ಮಂಗಳೂರಿನಲ್ಲಿ ಆಗಸ್ಟ್ 16ರಿಂದ 'ಪುಸ್ತಕ ಹಬ್ಬ 2026': ಮೂರು ದಿನಗಳ ಬೃಹತ್ ಸಾಹಿತ್ಯ-ಸಾಂಸ್ಕೃತಿಕ ಉತ್ಸವ

Upayuktha
0

 

ಮಂಗಳೂರು: ಕಳೆದ ಐದು ದಶಕಗಳಿಂದ ವೈಚಾರಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 'ಸಾಹಿತ್ಯ ಕೇಂದ್ರ ಮಂಗಳೂರು' ಮತ್ತು 'ಕೇಶವ ಸ್ಮೃತಿ ಸಂವರ್ಧನ ಸಮಿತಿ'ಯ ಸಹಯೋಗದಲ್ಲಿ ಇದೇ ಆಗಸ್ಟ್ 16, 17 ಮತ್ತು 18ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ "ಪುಸ್ತಕ ಹಬ್ಬ 2026" ಸಾಹಿತ್ಯಿಕ ಸಂಭ್ರಮ ಆಯೋಜಿತಗೊಂಡಿದೆ.


ಆಗಸ್ಟ್ 16ರ ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಖ್ಯಾತ ಲೇಖಕ ಹಾಗೂ 'ಕನ್ನಡಪ್ರಭ' ಸಂಪಾದಕರಾದ ಜೋಗಿ (ಗಿರೀಶ್ ರಾವ್ ಹತ್ತಾರ್) ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಅಂದು ಮಧ್ಯಾಹ್ನ 12.15ಕ್ಕೆ ಡಾ. ಧನಂಜಯ ಕುಂಬ್ಳೆ ಅವರ ಅಧ್ಯಕ್ಷತೆಯಲ್ಲಿ 'ಬಹುಭಾಷಾ ಕವಿಗೋಷ್ಟಿ', ಮಧ್ಯಾಹ್ನ 2.00 ಗಂಟೆಗೆ ವಿದ್ವಾನ್ ಮಹೇಶ್ ಪದ್ಯಣ ಮತ್ತು ಬಳಗದವರಿಂದ 'ಶಾಸ್ತ್ರೀಯ ಸುಗಮ ಸಂಗೀತ', ಮಧ್ಯಾಹ್ನ 3.30ಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ 'ಸಾಂಸ್ಕೃತಿಕ ವೈಭವ' ಹಾಗೂ ಸಂಜೆ 5.30ಕ್ಕೆ ಎಸ್.ಡಿ.ಎಂ. ರಂಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ 'ಬೇಂದ್ರೆ ಅಂದ್ರೆ?' ನಾಟಕ ಪ್ರದರ್ಶನ ಜರುಗಲಿದೆ.


ಎರಡನೇ ದಿನವಾದ ಆಗಸ್ಟ್ 17ರ ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಕಲಾಭಿ ಥಿಯೇಟರ್ ಎಕ್ಸ್‌ಪ್ರೆಸ್ ಪ್ರಸ್ತುತಪಡಿಸುವ 'ಅಜ್ಜಿ ಕಥೆಗಳು' ಕಾರ್ಯಕ್ರಮ ನೆರವೇರಲಿದೆ. ಮಧ್ಯಾಹ್ನ 2.00 ಗಂಟೆಗೆ ಆಳ್ವಾಸ್ ರಂಗಶಾಲೆಯ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಹಾಗೂ ಸಂಜೆ 5.00 ಗಂಟೆಗೆ ನಾಡಿನ ಖ್ಯಾತ ಅರ್ಥಧಾರಿಗಳಿಂದ 'ಶ್ರವಣ ಭಕ್ತ ಪರೀಕ್ಷಿತ್' ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ.


ಅಂತಿಮ ದಿನವಾದ ಆಗಸ್ಟ್ 18ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಡಾ. ಪಾದೇಕಲ್ಲು ವಿಷ್ಣು ಭಟ್ ಅವರ ಅಧ್ಯಕ್ಷತೆಯಲ್ಲಿ 'ಸಾಹಿತ್ಯ ಕಥನ' ವಿಚಾರ ಗೋಷ್ಠಿ ನಡೆಯಲಿದ್ದು, ಡಾ. ವೀಣಾ ಬನ್ನಂಜೆ ಮತ್ತು ಶ್ರೀಕಾಂತ ಶೆಟ್ಟಿ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2.00 ಗಂಟೆಗೆ ವಿಕಾಸ್ ರಾಜ್ ಪೆರುವಾಯಿ ಅವರ ಸಮನ್ವಯತೆಯಲ್ಲಿ 'ಮೊಬೈಲ್ ಯುಗದಲ್ಲಿ ಪುಸ್ತಕ' ಕುರಿತು ವಿದ್ಯಾರ್ಥಿ ಗೋಷ್ಠಿ ಜರುಗಲಿದ್ದು, ವಿಜೇತ್ ಶೆಟ್ಟಿ ಮಂಜನಾಡಿ, ಪೂರ್ಣಿಮಾ, ಧಾರಿಣಿ ಕುಲಕರ್ಣಿ ಹಾಗೂ ರಂಗನಾಥ ಚಿತ್ರದುರ್ಗ ಭಾಗವಹಿಸಲಿದ್ದಾರೆ.


ಅಂದು ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ್ ವಹಿಸಲಿದ್ದು, ಹಿರಿಯ ಸಾಹಿತಿ ಹಾಗೂ ರಾ. ಸ್ವ. ಸಂಘದ ಪ್ರಾಂತ ಬೌದ್ಧಿಕ ಪ್ರಮುಖ್ ಶ್ರೀ ಕೃಷ್ಣಪ್ರಸಾದ್ ಬದಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ 6.00 ಗಂಟೆಗೆ ಕಲಾಭಿ ಥಿಯೇಟರ್ ಪ್ರಸ್ತುತಪಡಿಸುವ 'ಮಾರಿ ಕಾಡು' ತುಳು ನಾಟಕದೊಂದಿಗೆ ಈ ಮೂರು ದಿನಗಳ ಉತ್ಸವ ಮುಕ್ತಾಯಗೊಳ್ಳಲಿದೆ.


ಈ ಮೂರು ದಿನಗಳ ಕಾಲ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ರಾಜ್ಯಮಟ್ಟದ ಪ್ರಖ್ಯಾತ ಲೇಖಕರ ಭೇಟಿ, ಸಾಹಿತ್ಯಿಕ ಸ್ಪರ್ಧೆಗಳು ಹಾಗೂ ಚಲನಚಿತ್ರ ಪ್ರದರ್ಶನಗಳು ಸಾರ್ವಜನಿಕರಿಗಾಗಿ ಲಭ್ಯವಿರಲಿವೆ. ಪುಸ್ತಕ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top