ಕುಳಾಯಿ/ಹೊಸಬೆಟ್ಟು: ಶ್ರೀಮಾತಾ ಭಜನಾ ಮಂಡಳಿ ಕುಳಾಯಿ ಹೊಸಬೆಟ್ಟು ಇವರ ಆಶ್ರಯದಲ್ಲಿ 'ಆಟಿದ ಪೊರ್ಲು' ಕಾರ್ಯಕ್ರಮವು ಇತ್ತೀಚೆಗೆ ಮಂದಾರ ಹೊಸಬೆಟ್ಟುವಿನಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ಶಕುಂತಲಾ ರಮಾನಂದ ಭಟ್ ಇಡ್ಯಾ ಅವರು, "ಶ್ರೀಮಾತಾ ಭಜನಾ ಮಂಡಳಿಯಲ್ಲಿ ಸಂಪೂರ್ಣವಾಗಿ ಮಹಿಳಾ ಸದಸ್ಯರೇ ಇದ್ದು, ಕಳೆದ 26 ವರ್ಷಗಳಿಂದ ಸತತವಾಗಿ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಭಜನೆಯ ಮೂಲಕ ಮಹಿಳಾ ಸಂಘಟನೆಯನ್ನು ಹೇಗೆ ಬಲಪಡಿಸಬಹುದು ಮತ್ತು ಬೆಳೆಸಬಹುದು ಎಂಬುದಕ್ಕೆ ಈ ಮಂಡಳಿಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ" ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಮೋಹಿನಿ ವಿಶ್ವೇಶ್ವರ ಬದವಿದೆ ಅವರು ಮಾತನಾಡಿ, "ಭಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುವುದಲ್ಲದೆ, ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಲಭಿಸುತ್ತದೆ" ಎಂದರು. ಅತಿಥಿಗಳಾಗಿದ್ದ ಶ್ರೀ ರಮೇಶ ಟಿ.ಎನ್., ಶ್ರೀ ವಿನಯ ಆಚಾರ್ಯ, ಶ್ರೀ ಸತ್ಯೇಂದ್ರ ಬಾಬು ಹಾಗೂ ಶ್ರೀನಿವಾಸ ಕುಳಾಯಿ ಅವರು ಆಟಿ ತಿಂಗಳ ಸಾಂಸ್ಕೃತಿಕ ಮಹತ್ವ ಮತ್ತು ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಸಾಧಕರಿಗೆ ಗೌರವಾರ್ಪಣೆ:
ಇದೇ ಸಂದರ್ಭದಲ್ಲಿ 70 ವರ್ಷ ಮೇಲ್ಪಟ್ಟ ಮಹಿಳಾ ಸಾಧಕಿಯರಾದ ಪ್ರಮೀಳಾ, ಸಾವಿತ್ರಿ, ರೂಪಾ, ಕಮಲ, ವನಜಾಕ್ಷಿ, ಕಲಾವತಿ ಹಾಗೂ ರಮಾ ವೆಂಕಟ್ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕೃತಿಕ ವೈವಿಧ್ಯ:
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಆಟಿ ಕಳಂಜ, ತುಳು ಹಾಡುಗಳು, ನೃತ್ಯ, ಸಾಂಪ್ರದಾಯಿಕ ಹಳ್ಳಿ ಆಟೋಟಗಳು ಹಾಗೂ ಕರೋಕೆ ಹಾಡುಗಳ ಪ್ರದರ್ಶನ ನಡೆಯಿತು. ಆಗಮಿಸಿದ ಸರ್ವರಿಗೂ ಬೆಲ್ಲ, ಅಕ್ಕಿ, ಹಣ್ಣು-ಹಂಪಲು ಹಾಗೂ ಆಟಿ ತಿಂಗಳ ಸಾಂಪ್ರದಾಯಿಕ ವಿಶೇಷ ತಿನಿಸುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾಲಕ್ಷ್ಮೀ ಅವರು ಪ್ರಾರ್ಥಿಸಿದರು. ಚಂದ್ರಿಕಾ ಎನ್. ಅವರು ಎಲ್ಲರನ್ನೂ ಸ್ವಾಗತಿಸಿದರು. ಬಹುಮಾನಿತರ ಪಟ್ಟಿಯನ್ನು ವಿನುತಾ ರಾವ್ ವಾಚಿಸಿದರು. ಮೀರಾ ರಘುಚಂದ್ರ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

