ನಾಗರ ಪಂಚಮಿ: ಹುತ್ತಕ್ಕೆ ಹಾಲೆರೆಯುವುದಕ್ಕಿಂತ ನಾಗನ ಬದುಕನ್ನು ಉಳಿಸೋಣ!

Upayuktha
0


ನ್ನು ನಾಲ್ಕೈದು ದಿನಗಳಲ್ಲಿ ಶ್ರಾವಣ ಮಾಸ ಆರಂಭವಾಗುತ್ತಿದೆ. ಶ್ರಾವಣ ಮಾಸವೆಂದರೆ ಸಾಲು ಸಾಲು ಹಬ್ಬಗಳ ಹಬ್ಬ. ಮಳೆಯಿಂದ ಮೈ ಕೈ ತುಂಬಿಕೊಂಡು ಗದ್ದೆಗಳು,  ಪ್ರಕೃತಿ ಮಾತೆ, ನದಿ ಕೊಳ್ಳಗಳೆಲ್ಲಾ ಸಂಭ್ರಮಿಸುವಂತೆ. ಮನೆ, ಮನೆಗಳಲ್ಲೂ ಹಬ್ಬದ ಸಡಗರ ಆರಂಭವಾಗುತ್ತದೆ. ಹಬ್ಬಗಳ ಸಾಲಿನಲ್ಲಿ ಬರುವ ಮೊದಲನೆಯ ಹಬ್ಬ ನಾಗರ ಪಂಚಮಿ. ನಾಗನ ಕಲ್ಲಿಗೆ ಪೂಜೆ, ಹುತ್ತಕ್ಕೆ ಹಾಲು, ಹೂವು, ಅರಿಶಿನ-ಕುಂಕುಮ ಹೀಗೆ ನಾಗನನ್ನು ದೇವರೆಂದು ಭಾವಿಸಿ ಪೂಜಿಸುವ ನಮ್ಮ ಸಂಪ್ರದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.


ಆದರೆ ಒಂದು ಕ್ಷಣ ಯೋಚಿಸೋಣ... ನಾವು ಪೂಜಿಸುತ್ತಿರುವ ನಾಗನಿಗೆ ನಿಜವಾಗಿಯೂ ನಮ್ಮಿಂದ ಏನು ಬೇಕು?

ಹಾಲೇ?

ಹೂವೇ?

ಅಥವಾ ಬದುಕಲು ಒಂದು ಸುರಕ್ಷಿತ ಜಾಗವೇ?


ನಮ್ಮ ಪೂರ್ವಜರು ಪ್ರತಿಯೊಂದು ಸಂಪ್ರದಾಯ, ಆಚರಣೆ, ಹಬ್ಬಗಳನ್ನು ರೂಪಿಸುವಾಗಲೂ ಪ್ರಕೃತಿಯನ್ನು ಒಳಗೊಂಡು, ಪರಿಸರಕ್ಕೆ ಪೂರಕವಾಗಿ ಆ ಆಚರಣೆ ನಿಲ್ಲುವಂತೆ ರೂಪಿಸಿದ್ದಾರೆ. ಆದರೆ ಬರುಬರುತ್ತಾ ಜನಸಾಮಾನ್ಯರಾದ ನಾವುಗಳು ನಮ್ಮ ಅನುಕೂಲಕ್ಕೆ ತಕ್ಕಂತೆ, ಅವುಗಳನ್ನು ಮಾರ್ಪಡಿಸಿಕೊಂಡು, ಪ್ರಕೃತಿಯನ್ನು ಕಡೆಗಣಿಸುತ್ತಾ ಬಂದಿದ್ದೇವೆ. ಅದರೊಂದಿಗೆ ಒಂದಿಷ್ಟು ಮೂಢನಂಬಿಕೆಗಳಿಗೂ ಹಾದಿ ಮಾಡಿಕೊಟ್ಟಿದ್ದೇವೆ. 


ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯ ದಿನವಲ್ಲ. ಅದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ನೆನಪಿಸುವ ದಿನವೂ ಹೌದು. ನಮ್ಮ ಸುತ್ತಲಿನ ಪ್ರತಿಯೊಂದು ಜೀವಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಅರಿತುಕೊಳ್ಳುವ ದಿನ. ಆದರೆ ಈಗ ವರ್ಷಕ್ಕೊಮ್ಮೆ ಯಾಂತ್ರಿಕವಾಗಿ ನಾಗನಿಗೆ ಭಕ್ತಿ ತೋರಿಸುವ ದಿನವಾಗಿ ಮಾರ್ಪಟ್ಟಿದೆ. ನಾಗನಿಗೋಸ್ಕರ ಪ್ಲಾಸ್ಟಿಕ್ ಚೀಲಗಳಲ್ಲಿ ಹೂವು-ಹಣ್ಣು, ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಲು ತೆಗೆದುಕೊಂಡು ಹೋಗಿ, ನಾಗನ ಸ್ಥಾನದಲ್ಲಿ ಅವುಗಳನ್ನು ಹಾಕಿ ಕಸ ಮಾಡಿ, ನಾಗನಿಗೆ ಇನ್ನೊಂದಿಷ್ಟು ತೊಂದರೆ ಮಾಡಿ ಬರುವ ದಿನವಾಗಿದೆ ನಾಗರ ಪಂಚಮಿ.


ಹಾಲಲ್ಲ... ಬದುಕಲು ಜಾಗ ಬೇಕು:

ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯುವುದು ಅನೇಕ ಕಡೆಗಳಲ್ಲಿರುವ ಆಚರಣೆ. ಆದರೆ ಹಾವುಗಳು ಮನುಷ್ಯರಂತೆ ಹಾಲನ್ನು ಕುಡಿಯುವ ಪ್ರಾಣಿಗಳಲ್ಲ. ಬಲವಂತವಾಗಿ ಹಾಲು ಕುಡಿಸುವುದು ಅವುಗಳಿಗೆ ಹಾನಿಕರವಾಗಬಹುದು. ನಾಗನಿಗೆ ನಿಜವಾದ ಗೌರವ ಸಲ್ಲಿಸಬೇಕೆಂದರೆ ಅದರ ನೈಸರ್ಗಿಕ ಆವಾಸಸ್ಥಾನವನ್ನು ಉಳಿಸಬೇಕು. ಹುತ್ತಗಳನ್ನು ನಾಶ ಮಾಡಬಾರದು. ಪೊದೆಗಳು, ಗುಡ್ಡಗಾಡು, ಕಾಡು ಪ್ರದೇಶಗಳು ಹಾಗೂ ನೈಸರ್ಗಿಕ ಪರಿಸರವನ್ನು ಸಾಧ್ಯವಾದಷ್ಟು ರಕ್ಷಿಸಬೇಕು.


ಒಂದು ಹುತ್ತದೊಳಗೆ ಕೇವಲ ಹಾವು ಮಾತ್ರ ಇರುವುದಿಲ್ಲ. ಅಲ್ಲಿ ಮಣ್ಣಿನ ಜೀವಿಗಳು, ಕೀಟಗಳು ಸೇರಿದಂತೆ ಹಲವಾರು ಸಣ್ಣ ಜೀವಿಗಳ ಬದುಕಿನ ವ್ಯವಸ್ಥೆಯೂ ಇರುತ್ತದೆ. ಹೀಗಾಗಿ ಒಂದು ಹುತ್ತವನ್ನು ಉಳಿಸುವುದು ಒಂದು ಸಣ್ಣ ಪರಿಸರ ವ್ಯವಸ್ಥೆಯನ್ನೇ ಉಳಿಸಿದಂತಾಗುತ್ತದೆ.


ನಮ್ಮ ಹಬ್ಬಗಳು ಪ್ರಕೃತಿಯ ಪರವಾಗಿರಲಿ:

ಹಬ್ಬ ಎಂದರೆ ಸಂಭ್ರಮ. ಆದರೆ ಆ ಸಂಭ್ರಮದಿಂದ ಪರಿಸರಕ್ಕೆ ಹಾನಿಯಾಗಬಾರದು. ಈ ನಾಗರ ಪಂಚಮಿಗೆ ಪ್ಲಾಸ್ಟಿಕ್ ಬಳಸದಿರೋಣ. ಹುತ್ತಕ್ಕೆ ರಾಸಾಯನಿಕ ವಸ್ತುಗಳನ್ನು ಸುರಿಯುವುದನ್ನು ತಪ್ಪಿಸೋಣ. ಹಾವುಗಳನ್ನು ಹಿಡಿದು ಪ್ರದರ್ಶನ ಮಾಡುವಂತಹ ಪದ್ಧತಿಗಳಿಗೆ ಪ್ರೋತ್ಸಾಹ ನೀಡದಿರೋಣ. ಮನೆಯ ಸುತ್ತ ಹಾವು ಕಂಡರೆ ತರಬೇತಿ ಪಡೆದ ಹಾವು ರಕ್ಷಕರ ನೆರವು ಪಡೆಯೋಣ. ಮಕ್ಕಳಿಗೂ ಹಾವುಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಬದಲು, ಅವುಗಳ ಪರಿಸರ ಮಹತ್ವವನ್ನು ತಿಳಿಸೋಣ.


ಒಂದು ಹಬ್ಬ... ಒಂದು ಸಂಕಲ್ಪ:

ನಾವು ನಾಗನಿಗೆ ಪೂಜೆ ಮಾಡುವಾಗ ಒಂದು ಸಣ್ಣ ಸಂಕಲ್ಪ ಮಾಡಬಹುದಲ್ಲವೇ? "ನಮ್ಮ ಸುತ್ತಲಿನ ಹಾವುಗಳ ಆವಾಸಸ್ಥಾನವನ್ನು ನಾಶ ಮಾಡುವುದಿಲ್ಲ. ಪ್ರಕೃತಿಯ ಪ್ರತಿಯೊಂದು ಜೀವಿಗೂ ಬದುಕುವ ಅವಕಾಶ ನೀಡುತ್ತೇವೆ." ಇದು ನಾಗನಿಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣ ಪೂಜೆಯಾಗಬಹುದು.


ನಮ್ಮ ಹಿರಿಯರು ಪ್ರಕೃತಿಯಲ್ಲಿರುವ ಮರ, ಬೆಟ್ಟ, ನದಿ, ಹಾವು, ಪ್ರಾಣಿ, ಪಕ್ಷಿಗಳನ್ನೂ ದೈವತ್ವದೊಂದಿಗೆ ನೋಡಿದ್ದರು. ಅದರ ಹಿಂದೆ ಕೇವಲ ಮೂಢನಂಬಿಕೆ ಇರಲಿಲ್ಲ; ಪ್ರಕೃತಿಯನ್ನು ಉಳಿಸುವ ಒಂದು ಸಾಮಾಜಿಕ ವ್ಯವಸ್ಥೆಯೂ ಇತ್ತು. ಇಂದು ವಿಜ್ಞಾನ ನಮಗೆ ಅದೇ ಮಾತನ್ನು ಮತ್ತೊಂದು ರೀತಿಯಲ್ಲಿ ಹೇಳುತ್ತಿದೆ—ಪ್ರತಿಯೊಂದು ಜೀವಿಯೂ ಪರಿಸರ ವ್ಯವಸ್ಥೆಯ ಒಂದು ಕೊಂಡಿ. ಒಂದು ಕೊಂಡಿ ಕಳಚಿದರೆ ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.


ಹೀಗಾಗಿ ಈ ನಾಗರ ಪಂಚಮಿಗೆ ನಾಗನ ಕಲ್ಲಿಗೆ ಹೂವಿಡುವುದರ ಜೊತೆಗೆ ಪ್ರಕೃತಿಯ ಮಡಿಲಿಗೂ ಒಂದು ಹೂವಿಡೋಣ. ಹುತ್ತಕ್ಕೆ ಹಾಲೆರೆಯುವುದಕ್ಕಿಂತ, ಒಂದು ಮರಕ್ಕೆ ನೀರುಣಿಸೋಣ. ನಾಗನನ್ನು ಪೂಜಿಸುವುದಕ್ಕಿಂತ, ನಾಗನ ಬದುಕನ್ನು ಉಳಿಸುವ ಸಂಕಲ್ಪ ಮಾಡೋಣ.

ಏಕೆಂದರೆ ನಾಗನನ್ನು ದೇವರೆಂದು ಕರೆಯುವ ನಾವು, ಆ ದೇವರಿಗೆ ಬದುಕಲು ಜಾಗ ನೀಡುವುದೇ ನಿಜವಾದ ಭಕ್ತಿ. ಈ ನಾಗರ ಪಂಚಮಿ ನಾಗನಿಗಷ್ಟೇ ಅಲ್ಲ, ಪ್ರಕೃತಿಯ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂಬುದನ್ನು ನೆನಪಿಸುವ ಹಬ್ಬವಾಗಲಿ.

- ಬಿ.ಸಂ. ಸುವರ್ಚಲಾ

ಕಾರ್ಕಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top