ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರ 50ನೇ ಜನ್ಮದಿನ ಆಚರಣೆ
ಪುತ್ತೂರು: ಶಿಸ್ತು, ಸೇವಾ ಮನೋಭಾವ, ಸರಳತೆ ಹಾಗೂ ದೂರದೃಷ್ಟಿಯ ನಾಯಕತ್ವದೊಂದಿಗೆ ಐದು ದಶಕಗಳ ಜೀವನಯಾನವನ್ನು ಪೂರೈಸಿದ ಪುತ್ತೂರು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರ 50ನೇ ಜನ್ಮದಿನವನ್ನು ಕಾಲೇಜಿನ ಬೋಧಕ, ಬೋಧಕೇತರ ವೃಂದದ ವತಿಯಿಂದ ಆತ್ಮೀಯವಾಗಿ ಆಚರಿಸಲಾಯಿತು.
ಕಾಲೇಜಿನ ಸಂಚಾಲಕ ವಂ. ಫಾ. ಡಾ. ಜೆ.ಬಿ. ಸಾಲ್ದಾನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ. ಮೊಂತೆರೊ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿ ಅಭಿನಂದಿಸಿದರು. ಅವರ ಸಮರ್ಥ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆಗಳನ್ನು ದಾಖಲಿಸುವಂತಾಗಲಿ. ಡಾ. ಮೊಂತೆರೊ ಅವರಿಗೆ ಉತ್ತಮ ಅವಕಾಶಗಳು ದೊರೆತು, ಸೇಂಟ್ ಫಿಲೋಮಿನಾ ಕಾಲೇಜನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಹಾರೈಸಿದರು.
ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಅವರು ಪುಷ್ಪಗುಚ್ಛ ನೀಡಿ ಡಾ. ಮೊಂತೆರೊ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಹಿಂದಿನ ಪ್ರಾಂಶುಪಾಲರನ್ನು ಸ್ಮರಿಸಿದ ಅವರು, ಡಾ. ಮೊಂತೆರೊ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ಮೆಲುಕು ಹಾಕಿ, ಸಂಸ್ಥೆಯೊಂದಿಗಿನ ತಮ್ಮ ಸುದೀರ್ಘ ಸಂಬಂಧದ ನೆನಪುಗಳನ್ನು ಹಂಚಿಕೊಂಡರು.
ಬೋಧಕ ವೃಂದದ ಸದಸ್ಯರು ಡಾ. ಮೊಂತೆರೊ ಅವರನ್ನು ಅಭಿನಂದಿಸಿ, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಯಶಸ್ವಿ ನಾಯಕತ್ವಕ್ಕಾಗಿ ಪ್ರಾರ್ಥಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಆಂಟನಿ ಪ್ರಕಾಶ್ ಮೊಂತೆರೊ, ತಮ್ಮ 50ನೇ ಜನ್ಮದಿನವನ್ನು ಆತ್ಮೀಯವಾಗಿ ಆಚರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಅರ್ಪಿಸಿದರು.
ಡಾ. ವಿಜಯಕುಮಾರ್ ಮೊಳೆಯಾರ್ ಅವರ ನೇತೃತ್ವದಲ್ಲಿ ಸ್ಟಾಫ್ ಅಸೋಸಿಯೇಷನ್ ಸಂಯೋಜಕಿ ಡಾ. ಡಿಂಪಲ್ ಜೆ. ಫೆರ್ನಾಂಡಿಸ್ ಹಾಗೂ ಹರ್ಷಿತ್ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಸ್ವಾಗತಿಸಿ, ವಿಜ್ಞಾನ ವಿಭಾಗದ ಡೀನ್ ಡಾ. ಮಾಲಿನಿ ಅಭಿನಂದನಾ ಭಾಷಣ ಮಾಡಿದರು. ವಾಣಿಜ್ಯ ವಿಭಾಗದ ಡೀನ್ ಪ್ರೇಮಲತಾ ವಂದಿಸಿ ಪ್ರಶಾಂತ್ ರೈ ಪ್ರಾರ್ಥಿಸಿದರು. ಸುಷ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

