ಹೂವಿನ ಮಾಟಕ್ಕೆ ಮರುಳಾಗದವರು ಯಾರಿದ್ದಾರೆ? ವಿಧ ವಿಧದ ಬಣ್ಣ ಬಳಿದು, ಅಲಂಕಾರಕ್ಕೆ ಕುಸುಮವ ಬಳಸದೇ ಇರುವವರಾರು? ಹೂವಿನ ಗಿಡವನ್ನು ಪ್ರೀತಿಯಿಂದ ಬೆಳೆಸದೆ ಇರುವವರಾರು? ನಿಜಕ್ಕೂ, ಈ ಪ್ರಕೃತಿಯ ಮಡಿಲಲ್ಲಿ ಬೆಳೆದವರೇ ಪುನೀತರು!
ಪ್ರಕೃತಿಯ ನಿಕಟ ಒಡನಾಟವೇ ಮನುಕುಲದ ಕೊನೆಯ ರಕ್ಷಾಕವಚ. ಸೂರ್ಯನ ಕಡೆಗೆ ತಿರುಗುವ ಹೂಗಳ ಲೋಕದ ವೈಭವವೇ ಅದ್ಭುತ. 'ಹೂವುಗಳು ಸೂರ್ಯನ ಕಡೆಗೆ ಹೊರಳುತ್ತವೆ, ನಮ್ಮ ದಾರಿ ಮಾತ್ರ ಬರಿ ಚಂದ್ರನವರೆಗೆ' ಎಂದು ಯಾರೋ ಹಾಡಿದ್ದಾರಲ್ಲವೇ? ಗೆಲ್ಲಬೇಕೆಂಬ ಛಲ ನಮ್ಮೊಳಗಿದ್ದರೆ, ಸೋಲು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ಯಾವುದೇ ಆರೈಕೆ ಇಲ್ಲದೆ ರಸ್ತೆಬದಿಗಳಲ್ಲಿ, ಕಳೆಗಳ ನಡುವೆ, ತಿದ್ದಿ-ತೀಡದೆಯೂ ಸೊಬಗು ಸೂಸುವ ಹೂಗಳಿವು. ಕೆತ್ತದೇ, ಬಿತ್ತದೇ ಬೆಳೆ ಬೆಳೆಯುವ ಭೂಮಿತಾಯಿಯಂತೆ, ಕಷ್ಟಗಳನ್ನು ಎದುರಿಸಿ ರೂಪುಗೊಳ್ಳುವುದೇ ಸಚ್ಚರಿತ ಬದುಕು. ದಾರಿಬದಿಯಲ್ಲಿ ಸಾಮಾನ್ಯವಾಗಿ ಕಾಣಸಿಗುವ, ತೇರಿನ (ರಥದ) ಆಕಾರದಲ್ಲಿರುವ ಈ ಹೂವನ್ನು ನಮ್ಮತ್ತ 'ರಥದ ಹೂ' ಅಥವಾ 'ರಥಪುಷ್ಪ' ಎಂದು ಕರೆಯುತ್ತಾರೆ. ನಿಮ್ಮ ಕಡೆ ಏನೆಂದು ಕರೆಯುತ್ತೀರಾ?
ಇದು ಹೆಚ್ಚಾಗಿ ಮಳೆಗಾಲದಲ್ಲಿ ಅರಳಿ, ತನ್ನ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಳ್ಳುತ್ತದೆ. ಗಾಢ ಕೆಂಪು ಬಣ್ಣದ ಈ ರಥಪುಷ್ಪದ ವೈಭವ, ಯಾವ ದೇವರ ತೇರು ಬಂದು ನಮ್ಮ ಊರನ್ನು ತಲುಪಿದೆಯೋ ಎನ್ನುವಂತೆ ಹೃನ್ಮನ ಸೆಳೆಯುತ್ತದೆ. ನನ್ನ 'ಪದ ಪಲ್ಲವಿ' ಕವನ ಸಂಕಲನದಲ್ಲಿಯೂ ಈ ರಥದ ಹೂವಿನ ಬಗ್ಗೆ ಒಂದು ಹಾಡನ್ನು ಬರೆದಿದ್ದೇನೆ.
ಪೂಜೆಗಳಲ್ಲಿ ರಥಾರತಿಯನ್ನು ನೋಡಿ ಆನಂದಿಸಿದ್ದೇವೆ. ರಥಪುಷ್ಪವು ಪ್ರಕೃತಿ ಪೂಜೆಯ ಅಲಂಕಾರವನ್ನು ಹೆಚ್ಚಿಸಿದರೆ, ಅದರ ಮುಂದೆ ಮಾನವನ ಯಾವ ತಂತ್ರಜ್ಞಾನವೂ ಸಾಟಿಯಿಲ್ಲ. ಪ್ರಕೃತಿಗೆ ಪ್ರಕೃತಿಯೇ ಸಾಟಿ! ಯಾವುದೇ ಬ್ಯೂಟಿ ಪಾರ್ಲರ್ ಇಲ್ಲ, ಫಿಲ್ಟರ್ ಇಲ್ಲ; ಆದರೂ ಇಷ್ಟೊಂದು ಗಾಢವಾದ ಕೆಂಪು ಬಣ್ಣವನ್ನು ಈ ಹೂವಿಗೆ ಬಳಿದವರಾರು? ಎಷ್ಟೋ ಬಾರಿ ಕಳೆ ಎಂದು ಕಿತ್ತು ಬಿಸಾಡಿದರೂ, ಮತ್ತೆ ಛಂಗನೆ ಮೇಲೆದ್ದು ತನ್ನ ಸೊಬಗನ್ನು ಹರಡುವ ಈ ಹೂವುಗಳು, ಬಿದ್ದರೂ ಎದ್ದು ನಿಲ್ಲುವ ನಿಜವಾದ ಸಾಧಕನಿಗೆ ಸಂಕೇತದಂತಿವೆ.
ಮೌನವಾಗಿ ಅರಳುವ ಹೂಗಳ ಮೇಲೆ ಪಾತರಗಿತ್ತಿಯರ ಹಾರಾಟ, ಹಕ್ಕಿಪಿಕ್ಕಿಗಳ ಕಲರವ, ಮಳೆಹನಿಯ ಸಂಗೀತದ ಝೆಂಕಾರ... ಯಾರ ಮೆಚ್ಚುಗೆಯನ್ನೂ ಕಾಯದೆ ತನ್ನ ಸೌಂದರ್ಯವನ್ನು ಜಗತ್ತಿಗೆ ನೀಡುವ ಹೂವಿನೊಳಗೆ ನೈಜ ಶಾಂತಿ ಅಡಗಿದೆ. ಹೊಸದಾಗಿ ಹೂವಾದಾಗ ಸಿಗುವ ಆ ಸಂತೋಷವೇ ಬೇರೆಯಲ್ಲವೇ?
ಹೂಗಳು ಅರಳಿದಾಗ ನಗುತ್ತವೆ, ಅವುಗಳನ್ನು ನೋಡಿದಾಗ ನಾವೂ ನಗುತ್ತೇವೆ. ಮೊಬೈಲ್ ಫೋನ್ ಪಕ್ಕಕ್ಕಿಟ್ಟು ಪ್ರಕೃತಿಯ ಜೊತೆ ಸಮಯ ಕಳೆಯಿರಿ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಕೃಷಿ ಮಾಡಿ ಬೆಳೆ ಬೆಳೆಯುವುದು ಸುಲಭವಿರಬಹುದು, ಆದರೆ ನಿಜವಾದ ರೈತನಾಗಲು ಧೈರ್ಯ ಬೇಕು. ಪ್ರಕೃತಿದತ್ತವಾಗಿ ಬೆಳೆಯುವ ಗಿಡಮೂಲಿಕೆಗಳು ಮತ್ತು ಮರಗಿಡಗಳು ಈ ಭೂಮಿಗೆ ಆಭರಣಗಳಿದ್ದಂತೆ. ಇವು ಪ್ರಕೃತಿ ನಮಗೆ ನೀಡಿದ ಸಂಜೀವಿನಿ!
– ಕುಮಾರ್ ಪೆರ್ನಾಜೆ, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

