬಣ್ಣ ಆಧಾರಿತ ತ್ಯಾಜ್ಯ ವಿಂಗಡಣೆ ಪದ್ಧತಿ, ಜೈವ ವೈದ್ಯಕೀಯ ತ್ಯಾಜ್ಯದ ಸುರಕ್ಷಿತ ನಿರ್ವಹಣೆ, ಆಕಸ್ಮಿಕ ಸಂಪರ್ಕದಿಂದ ರಕ್ಷಣೆ, ಸೂಕ್ತ ವೈಯಕ್ತಿಕ ಸುರಕ್ಷತಾ ಸಾಧನಗಳ (PPE) ಬಳಕೆ ಹಾಗೂ ಅಗತ್ಯ ದಾಖಲೆಗಳ ನಿರ್ವಹಣೆ ಕುರಿತು ಒತ್ತು ನೀಡಲಾಯಿತು.
ಆಸ್ಪತ್ರೆಯ ಆಡಳಿತ ಮಂಡಳಿಯು ನಿಯಮಿತವಾಗಿ ಇಂತಹ ಸಿಬ್ಬಂದಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಆಸ್ಪತ್ರೆಯ ಗುಣಮಟ್ಟ, ಸುರಕ್ಷತೆ, ಸೋಂಕು ನಿಯಂತ್ರಣ ಬಲಪಡಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಆಯುರ್ವೇದ ತಜ್ಞ ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ವಂದಿಸಿದರು .
ಆಸ್ಪತ್ರೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಂಪನ್ಮೂಲ ವ್ಯಕ್ತಿಯೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಪನ್ಮೂಲ ವ್ಯಕ್ತಿ ಹಾಗೂ ಎಲ್ಲಾ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಈ ಕಾರ್ಯಕ್ರಮವು ಸುರಕ್ಷಿತ ಆರೋಗ್ಯ ಸೇವೆ, ಪರಿಸರ ಸಂರಕ್ಷಣೆ ಹಾಗೂ ಆಸ್ಪತ್ರೆಯ ಗುಣಮಟ್ಟದ ನಿರಂತರ ಸುಧಾರಣೆಯತ್ತ ಪ್ರಸಾದಿನೀ ಆಯುರ್‌ನಿಕೇತನ ಆಯುರ್ವೇದ ಆಸ್ಪತ್ರೆಯ ಬದ್ಧತೆಯನ್ನು ಮತ್ತಷ್ಟು ಪ್ರತಿಬಿಂಬಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
