ಕಥೆ: ವಿಧಿಯ ಹೊಸ್ತಿಲಲ್ಲಿ

Upayuktha
0

 



ಭೂಮಿ...

ಆ ಹೆಸರಿನಲ್ಲೇ ಒಂದು ಮಣ್ಣಿನ ಸುವಾಸನೆ ಇತ್ತು.ಅವಳು ನೋಡಲು ಸುಂದರವಾಗಿದ್ದಳು. ಆದರೆ ಅವಳ ಸೌಂದರ್ಯಕ್ಕಿಂತಲೂ ಅವಳನ್ನು ವಿಭಿನ್ನವಾಗಿಸುತ್ತಿದ್ದದ್ದು ಅವಳೊಳಗಿನ ಜಗತ್ತು. ಅವಳು ಶಾಸ್ತ್ರೀಯ ನೃತ್ಯಗಾರ್ತಿ. ವೇದಿಕೆಯ ಮೇಲೆ ನಿಂತಾಗ ಅವಳ ಹೆಜ್ಜೆಗಳು ತಾಳಕ್ಕೆ ಮಾತನಾಡುತ್ತಿದ್ದವು. ಕಾರ್ಯಕ್ರಮ ನಿರೂಪಕಿಯಾಗಿ ಮೈಕ್ ಹಿಡಿದಾಗ ಅವಳ ಧ್ವನಿಯಲ್ಲಿ ಆತ್ಮವಿಶ್ವಾಸ ಇತ್ತು. ಕವಿತೆ ಬರೆಯುವಾಗ ಮಾತ್ರ ಅವಳ ಮನಸ್ಸಿನಲ್ಲಿದ್ದ ಭಾವನೆಗಳು ಪದಗಳಾಗಿ ಹರಿದು ಬರುತ್ತಿದ್ದವು.

ಆದರೆ ಅವಳ ಮಾತಿನಲ್ಲಿ ಒಂದು ಚಿಕ್ಕ ಅಪೂರ್ಣತೆ ಇತ್ತು. ಕೆಲವು ಅಕ್ಷರಗಳನ್ನು ಉಚ್ಚರಿಸುವಾಗ ಅವಳ ನಾಲಿಗೆ ಸ್ವಲ್ಪ ತಡವರಿಸುತ್ತಿತ್ತು. ಅದು ಅವಳಿಗೆ ಕೆಲವೊಮ್ಮೆ ಮುಜುಗರವಾಗುತ್ತಿತ್ತು. ಆದರೂ ಅವಳನ್ನು ಅರಿತವರು ಹೇಳುತ್ತಿದ್ದರು, “ಭೂಮಿಯ ಮಾತಿನಲ್ಲಿ ಸ್ವಲ್ಪ ತಡವರಿಕೆ ಇರಬಹುದು... ಆದರೆ ಅವಳ ಮನಸ್ಸಿನಲ್ಲಿ ಯಾವುದೇ ತಡವರಿಕೆ ಇಲ್ಲ.”

ಭೂಮಿ ಮಧ್ಯಮ ವರ್ಗ ಮತ್ತು ಶ್ರೀಮಂತಿಕೆಯ ನಡುವಿನ ಜೀವನದಲ್ಲಿ ಬೆಳೆದ ಹುಡುಗಿ. ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ಹಣವೇ ಎಲ್ಲವೂ ಎಂದು ನಂಬುವಷ್ಟು ಶ್ರೀಮಂತಿಕೆಯೂ ಇರಲಿಲ್ಲ.ಅವಳ ತಂದೆ-ತಾಯಿ ಅವಳ ಕನಸುಗಳಿಗೆ ಬೆಂಬಲವಾಗಿದ್ದರು. ಅವಳು ಈಗ ತನ್ನ ಬ್ಯಾಚುಲರ್ಸ್ ಪದವಿಯನ್ನು ಮಾಡುತ್ತಿದ್ದಳು. ಅವಳ ಜೀವನದಲ್ಲಿ ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು. ಆದರೆ...

ಒಂದು ಕಾಲದಲ್ಲಿ ಅವಳ ಹೃದಯದಲ್ಲಿ ಯಾರೋ ಒಬ್ಬನಿಗಾಗಿ ಜಾಗವಿತ್ತು. ಅದು ಪ್ರೀತಿ ಎಂದು ಹೇಳಲು ಸಾಧ್ಯವಿಲ್ಲ. ಸಂಬಂಧ ಎಂದು ಕರೆಯಲು ಸಾಧ್ಯವಿಲ್ಲ. ಅದು ಒಂದು ಹೆಸರಿಲ್ಲದ ಬಂಧ. ಒಂದು ರೀತಿಯ situationship. ಆ ವ್ಯಕ್ತಿ ಅವಳ ಜೀವನಕ್ಕೆ ಬಂದಿದ್ದ. ಅವಳ ಜೊತೆ ಮಾತನಾಡಿದ್ದ. ಅವಳನ್ನು ತನ್ನವಳಂತೆ ಭಾವಿಸುವಂತೆ ಮಾಡಿದ್ದ. ಅವಳಿಗೆ ಅವನ ಮೇಲೆ ನಂಬಿಕೆ ಮೂಡಿಸಿದ್ದ.

ಆದರೆ ಒಂದು ದಿನ... ಯಾವುದೇ ಸರಿಯಾದ ಕಾರಣವಿಲ್ಲದೆ ಅವನು ಆ ಬಂಧವನ್ನೇ ಮುರಿದು ಹೊರಟುಹೋದ. “ಇದು ಮುಂದುವರಿಯುವುದಿಲ್ಲ.” ಅಷ್ಟೇ. ಯಾವುದೇ ಸ್ಪಷ್ಟ ಕಾರಣವಿಲ್ಲ. ಯಾವುದೇ ಸರಿಯಾದ ವಿವರಣೆಯಿಲ್ಲ. ಅವಳಿಗೆ ಉಳಿದಿದ್ದು ಮಾತ್ರ ನೂರಾರು ಪ್ರಶ್ನೆಗಳು. 

“ನನ್ನ ತಪ್ಪೇನು?”

“ನಾನು ಏನು ಮಾಡಿದೆ?”

“ಅವನಿಗೆ ನಾನು ಅಷ್ಟು ಮುಖ್ಯವಾಗಿರಲಿಲ್ಲವೇ?” ಕೆಲವು ದಿನಗಳು ಅವಳು ತನ್ನನ್ನೇ ಪ್ರಶ್ನಿಸಿಕೊಂಡಳು.

ಆಮೇಲೆ ಒಂದು ದಿನ ಕನ್ನಡಿಯ ಮುಂದೆ ನಿಂತು ತನ್ನನ್ನೇ ನೋಡಿಕೊಂಡು ಹೇಳಿಕೊಂಡಳು, “ಸಾಕು ಭೂಮಿ... ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕೆಂದಿಲ್ಲ. ”ಆ ದಿನದಿಂದ ಅವಳು ತನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಆರಂಭಿಸಿದಳು. ಓದು, ನೃತ್ಯ, ಕವಿತೆ, ಕಾರ್ಯಕ್ರಮಗಳು ಅವಳ ಕನಸುಗಳು. ಅವಳಿಗೆ ಪ್ರೀತಿ ಬೇಡವಾಗಿರಲಿಲ್ಲ. ಆದರೆ ಮತ್ತೊಮ್ಮೆ ಯಾರನ್ನಾದರೂ ನಂಬಿ ತನ್ನನ್ನು ಕಳೆದುಕೊಳ್ಳಲು ಅವಳು ಸಿದ್ಧಳಿರಲಿಲ್ಲ.

ಆ ಸಮಯದಲ್ಲೇ ಅವಳ ಜೀವನಕ್ಕೆ ಬಂದವನು... ಆದಿತ್ಯ.
ಆದಿತ್ಯ ಒಂದು ಮಧ್ಯಮ ವರ್ಗದ ಕುಟುಂಬದ ಹುಡುಗ. ಅವನ ತಂದೆ ಸಣ್ಣ ಉದ್ಯೋಗ ಮಾಡುತ್ತಿದ್ದರು. ತಾಯಿ ಮನೆಯನ್ನೇ ನೋಡಿಕೊಳ್ಳುತ್ತಿದ್ದರು. ಅವನ ಬಳಿ ದೊಡ್ಡ ಕಾರು ಇರಲಿಲ್ಲ. ಅವನ ಜೀವನದಲ್ಲಿ ದುಬಾರಿ ವಸ್ತುಗಳಿರಲಿಲ್ಲ. ಆದರೆ ಅವನ ಬಳಿ ಒಂದು ದೊಡ್ಡ ಗುಣವಿತ್ತು. ಅವನು ಮನುಷ್ಯರನ್ನು ಅವರ ಬಳಿ ಇರುವುದರಿಂದ ಅಳೆಯುತ್ತಿರಲಿಲ್ಲ. ಅವನು ಭೂಮಿಯನ್ನು ಮೊದಲ ಬಾರಿ ಕಾಲೇಜಿನ ಒಂದು ಕಾರ್ಯಕ್ರಮದಲ್ಲಿ ನೋಡಿದ್ದ. ಅವಳು ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದಳು. ಕಾರ್ಯಕ್ರಮ ಮುಗಿದ ಮೇಲೆ ಆದಿತ್ಯ ಅವಳ ಬಳಿ ಬಂದು, “ನೀನು ತುಂಬಾ ಚೆನ್ನಾಗಿ anchor ಮಾಡಿದೆ,” ಎಂದ. 

ಭೂಮಿ ನಗುತ್ತಾ,“Thank you.”

“ಒಂದು ವಿಷಯ ಕೇಳಬಹುದಾ?”ಎಂದ ಆದಿತ್ಯ. ಭೂಮಿ “ಹೇಳು” ಎಂದಳು. “ನೀನು ‘ರ’ ಹೇಳುವಾಗ ಸ್ವಲ್ಪ ಬೇರೆ ರೀತಿಯಲ್ಲಿ ಕೇಳಿಸುತ್ತೆ.” ಭೂಮಿಯ ಮುಖ ತಕ್ಷಣ ಬದಲಾಯಿತು. ಅವಳಿಗೆ ಆ ಮಾತು ಹೊಸದಲ್ಲ. ಆದರೆ ಯಾರಾದರೂ ಗಮನಿಸಿದಾಗಲೆಲ್ಲಾ ಅವಳೊಳಗೆ ಒಂದು ಚಿಕ್ಕ ನೋವು ಮೂಡುತ್ತಿತ್ತು. ಅವಳು ಏನೂ ಹೇಳದೆ ನಿಂತಳು. ಆದಿತ್ಯ ತಕ್ಷಣ ನಕ್ಕು, “ಆದರೆ ಅದೇ ನಿನ್ನ voiceಗೆ unique ಆಗಿದೆ.” ಭೂಮಿ ಅವನತ್ತ ನೋಡಿದಳು. “ನಿಜವಾ?ಹೌದು. ಎಲ್ಲರೂ ಒಂದೇ ರೀತಿಯಾಗಿ ಮಾತನಾಡಿದರೆ ಈ ಜಗತ್ತು boring ಆಗಿರುತ್ತಿತ್ತು. ”ಅವಳು ಮೊದಲ ಬಾರಿ ಅವನ ಮಾತಿಗೆ ಮನಸಾರೆ ನಕ್ಕಳು. ಅದೇ ಅವರ ಸ್ನೇಹದ ಮೊದಲ ಹೆಜ್ಜೆ.

ಮೊದಲಿಗೆ ಅವರು ಸ್ನೇಹಿತರಾಗಿದ್ದರು. ನಂತರ ಒಬ್ಬರಿಗೊಬ್ಬರು ಅಭ್ಯಾಸವಾಗಿದರು. ಆದಿತ್ಯ ಪ್ರತಿದಿನ ಬೆಳಿಗ್ಗೆ, “ಕಾಲೇಜಿಗೆ ಹೊರಟೆಯಾ?”ಎಂದು ಕೇಳುತ್ತಿದ್ದ. ಭೂಮಿ,“ಹೌದು. ನೀನು?” ಎಂದು ಉತ್ತರಿಸುತ್ತಿದ್ದಳು. ಚಿಕ್ಕ ಚಿಕ್ಕ ಮಾತುಗಳು. ಚಿಕ್ಕ ಚಿಕ್ಕ ಜಗಳಗಳು. ಒಬ್ಬರನ್ನೊಬ್ಬರು ಕಿಚಾಯಿಸುವುದು. ಒಬ್ಬರ ಸಮಸ್ಯೆಗಳನ್ನು ಮತ್ತೊಬ್ಬರು ಕೇಳುವುದು. ಭೂಮಿಗೆ ಪರೀಕ್ಷೆಯ ಒತ್ತಡ ಬಂದಾಗ ಆದಿತ್ಯ ಅವಳಿಗೆ, “ಮೊದಲು ನೀರು ಕುಡಿ. ನಂತರ ಓದು,” ಎಂದು ನೆನಪಿಸುತ್ತಿದ್ದ. ಆದಿತ್ಯ ಯಾವುದೋ ವಿಷಯದಿಂದ ಬೇಸರಗೊಂಡಿದ್ದಾಗ ಭೂಮಿ, “ಎಲ್ಲವನ್ನೂ ಒಬ್ಬನೇ ಹೊತ್ತುಕೊಳ್ಳಬೇಡ. ಹೇಳು,” ಎಂದು ಹೇಳುತ್ತಿದ್ದಳು. ಅವರಿಗೆ ಗೊತ್ತಾಗದೆ...ಸ್ನೇಹವು ಒಂದು ಸುಂದರವಾದ ಬಂಧವಾಗಿ ಬದಲಾಗುತ್ತಿತ್ತು. ಅಲ್ಲಿ ದೊಡ್ಡ ದೊಡ್ಡ ಪ್ರೇಮದ ಮಾತುಗಳಿರಲಿಲ್ಲ. ಆದರೆ ಕಾಳಜಿ ಇತ್ತು. ನಂಬಿಕೆ ಇತ್ತು. ಒಬ್ಬರಿಗಾಗಿ ಮತ್ತೊಬ್ಬರು ಕಾಯುವ ಅಭ್ಯಾಸ ಇತ್ತು. ಮತ್ತು...ಒಬ್ಬರ ಮೌನವನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳುವಷ್ಟು ಹತ್ತಿರವಾಗಿದ್ದರು. ಒಂದು ದಿನ ಭೂಮಿ ಕೇಳಿದಳು, “ಆದಿತ್ಯ... ನಿನಗೆ ಪ್ರೀತಿ ಅಂದ್ರೆ ಏನು?”ಅವನು ಸ್ವಲ್ಪ ಯೋಚಿಸಿ, “ಯಾರನ್ನಾದರೂ ಪಡೆಯಬೇಕು ಅನ್ನೋ ಆಸೆಗಿಂತ... ಅವರು ಚೆನ್ನಾಗಿರಬೇಕು ಅನ್ನೋ ಕಾಳಜಿ ಬಂದಾಗ ಅದೇ ಪ್ರೀತಿ ಇರಬಹುದು,” ಎಂದ. ಭೂಮಿ ಏನೂ ಹೇಳಲಿಲ್ಲ. ಆದರೆ ಆ ಮಾತು ಅವಳ ಮನಸ್ಸಿನಲ್ಲಿ ಉಳಿಯಿತು.

ಕೆಲವು ತಿಂಗಳುಗಳು ಹೀಗೆ ಸಾಗಿದವು. ಭೂಮಿ ತನ್ನ ಹಿಂದಿನ ನೋವನ್ನು ನಿಧಾನವಾಗಿ ಮರೆಯುತ್ತಿದ್ದಳು. ಆದಿತ್ಯ ಅವಳಿಗೆ ಹೊಸ ಜೀವನವನ್ನು ಕೊಡುತ್ತಿದ್ದಾನೆ ಎಂಬುದಕ್ಕಿಂತ...ಅವಳು ತನ್ನ ಜೀವನವನ್ನು ಮತ್ತೆ ಪ್ರೀತಿಸಲು ಕಲಿಯುತ್ತಿದ್ದಳು. ಒಂದು ಸಂಜೆ ಅವಳು ತನ್ನ ದಿನಚರಿಯಲ್ಲಿ ಬರೆದಳು: “ಕೆಲವರು ನಮ್ಮ ಜೀವನಕ್ಕೆ ಉಳಿಯಲು ಬರುವುದಿಲ್ಲ. ನಮ್ಮನ್ನು ಬದಲಿಸಲು ಬರುತ್ತಾರೆ. ಕೆಲವರು ನಮ್ಮನ್ನು ಮುರಿದು ಹೋಗುತ್ತಾರೆ. ಇನ್ನೂ ಕೆಲವರು...ನಾವು ಮುರಿದಿದ್ದೇವೆ ಎಂಬುದನ್ನೇ ಮರೆಸುತ್ತಾರೆ.” ಆ ಕವಿತೆಯ ಕೊನೆಯ ಸಾಲನ್ನು ಬರೆಯುವಾಗ ಅವಳ ಮನಸ್ಸಿನಲ್ಲಿ ಆದಿತ್ಯನ ಮುಖವಿತ್ತು.
  

“ಆದರೆ ಭೂಮಿಗೆ ಗೊತ್ತಿರಲಿಲ್ಲ... ಅವಳು ತನ್ನ ದಿನಚರಿಯಲ್ಲಿ ಆದಿತ್ಯನ ಹೆಸರನ್ನು ಬರೆಯುತ್ತಿದ್ದ ಆ ರಾತ್ರಿ, ವಿಧಿ ಅವರಿಬ್ಬರ ಕಥೆಯಲ್ಲಿ ಯಾವ ತಿರುವನ್ನು ಬರೆಯುತ್ತಿತ್ತು ಎಂಬುದು.”
                         
ಮುಂದುವರೆಯುವುದು.......


- ಈಶಕೃಷ್ಣ
ಡೇಟಾ ಸೈನ್ಸ್ ವಿಭಾಗ 
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top