'ಜ್ಞಾನವನ್ನು ಯಾರು ಎಲ್ಲಿ ಬೇಕಾದರೂ ಗಳಿಸಬಹುದಂತೆ, ತಮ್ಮೊಡನೆ ಒಯ್ಯಲೂ ಬಹುದಂತೆ. ಆದರೆ ತಲೆಯೊಳಗೆ, ಅಂತರಂಗದೊಳಗೆ ತುಂಬಿಸಿಕೊಳ್ಳಲು, ಸಂಗ್ರಹಿಸಿ ಇಟ್ಟುಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ.' ಸಂತ ಕಬೀರ್ ದಾಸರ ವಾಣಿಯಿದು.
ಹೌದಲ್ವಾ? ಈ ಪ್ರಪಂಚದ ಅರಿವು ನಮಗಿರಬೇಕೆಂದರೆ ನಾಲ್ಕು ಗೋಡೆಯ ಮಧ್ಯೆ ಬೆಂದು ಹೋಗದೆ, ಬಾವಿಯೊಳಗಿನ ಕಪ್ಪೆಯಂತಾಗದೆ, ಎಲ್ಲವನ್ನೂ ತಿಳಿದುಕೊಳ್ಳುವ ಹಂಬಲ ಮತ್ತು ಮನಸ್ಸು ಎರಡೂ ಇರಬೇಕು. ಮುಖ್ಯವಾಗಿ ವೈವಿಧ್ಯ ಸಾಹಿತ್ಯ ಪ್ರಕಾರಗಳನ್ನು ಓದುವ ಹವ್ಯಾಸವಿರಬೇಕು.
ಕೆಲವು ಜನರಿಗೆ ಅವರ ಕೃತಿ, ಬರೆಹಗಳು, ನುಡಿಗಳು ಮಾತ್ರ ಸರಿ, ಉಳಿದವರದ್ದು ಏನೂ ಅಲ್ಲ ಎನ್ನುವ ಭಾವನೆಯಿದೆ. ಅದು ಇರಬಾರದು. ಅವರವರ ಮನೋ ಭಾವನೆಗಳು, ಆಲೋಚನೆಗಳು, ಕಂಡದ್ದು, ಕೇಳಿದ್ದೂ ಸಹ ಬರೆಹಗಳಾಗಬಹುದಲ್ವಾ? ಒಪ್ಪಿಕೊಳ್ಳದಿದ್ದರೂ ಚಿಂತೆಯಿಲ್ಲ; ವ್ಯಂಗ್ಯ, ಅವಮಾನ, ಹೀಯಾಳಿಸುವುದು ಮಾಡಿ ನೋವು ಕೊಡಬಾರದು. ತಿದ್ದಿಕೊಳ್ಳುವವರು ತಿದ್ದಿ ಕಲಿತಾರು, ಸ್ವಲ್ಪ ತಾಳ್ಮೆ ಬೇಕು, ಕಾಯಬೇಕು.
ಸಾಹಿತಿ ಅನಿಸಿಕೊಂಡವರಿಗೆ ತಪ್ಪನ್ನು ತಿಳಿಸಿದಾಗ ಒಪ್ಪಿ ತಿದ್ದಿ ನಡೆಯುವ ಗುಣ ಅತಿಮುಖ್ಯ. ಅವರಿವರು ಹೇಳಿದ್ದನ್ನೇ ಕೇಳಿ ವ್ಯವಹರಿಸುವ ಹಿತ್ತಾಳೆ ಕಿವಿಗಳಾಗದಿರಬೇಕು. ಸ್ವ ವಿವೇಚನೆ, ಸ್ವಂತ ಬುದ್ಧಿ, ಸ್ವ ತೀರ್ಮಾನದ ಜ್ಞಾನವಾದರೂ ಮನುಷ್ಯರಾಗಿ ಹುಟ್ಟಿದ ಮೇಲೆ ಇರಲೇಬೇಕಲ್ಲವೇ?
ಆತ್ಮವಿಶ್ವಾಸ ಯಾವತ್ತೂ ಬರಿದಾಗಬಾರದು. ನಮ್ಮ ಮೇಲೆ ನಮಗೇ ವಿಶ್ವಾಸ, ನಂಬಿಕೆಯಿಲ್ಲ ಎಂದಾದರೆ ಹೇಗೆ?
ಮೈದಾನದ ಹಸಿರು ಹುಲ್ಲು ಪ್ರಾಣಿಗಳಿಗೆ ಆಹಾರ, ಕೆಲವೊಂದು ಔಷಧಿಗೆ ಬೇಕು. ಅದೇ ಹುಲ್ಲನ್ನು ತುಳಿದಷ್ಟೂ ಮತ್ತೂ ಮತ್ತೂ ಬೆಳೆದು ತಲೆಯೆತ್ತಿ ನಿಂತು ಉಪಕಾರ ಮಾಡುತ್ತದೆ. ನಮ್ಮ ಬದುಕೇ ಒಂದು ಮೈದಾನದಂತೆ. ನಾವು ಸಹ ಹುಲ್ಲಿನಂತಿರಬೇಕು. ಯಾರಾದರು ತುಳಿದರೆ, ಕಾಲೆಳೆದರೆ ಜಗ್ಗದೆ, ಕುಗ್ಗದೆ ಮುಂದೆ ಹೋಗಿ ಸಾಧಿಸುವ ಜ್ಞಾನ ಬೆಳೆಸಿಕೊಳ್ಳಬೇಕು. ಹೇಳುವವರ ಬಾಯಿಗೆ ಬೀಗ ಹಾಕಲು ನಮಗೆ ಸಾಧ್ಯವಿಲ್ಲ (ಭಗವಂತನೇ ಹಾಕಬೇಕಷ್ಟೆ).
ಕೆಲವೊಮ್ಮೆ ಜ್ಞಾನದಿಂದ ಗುಣ, ಹೆಸರು, ಪ್ರಸಿದ್ಧಿಯೂ ಬರಬಹುದು. ಇನ್ನೊಬ್ಬರನ್ನು ತಿದ್ದಿ ಬೆಳೆಸಿ ಅವರ ಉನ್ನತಿಗೂ ಕಾರಣನಾಗಬಹುದು. ಸನ್ನಡತೆ, ದುರ್ನಡತೆಗಳ ಅರಿವು ಮತ್ತು ವ್ಯತ್ಯಾಸ ಜ್ಞಾನದಿಂದ ಸಿಗಬಹುದು.
ಯಾವಾಗ ಮನುಷ್ಯ ಮನುಷ್ಯನನ್ನು ಒಪ್ಪಿಕೊಂಡು, ಅರ್ಥೈಸಿಕೊಂಡು, ನನ್ನಂತೆ ಅವನೆಂದು ತಿಳಿದುಕೊಂಡು ಒಳ್ಳೆಯದನ್ನೇ ಬಯಸಿದರೆ ಆತ ಭಗವಂತನಿಗೆ ಸಮನಾಗಬಲ್ಲ. ಜ್ಞಾನಿಗಳ ಸ್ನೇಹ, ಒಡನಾಟ ಬದುಕಿಗಾಸರೆಯಾಗಬಲ್ಲುದು.
ಯಾವುದೇ ಕಾರಣಕ್ಕೂ ನಮ್ಮದೊಂದು ಪರಿಧಿಯಿದೆಯಲ್ಲ, ಅದನ್ನು ದಾಟದೆ ವ್ಯವಹರಿಸೋಣ, ಪರಿಧಿ ದಾಟಿದವ ನೆಲ ಕಚ್ಚಬಹುದು. ಗಳಿಸಿದ ಜ್ಞಾನ, ಬುದ್ಧಿವಂತಿಕೆಯನ್ನು ನಾಲ್ಕಾರು ಜನರಿಗೆ ಹಂಚೋಣ. ಅಜ್ಞಾನವೆನುವ ಪದವೇ ಬೇಡ ನಮಗೆ. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಮನಸ್ಸು ಎಲ್ಲರಿಗೂ ಬರಲಿ, ಏಕಮುಖ ಬೇಡ.
- ರತ್ನಾ ಕೆ ಭಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

