ಬರ ಪೀಡಿತ ಜಿಲ್ಲೆ ಘೋಷಣೆಗೆ ಸರಕಾರದ ಹಿಂದೇಟು: ರೈತ ವಿರೋಧಿ ಕ್ರಮಕ್ಕೆ ಡಾ. ಉಮೇಶ್ ಜಾಧವ ಟೀಕೆ

Upayuktha
0

" ಶ್ಯಾಡೋ ಮುಖ್ಯಮಂತ್ರಿಯಾಗಿ ವರ್ತಿಸುವ ಪ್ರಿಯಾಂಕ ಖರ್ಗೆ ವಿರುದ್ದ ಕಿಡಿ "



ಕಲಬುರಗಿ:
ರಾಜ್ಯದಲ್ಲಿ ಅನಾವೃಷ್ಟಿಯಿಂದಾಗಿ ಬಹುತೇಕ ಎಲ್ಲ ಜಿಲ್ಲೆಗಳು ಬರದಿಂದ ತತ್ತರಿಸುತ್ತಿದ್ದರೂ ಸರ್ಕಾರ ಮಾತ್ರ ಬರಪೀಡಿತ ಜಿಲ್ಲೆಗಳ ಘೋಷಣೆಗೆ ಹಿಂದೇಟು ಹಾಕುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತೀವ್ರವಾಗಿ ಖಂಡಿಸಿದ್ದಾರೆ.


ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ 29 ಜಿಲ್ಲೆಗಳಲ್ಲಿ ಶೇಕಡ 30ರಷ್ಟು ಮಳೆ ಕೊರತೆಯಾಗಿ 190 ತಾಲೂಕುಗಳಲ್ಲಿ ಸರಕಾರ ಮಾತ್ರ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಸಚಿವ ಸಂಪುಟ  ಸಮಸ್ಯೆ ಹಾಗೂ ರಾಜಕೀಯ ದ್ವೇಷ ಸಾಧಿಸುವುದರಲ್ಲಿ ನಿರತವಾದ ಈ ಸರಕಾರವು ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ತೋರುತ್ತಿಲ್ಲ. ಈಗಾಗಲೇ ಬಿಜೆಪಿಯ ಹಲವು ತಂಡಗಳು ರಾಜ್ಯದ್ಯಂತ ಬರ ಅಧ್ಯಯನ  ಪ್ರವಾಸ ಮಾಡಿ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರೂ ಸರಕಾರ ಮಾತ್ರ ರೈತರ ಪರವಾಗಿ ಸ್ಪಂದಿಸದೆ ಬರ ಪೀಡಿತ ಜಿಲ್ಲೆಗಳ ಘೋಷಣೆಗೆ ಮೀನ ಮೇಷ ಎನಿಸುತ್ತಿದೆ. ಸರಕಾರವು ಕೇವಲ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು ಇತರ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಬರ ಪೀಡಿತ ತಾಲೂಕುಗಳೆಂದು ಘೋಷಿಸದೆ ರೈತರಿಗೆ ತೀವ್ರ ಅನ್ಯಾಯ ಮಾಡಿದೆ. ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರೂ ಸರಕಾರವು ಒಂದು ತಾಲೂಕಿಗೆ ಒಂದು ಕೋಟಿ ಹಣ ಮಾತ್ರ ನೀಡಿದೆ. ಮೇವು ದಾಸ್ತಾನು ಕುಡಿಯುವ ನೀರಿನ ವ್ಯವಸ್ಥೆ, ಸಾಲ ಮನ್ನಾ ಈ ಬಗ್ಗೆ ಸರಕಾರವು ಯಾವುದೇ ಮಾಹಿತಿ ನೀಡದೆ ರೈತ ವಿರೋಧಿ ನೀತಿಯನ್ನು ಮುಂದುವರಿಸಿದೆ. 


ಬರ ಪರಿಸ್ಥಿತಿಯಿಂದಾಗಿ ಕಲಬುರಗಿ, ಯಾದಗಿರಿ ರಾಯಚೂರು, ಬೀದರ್ ಮುಂತಾದ ಕಡೆಗಳಿಂದ ಕೃಷಿ,ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆ ಸಮರ್ಪಕವಾಗಿ ಜಾರಿ ಮಾಡದೆ ಕೂಲಿ ಕಾರ್ಮಿಕರ ಕೈಗೆ ಕೆಲಸವು ಸಿಗುತ್ತಿಲ್ಲ. ಇದರಿಂದಾಗಿ ರಾಯಚೂರು, ಯಾದಗಿರಿ,  ವಾಡಿ, ಕಲಬುರಗಿ ಮುಂತಾದ ರೈಲು ನಿಲ್ದಾಣಗಳಿಂದ ಪ್ರತಿ ನಿತ್ಯ ಉದ್ಯೋಗವನ್ನು ಅರಸಿಕೊಂಡು ಗೋವಾ ಮುಂಬೈ ಪೂನಾ  ಹೈದರಾಬಾದ್ ಬೆಂಗಳೂರು ಮುಂತಾದ ಕಡೆಗಳಿಗೆ ನೂರಾರು ಜನರು ಗುಳೆ ಹೋಗುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಸರಕಾರವು ಮಾತ್ರ ದಿವ್ಯ ಮೌನ ವಹಿಸಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಕೂಡಲೇ ರಾಜ್ಯ ಸರ್ಕಾರವು ಬರಪೀಡಿತ ಜಿಲ್ಲೆಗಳೆಂದು ಘೋಷಿಸಿ ಅನುದಾನ, ಸಾಲ ಮನ್ನಾ ಹಾಗೂ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಜನರ ಬದುಕನ್ನು ರಕ್ಷಿಸಬೇಕು ಎಂದು ಡಾ. ಜಾಧವ್ ಒತ್ತಾಯಿಸಿದ್ದಾರೆ. 


ಶ್ಯಾಡೋ ಮುಖ್ಯಮಂತ್ರಿಯಾಗಿ ವರ್ತಿಸುವ ಖರ್ಗೆಗೆ ಸಮಯವಿಲ್ಲ


ಕಲಬುರಗಿ ಜಿಲ್ಲೆಯ ಜನರು ಹಾಗೂ ರೈತರು ಬರಗಾಲದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದರೂ ಇಲ್ಲಿನ ಉಸ್ತುವಾರಿ ಸಚಿವರು ಶ್ಯಾಡೋ ಮುಖ್ಯಮಂತ್ರಿಗಳಂತೆ ವರ್ತಿಸುವ ಪ್ರಿಯಾಂಕ ಖರ್ಗೆಯವರು ಮಾತ್ರ ರಾಜಧಾನಿಯಲ್ಲಿ ಐಷಾರಾಮಿಯಾಗಿ ಹೇಳಿಕೆಗಳನ್ನು ನೀಡಿ ಕ್ಷುಲ್ಲಕ ರಾಜಕೀಯ ದ್ವೇಷವನ್ನು ಸಾಧಿಸುತ್ತಿದ್ದಾರೆ ಹೊರತು ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಸಮಯವಿಲ್ಲ. ಮುಖ್ಯಮಂತ್ರಿಗಳು ಬರುವ ಮುನ್ನಾ ದಿನ ಕಾಟಾಚಾರಕ್ಕಾಗಿ ವಿಮಾನ ನಿಲ್ದಾಣದಿಂದ ಇಳಿದುಬರುವ ದಾರಿಯಲ್ಲಿ ಹೊಲಗಳಿಗೆ ಭೇಟಿ ನೀಡಿ ಫೋಸ್ ಕೊಡಲು ಬರ ಪರಿಸ್ಥಿತಿ ವೀಕ್ಷಣೆಯ ನಾಟಕವನ್ನಾಗಿದ್ದಾರೆ. 


ರೈತರು ಮತ್ತು ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ವಲಸೆ ಹೋಗುತ್ತಿದ್ದರೂ ಉಸ್ತುವಾರಿ ಸಚಿವರು ಮಾತ್ರ ‌ಆರೆಸ್ಸೆಸ್ ಟೀಕೆ, ಮೋದಿ, ಶಾ ವಿರುದ್ಧ ಹೇಳಿಕೆ ನೀಡಿ ಕಾಲ ಹರಣ ಮಾಡುತ್ತಿದ್ದಾರೆ. ಅವರ ಸ್ವಕ್ಷೇತ್ರ ಚಿತಾಪುರ ತಾಲೂಕಿನ ಜನರು ತೀವ್ರ ತೊಂದರೆಯಲ್ಲಿದ್ದರೂ ಕಣ್ಣೆತ್ತಿಯೂ ನೋಡುತ್ತಿಲ್ಲ. ಸಚಿವರ ವರ್ತನೆಗೆ ಜನರು ಹಿಡಿ ಶಾಪ ಹಾಕುತ್ತಿದ್ದು ಕುಡಿಯಲು ನೀರಿಲ್ಲದೆ ಕೈಗೆ ಕೆಲಸವಿಲ್ಲದೆ ಜನ ವಲಸೆ ಹೋಗುತ್ತಿದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಡಾ. ಉಮೇಶ್ ಜಾಧವ್ ತೀವ್ರವಾಗಿ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top