ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಸ್ವಾಧ್ಯಾಯ ಪ್ರಮುಖ್ ಶ್ರೀಮತಿ ಮೃದುಲ ವಿಜಯೀಂದ್ರ, ಭಾರತೀಯ ಪರಂಪರೆಯಲ್ಲಿ ಮಹರ್ಷಿ ವೇದವ್ಯಾಸರನ್ನು ಅತ್ಯುನ್ನತ ಹಾಗೂ ಪರಿಪೂರ್ಣ ಗುರು ಎಂದು ಕೊಂಡಾಡಿದರು.
"ಕೇವಲ ಜೀವನೋಪಾಯವನ್ನು ಕಲಿಸುವವರು ಶಿಕ್ಷಕರು, ಆದರೆ ಅಜ್ಞಾನದ ಕತ್ತಲೆಯಿಂದ ಪರಮಾತ್ಮನೆಡೆಗೆ, ಬೆಳಕಿನ ಮಾರ್ಗಕ್ಕೆ ಕೊಂಡೊಯ್ಯುವವರೇ ನಿಜವಾದ ಗುರು. ಮಹಾಭಾರತದ ಪ್ರತಿಯೊಂದು ಬಿಕ್ಕಟ್ಟಿನ ಸಂದರ್ಭದಲ್ಲೂ ಸಮರ್ಥ ಮಾರ್ಗದರ್ಶನ ನೀಡಿದ ವೇದವ್ಯಾಸರು ಇಂದಿನ ಕಾಲಘಟ್ಟಕ್ಕೂ ಅನ್ವಯಿಸುವ ಅತ್ಯುತ್ತಮ 'ಕ್ರೈಸಿಸ್ ಮ್ಯಾನೇಜರ್' (ಸಂಕಟ ನಿರ್ವಹಣಾ ಗೈಡ್) ಆಗಿದ್ದಾರೆ. ಧೃತರಾಷ್ಟ್ರನಂತೆ ಮಕ್ಕಳ ಮೇಲೆ ಅತಿಯಾದ ಮೋಹ ಬೆಳೆಸಿಕೊಳ್ಳದೆ, ಸೃಷ್ಟಿಯ ಸತ್ಯ ಹಾಗೂ ಉದಾತ್ತ ಮೌಲ್ಯಗಳನ್ನು ಯುವ ಪೀಳಿಗೆಗೆ ಧಾರೆ ಎರೆಯುವುದು ಇಂದಿನ ತುರ್ತು ಅಗತ್ಯ," ಎಂದು ಅವರು ಅಭಿಪ್ರಾಯಪಟ್ಟರು.
ಸೃಜನಶೀಲತೆ ಮತ್ತು ನಿಷೇಧದ ಕುರಿತು ಸಂವಾದ:
ನಂತರ ನಡೆದ "ಸೃಜನಶೀಲತೆಯಲ್ಲಿ ಸ್ವಾತಂತ್ರ್ಯ" ವಿಷಯಾಧಾರಿತ ಸಂವಾದದಲ್ಲಿ ಖ್ಯಾತ ಪತ್ರಕರ್ತ ಹಾಗೂ ಲೇಖಕ ಜಯಪ್ರಕಾಶ ನಾರಾಯಣ ಬಿ.ಎಸ್. ಹಾಗೂ ಅಭಾಸಾಪ ದಕ್ಷಿಣ ಕಾರ್ಯದರ್ಶಿ ಅವಿನಾಶ್ ಭಾಟ್ ವಿಚಾರ ವಿನಿಮಯ ನಡೆಸಿದರು.
ಸಂವಾದದಲ್ಲಿ ಮಾತನಾಡಿದ ಜಯಪ್ರಕಾಶ ನಾರಾಯಣ ಅವರು, "ಸೋಶಿಯಲ್ ಮೀಡಿಯಾ ಪ್ರಬಲವಾಗಿರುವ ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು (ಬ್ಯಾನ್) ಅಸಾಧ್ಯ. ಧೀಮಂತ ಲೇಖಕನಾದವನು ಸಾಂಪ್ರದಾಯಿಕ ಚೌಕಟ್ಟುಗಳನ್ನು ಮುರಿದು ಸತ್ಯದ ಶೋಧನೆ ಮಾಡುತ್ತಾನೆ. ಸತ್ಯವನ್ನು ಪ್ರತಿಪಾದಿಸುವಾಗ ಲೇಖಕ ಒಂಟಿಯಾಗುವ ಧೈರ್ಯ ಹಾಗೂ ಸಿದ್ಧತೆಯನ್ನು ಹೊಂದಿರಬೇಕು. ಭಾರತೀಯ ಸಂಸ್ಕೃತಿಯು ಸ್ಪಂಜಿನಂತೆ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳದೆ ಜಗತ್ತಿನ ಎಲ್ಲಾ ವಿಚಾರಗಳನ್ನು ಸ್ವೀಕರಿಸುವ ಉದಾರ ಗುಣವನ್ನು ಹೊಂದಿದೆ" ಎಂದರು. ಬರ್ಟ್ರಾಂಡ್ ರಸಲ್ ಹಾಗೂ ಓಶೋ ರಜನೀಶ್ ಅವರ ಉದಾಹರಣೆಗಳನ್ನು ನೀಡಿ ಕೃತಿಗಳ ಸಂವಹನಶೀಲತೆಯನ್ನು ಅವರು ವಿಶ್ಲೇಷಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾಸಾಪ ಬೆಂಗಳೂರು ದಕ್ಷಿಣ ಅಧ್ಯಕ್ಷರಾದ ಡಾ. ಎ. ಭಾನು ವಹಿಸಿ, ವಾರಾಂತ್ಯದಲ್ಲಿ ವೈಚಾರಿಕ ಹಾಗೂ ಪ್ರಬುದ್ಧ ಗೋಷ್ಠಿ ನಡೆಸಿಕೊಟ್ಟ ಅತಿಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯ ಆರಂಭದಲ್ಲಿ ಶ್ರೀಮತಿ ರೂಪಶ್ರೀ ಹೆಬ್ಬಾಲೆ ಅವರಿಂದ ಪ್ರಾರ್ಥನೆ, ಶ್ರೀಮತಿ ಗಿರಿಜಾ ಶಾಮಣ್ಣ ಅವರಿಂದ ದೇಶಭಕ್ತಿ ಗೀತೆ ಗಾಯನ ನೆರವೇರಿತು. ಶ್ರೀಮತಿ ಚೇತನಾ ಭಾರ್ಗವ ಸ್ವಾಗತಿಸಿ ಅಧ್ಯಕ್ಷರ ಪರಿಚಯ ಮಾಡಿಕೊಟ್ಟರೆ, ಶ್ರೀಮತಿ ಮಾಧುರಿ ದೇಶಪಾಂಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಮುಖ್ಯ ವಕ್ತಾರರನ್ನು ಪರಿಚಯಿಸಿದರು. ಸಮರ್ಥ ಕಾಂತಾವರ ಸಂವಾದಕರನ್ನು ಪರಿಚಯಿಸಿದರು. ಸಹ ಕಾರ್ಯದರ್ಶಿಗಳಾದ ವಾಸುಕಿ ಷಣ್ಮುಖಪ್ರಿಯ ಕಾರ್ಯಕ್ರಮ ನಿರೂಪಿಸಿದರೆ, ಪ್ರಭಂಜನ ಮುತ್ತಗಿ ವಂದನಾರ್ಪಣೆ ಮಾಡಿದರು. ಸುಮಾರು 35ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಹಾಗೂ ಶ್ರೋತೃಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

