ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಗರೀಕರಣ ಮತ್ತು ಮಾನವನ ಅತಿಯಾದ ಆಸೆ ನಮ್ಮ ಭೂಮಿಯ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಭೂಮಿ ತಾಯಿಯು ಪರಿಸರ ನಾಶ ಮತ್ತು ಮಾಲಿನ್ಯದಂತ ಸಮಸ್ಯೆಗೊಳಗಾಗಿ ತನ್ನ ಸುಂದರವಾದ ವೈಭವವನ್ನೇ ಕಳೆದುಕೊಳ್ಳುತ್ತಿದೆ. ನಾವು ಕೇವಲ ವಿಶ್ವ ಭೂ ದಿನದಂದು ಪರಿಸರ ಸಂರಕ್ಷಣೆಯ ಕುರಿತು ಮಾತನಾಡುತ್ತೇವೆ.
ಭೂಮಿಯ ಶೇಕಡಾ 71ರಷ್ಟು ಭಾಗ ನೀರಿನಿಂದ ತುಂಬಿದೆ. ಶೇಕಡಾ 29ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ. ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ ಶೇ. 97ರಷ್ಟು ಸಮುದ್ರಗಳು ಇವೆ. ಕೇವಲ 3ಶೇಕಡಾದಷ್ಟು ಮಾತ್ರ ಸಿಹಿನೀರನ್ನು ಹೊಂದಿದೆ. ಇದರಲ್ಲಿ ನಮ್ಮ ಬಳಕೆಗೆ ಸಿಗುವ ನೀರು ಕಡಿಮೆ ಪ್ರಮಾಣದಲ್ಲಿದ್ದು ಅದನ್ನು ಉಳಿಸುವ ಪ್ರಯತ್ನಗಳು ನಡೆಯಬೇಕು. ಆದ್ದರಿಂದ ನೀರಿನ ಸಂರಕ್ಷಣೆ ಮತ್ತು ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಶಾಲಾ-ಕಾಲೇಜು ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯತೆ ಇಂದು ಬಹಳಷ್ಟಿದೆ.
ಭೂಮಿಯು ಇಂದು ಬಹಳ ತೊಂದರೆಗಳನ್ನು ಎದುರಿಸುತ್ತಿದೆ. ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯವು ಪರಿಸರ ಸಮತೋಲನವನ್ನು ಕದಡುತ್ತಿದೆ. ಪ್ರಕೃತಿಯ ಮೇಲೆ ಮಾನವನ ಅತಿಯಾದ ಅವಲಂಬನೆ ಮತ್ತು ಅತಿಯಾಸೆಗಳು ಮಿತಿಮೀರಿದೆ. ಅದರ ಪರಿಣಾಮ ಅರಣ್ಯವು ಕೂಡಾ ತಕ್ಕುದಾದ ಉತ್ತರ ನೀಡುತ್ತಿದೆ. ಪರಿಸರ ನಾಶದ ಪರಿಣಾಮ ಹವಾಮಾನದಲ್ಲೂ ತೀವ್ರವಾದ ಬದಲಾವಣೆಗಳು ಕಂಡುಬರುತ್ತಿದೆ.
ಭೂಮಿಯ ತಾಪಮಾನವು ದಿನೇ ದಿನೇ ಏರುತ್ತಿದೆ. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಹಿಮನದಿಗಳ ಕರಗುವಿಕೆ ಹೆಚ್ಚಾಗಿದೆ. ಅಭಿವೃದ್ಧಿ ನೆಪದಲ್ಲಿ ಭೂಮಿಯು ಕಾಂಕ್ರಿಟ್ ನಾಡಾಗುತ್ತಿರುವ ಪರಿಣಾಮ ನೈಸರ್ಗಿಕ ವಿಕೋಪಗಳು ಮಿತಿ ಮೀರುತ್ತಿದೆ. ಭೂಮಿ ತಾಯಿಯು ತನ್ನ ಸುಂದರತೆಯನ್ನು ಪೂರ್ತಿಯಾಗಿ ಕಳೆದುಕೊಳ್ಳುವ ಮುನ್ನ ನಾವು ಎಚ್ಚರಗೊಳ್ಳಬೇಕು.
- ವಿಂಧ್ಯಾ ಜಿ ಕೆ
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್ ಡಿ ಎಂ ಸಿ ಉಜಿರೆ



