ಮಂಗಳೂರು: ಇತಿಹಾಸ ಹೇಳದ ಅದೆಷ್ಟೋ ವಿಷಯಗಳನ್ನು ಅಂಡಮಾನ್ ಇತಿಹಾಸದೊಳಗೊಂದು ಪಯಣ ಪುಸ್ತಕ ಮಾಹಿತಿ ನೀಡುತ್ತದೆ. ಅನುವಾದ ಕೃತಿ ಎನಿಸಿಕೊಳ್ಳದೇ ಓದಿಸಿಕೊಂಡು ಸಾಗುವುದೇ ಈ ಕೃತಿಯ ವಿಶೇಷ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಜಯ ಪೂಣಚ್ಚ ತಂಬಂಡ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ಅನೇಕಾಂತ ಫೌಂಡೇಷನ್ ಟ್ರಸ್ಟ್, ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಡಾ. ರಾಜಲಕ್ಷ್ಮಿ ಅವರ ಅನುವಾದಿತ ಕೃತಿ ಅಂಡಮಾನ್ ಇತಿಹಾಸದೊಳಗೊಂದು ಪಯಣ ಪುಸ್ತಕ ಬಿಡುಗಡೆ ಹಾಗೂ ಅಂಡಮಾನ್ ಇತಿಹಾಸ: ದುಡಿದ ಕೈಗಳು ಮಿಡಿದ ಮನಗಳು ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಂಡಮಾನ್ ಹೆಸರು ಕೇಳಿದ ಕೂಡಲೇ ಇಂದಿಗೂ ಅಲ್ಲಿನ ಜನರ ವಿಚಿತ್ರ ವರ್ತನೆಯೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆದರೆ, ಬ್ರಿಟಿಷರು ವಸಾಹತು ಪ್ರದೇಶವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟ ಹಾಗೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಲ್ಲಿ ನೆಲೆಸಿದ್ದ ಖೈದಿಗಳು ಮತ್ತು ಮೂಲ ನಿವಾಸಿಗಳ ನಿತ್ಯದ ಬದುಕಿನ ಅನಾವರಣವನ್ನು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಅಲ್ಲದೇ, ಕ್ಷುಲ್ಲಕ ಕಾರಣಕ್ಕಾಗಿ ಮಾಡಿದ ಅಪರಾಧಕ್ಕೆ ಶಿಕ್ಷೆಯ ಭಾಗವಾಗಿ ಇಲ್ಲಿ ನೆಲೆಸುವ ಮತ್ತು ತಮ್ಮ ಕುಟುಂಬದಿಂದ ತ್ಯಜಿಸಲ್ಪಟ್ಟ ಮಹಿಳಾ ಖೈದಿಗಳ ಮನೋವೇದನೆಯನ್ನು ಎಳೆ ಎಳೆಯಾಗಿ ಕೃತಿಯಲ್ಲಿ ತೆರೆದಿಡಲಾಗಿದೆ ಎಂದು ಹೇಳಿದರು.
ಈ ರೀತಿಯ ವೇದನೆ ಒಂದೆಡೆಯಾದರೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಗೆ ಬೆಂಬಲ ನೀಡಿದ ಜಪಾನೀ ಸೈನಿಕರು ಒಂದು ಇಲ್ಲಿ ನೆಲೆಸಿ ಅನುಭವಿಸುವ ಸಾಂಸ್ಕೃತಿಕ ತಲ್ಲಣ, ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕಣ್ಣಿಗೆ ಕಟ್ಟುವಂತೆ ಕಥೆ ರೂಪದಲ್ಲಿ ನಿರೂಪಿಸಿರುವುದು ವಿಶೇಷವಾಗಿ ಚಿತ್ರಿಸಲಾಗಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಯಾರು ಅವರು ದಿಟ್ಟ ಹೆಜ್ಜೆಯ ಗಟ್ಟಿಗಿತ್ತಿಯರು ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರೆ, ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಗಣಪತಿ ಗೌಡ ಎಸ್. ಅವರು ವಸಾಹತುಶಾಹಿ ಪ್ರಭುತ್ವ ಮತ್ತು ಪ್ರತಿರೋಧ ವಿಷಯದ ಕುರಿತು ಮಾತನಾಡಿದರು.
ಕೃತಿಯ ಲೇಖಕಿ ಡಾ. ರಾಜಲಕ್ಷ್ಮಿ ಎನ್. ಕೆ., ಅಂಡಮಾನ್ ಕೇವಲ ಇತಿಹಾಸ, ರಕ್ತದ ಕಲೆ ಇರುವ ನೆಲವಲ್ಲ, ಬದಲಾಗಿ ಅಲ್ಲಿನ ಜನರ ಆರ್ತಧ್ವನಿಯನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಕೇವಲ ಪಠ್ಯ ಪುಸ್ತಕದ ವಿಷಯವಷ್ಟೇ ಇತಿಹಾಸವಾಗಲು ಸಾಧ್ಯವಿಲ್ಲ. ಅದರಾಚೆಗೆ ಇರುವ ಬದುಕಿನ ತಲ್ಲಣಗಳನ್ನು, ಭರವಸೆಯನ್ನು ದಾಖಲಿಸಲು ಪ್ರೇರೇಪಣೆ ನೀಡಿತು. ಹಿಂದಿ ಭಾಷೆಯಲ್ಲಿ ಶಕುಂತಲಾ ಶಿವರಾಂ ಅವರು ಬರೆದ ಕೃತಿಯನ್ನು ಈಗಾಗಲೇ ಇಂಗ್ಲಿಷ್ ಭಾಷೆಗೆ ಅನುವಾದ ಮಾಡಲಾಗಿದೆ ಎಂದು ಪ್ರಾಸ್ತಾವಿಕವಾಗಿ ಹೇಳಿದರು.
ಮಹಿಳೆಯದು ವ್ಯವಸ್ಥೆಯ ಭಾಗವಾಗಿದ್ದರೂ ಅವರ ಪಾತ್ರ ಎಂದಿಗೂ ಗೌಣವಾಗಿರುವ ಅವರ ದೃಷ್ಟಿಕೋನದಲ್ಲಿ ಹಾಗೂ ದೇಶ ನಿರ್ಮಾಣ ಮಾಡುವ ಗುರುತರವಾದ ಜವಾಬ್ದಾರಿಯ ಹಿನ್ನಲೆಯಲ್ಲಿ ಈ ಕೃತಿ ಸಹಾಯ ಮಾಡಲಿ ಎಂಬ ಆಶಯದೊಂದಿಗೆ ರಚನೆ ಮಾಡಲಾಗಿದೆ ಎಂದು ವಿವರಿಸಿದರು.
ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ವೇಳೆ ಅನೇಕಾಂತ ಫೌಂಡೇಶನ್ ಟ್ರಸ್ಟ್ನ ಡಾ. ಉದಯ ಕುಮಾರ್ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ, ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಪದಾಧಿಕಾರಿಗಳು ಸೇರಿದಂತೆ ನಾನಾ ಗಣ್ಯರು ಭಾಗವಹಿಸಿದ್ದರು.

