ತ್ಯಾಗದ ಫಲವೇ ಭಾರತದ ಸ್ವಾತಂತ್ರ್ಯ...

Upayuktha
0

 



ಮ್ಮ ಭಾರತಕ್ಕೆ ಆಗಸ್ಟ್ 15 ಬರೀ ದಿನವಲ್ಲ. ಇದು ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕಣ ಕಣದಿಂದ ಹೋರಾಡಿ ಸ್ವಾತಂತ್ರ್ಯ ಪಡೆದ ದಿನ. ಇದು ಶೌರ್ಯ, ಶಾಂತಿ, ನ್ಯಾಯ, ಸತ್ಯ ಮತ್ತು ಅಹಿಂಸೆಯ ಪ್ರತೀಕವಾದ ದಿನ. ಈ ದಿನ ಕೇವಲ ವೇದಿಕೆಯ ಭಾಷಣಕ್ಕೆ, ಧ್ವಜಾರೋಹಣಕ್ಕೆ ಸೀಮಿತವಾಗಬಾರದು. ಇದು ನಾಡು-ನುಡಿಯ ಅಭಿಮಾನದ ದಿನವಾಗಬೇಕು. ದೇಹದ ಪ್ರತಿಕ್ಷಣವೂ "ಭಾರತ್ ಮಾತಾಕಿ ಜೈ" ಎಂದು ಗುಡುಗುವ ದಿನವಾಗಬೇಕು. ದೇಶದ ಪ್ರತಿ ಮನೆ-ಮನೆಯಲ್ಲಿ "ಜೈ ಹಿಂದ್" ಮೊಳಗುವ ದಿನವಾಗಬೇಕು.


ನಾನು ಭಾರತೀಯನಾಗಿರುವುದು ನನ್ನ ಭಾಗ್ಯ. ನನ್ನ ನಾಡು ಕನ್ನಡ ನಾಡು. ನನ್ನ ಜಿಲ್ಲೆ ಬಾಗಲಕೋಟೆ. ನನ್ನ ತಾಲೂಕು ಹುನಗುಂದ. ನನ್ನ ಊರು ಹಿರೇಮಾಗಿ. ನನ್ನ ಹೆಸರು ಕನ್ನಡಿಗ. ಇದು ಕೇವಲ ವಿಳಾಸವಲ್ಲ. ಇದು ನನ್ನ ಹೆಮ್ಮೆಯ ಗುರುತು. ಹಂಪಿಯ ಪರಂಪರೆಯಿಂದ ಹಿಡಿದು ಹುನಗುಂದದ ಮಣ್ಣಿನವರೆಗೆ, ತುಂಗಭದ್ರೆಯಿಂದ ಕಾವೇರಿವರೆಗೆ ಹರಿಯುವ ರಕ್ತ ಒಂದೇ. ಅದು ಭಾರತೀಯತೆಯ ರಕ್ತ.


ನಾವು ಪಡೆದದ್ದು ಬರೀ ಸ್ವಾತಂತ್ರ್ಯವಲ್ಲ. ಅದು ಸಾವಿರಾರು ಹುತಾತ್ಮರ ಪ್ರಾಣದ ಬೆಲೆ. ಇಂದು ಆಗಸ್ಟ್ 15. ಇದು ಬರೀ ಒಂದು ದಿನವಲ್ಲ. ಇದು ಕೋಟ್ಯಂತರ ಭಾರತೀಯರ ಕನಸು. ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದ ಫಲ. ಭಾರತೀಯರ ರಕ್ತದಿಂದ, ಹುತಾತ್ಮರ ಪ್ರಾಣದಿಂದ ನಾವು ಪಡೆದ ಪವಿತ್ರ ದಿನವೇ ಈ ಸ್ವಾತಂತ್ರ್ಯ ದಿನ. 


ಈ ದಿನ ನಾವು ಹಾರಿಸಿದ್ದು ಬರೀ ಮೂರು ಬಣ್ಣದ ತ್ರಿವರ್ಣ ಧ್ವಜವಲ್ಲ. ಆ ಕೇಸರಿ ಬಣ್ಣದಲ್ಲಿ ಭಗತ್ ಸಿಂಗ್ ಅವರ ಧೀರ ನಗುವಿದೆ. ಬಿಳಿ ಬಣ್ಣದಲ್ಲಿ ಮಹಾತ್ಮ ಗಾಂಧಿಯವರ ಸತ್ಯ-ಅಹಿಂಸೆಯ ನೀತಿಪಾಠವಿದೆ. ಹಸಿರು ಬಣ್ಣದಲ್ಲಿ ದೇಶದ ಫಲವತ್ತಾದ ಮಣ್ಣಿನ ಭರವಸೆಯಿದೆ. ಆ ಧ್ವಜದ ಮಧ್ಯದ ಅಶೋಕ ಚಕ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಕತ್ತಿಯ ಶೌರ್ಯ, ಸುಭಾಷ್ ಚಂದ್ರ ಬೋಸ್ ಅವರ ವೀರಾವೇಶ, ಒನಕೆ ಓಬವ್ವನ ಒನಕೆಯ ಗತ್ತು, ಮಂಗಳಪಾಂಡ್ಯನ ಪರಾಕ್ರಮ - ಎಲ್ಲವೂ ತುಂಬಿ ತುಳುಕುತ್ತಿದೆ. 


ಎರಡು ನೂರಕ್ಕೂ ಹೆಚ್ಚು ವರ್ಷಗಳ ಕಾಲ ಬ್ರಿಟಿಷರು ನಮ್ಮ ತಾಯ್ನಾಡನ್ನು ಲೂಟಿ ಮಾಡಿದರು. ನಮ್ಮವರ ಅನ್ನ ತಿಂದು, ನಮ್ಮವರನ್ನೇ ಕೀಳಾಗಿ ಕಂಡರು. ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆದರು. ನಮ್ಮ ಸಂಸ್ಕೃತಿಯ ಬೇರನ್ನೇ ಅಳಿಸಲು ಹವಣಿಸಿದರು. ದೇವಾಲಯಗಳನ್ನು ಕೆಡವಿದರು, ಭಾಷೆಯನ್ನು ಹೀಯಾಳಿಸಿದರು ಹಾಗೂ ಇತಿಹಾಸವನ್ನು ತಿರುಚಿದರು. ಆದರೂ ನಮ್ಮ ಭಾರತೀಯರು ಬಗ್ಗಲಿಲ್ಲ, ಅಂಜಲಿಲ್ಲ, ಅಳುಕಲಿಲ್ಲ. ಅವರು ಅಕ್ಷರದ ಆಯುಧದಿಂದ, ಸತ್ಯದ ಶಕ್ತಿಯಿಂದ, ಅಹಿಂಸೆಯ ಅಗ್ನಿಯಿಂದ ಹೋರಾಡಿದರು. ಜೈಲಿನ ಕತ್ತಲೆಯಲ್ಲೂ ದೇಶದ ಬೆಳಕಿನ ಕನಸು ಕಂಡರು. ಗಲ್ಲಿಗೇರುವಾಗಲೂ "ವಂದೇ ಮಾತರಂ" ಎಂದು ಗುಡುಗಿದರು. 


ಈ ತ್ಯಾಗದ ಕಥೆಯೇ ನಮ್ಮ ರಾಷ್ಟ್ರದ ಗುರುತು. ಇದು ಕೇವಲ ಇತಿಹಾಸದ ಪುಟವಲ್ಲ. ಇದು ನಮ್ಮ ಪ್ರತಿ ಉಸಿರಿನಲ್ಲಿರುವ ಜೀವನದ ಪಾಠ. ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟಿಷರಿಂದ ಮುಕ್ತವಾಗುವುದು ಮಾತ್ರವಲ್ಲ. ಅದು ಬಡತನದಿಂದ ಮುಕ್ತಿ, ಅಜ್ಞಾನದಿಂದ ಮುಕ್ತಿ, ಜಾತಿ-ಮತ ಭೇದದಿಂದ ಮುಕ್ತಿ, ಭ್ರಷ್ಟಾಚಾರದಿಂದ ಮುಕ್ತಿ. 


ಆದ್ದರಿಂದ ಈ ಸ್ವಾತಂತ್ರ್ಯದ ದಿನದಂದು ನಾವು ಪ್ರತಿಜ್ಞೆ ಮಾಡೋಣ. ನಮ್ಮ ಧ್ವಜದ ಗೌರವವನ್ನು ನಮ್ಮ ನಡತೆಯಲ್ಲಿ ಎತ್ತಿ ಹಿಡಿಯೋಣ. ನಾವು ಬದುಕೋಣ, ಮತ್ತೊಬ್ಬರನ್ನು ಬದುಕಿಸೋಣ. ರೈತನ ಬೆವರು, ಯೋಧನ ರಕ್ತ, ಶಿಕ್ಷಕನ ಅಕ್ಷರ, ವಿಜ್ಞಾನಿಯ ಸಂಶೋಧನೆ- ಇವೆಲ್ಲವೂ ಸೇರಿದಾಗಲೇ ನಿಜವಾದ ಸ್ವರ್ಣ ಭಾರತ ನಿರ್ಮಾಣವಾಗುವುದು. "ನನ್ನ ದೇಶವೇ ನನ್ನ ದೇವರು, ನನ್ನ ನಾಡೇ ನನ್ನ ಮಂತ್ರ" ಎಂಬ ಭಾವನೆ ಪ್ರತಿಯೊಬ್ಬರ ಎದೆಯಲ್ಲಿ ಮೊಳಗಲಿ.


ಇಂದು ಗಾಂಧೀಜಿಯವರನ್ನು, ರಾಯಣ್ಣನನ್ನು, ಅಂಬೇಡ್ಕರ್ ಅವರನ್ನು, ರಾಣಿ ಚೆನ್ನಮ್ಮ ಅವರನ್ನು, ಸುಭಾಷ್ ಚಂದ್ರ ಬೋಸ್ ಅವರನ್ನು, ಭಗತ್ ಸಿಂಗ್ ಅವರನ್ನು ಹೆಮ್ಮೆಯಿಂದ ಸ್ಮರಿಸುವ ಪವಿತ್ರ ದಿನ. ಅವರ ತ್ಯಾಗದ ಕಥೆ ಕೇವಲ ಇತಿಹಾಸದ ಪುಟಗಳಲ್ಲ. ಅದು ನಮ್ಮ ರಕ್ತದಲ್ಲಿ ಹರಿಯುವ ದೇಶಭಕ್ತಿಯ ಮಂತ್ರ. ಗಾಂಧೀಜಿಯ ಸತ್ಯ-ಅಹಿಂಸೆ, ರಾಯಣ್ಣನ ನಿಷ್ಠೆ-ಶೌರ್ಯ, ಅಂಬೇಡ್ಕರ್ ಅವರ ಸಮಾನತೆ-ಸಂವಿಧಾನ, ಚೆನ್ನಮ್ಮನ ಕತ್ತಿಯ ಕಿಡಿ, ಬೋಸ್ ಅವರ ವೀರಾವೇಶ, ಭಗತ್ ಸಿಂಗ್ ಅವರ ಧೀರ ನಗೆ - ಇವೆಲ್ಲವೂ ಸೇರಿದಾಗಲೇ ನಮಗೆ ಸ್ವಾತಂತ್ರ್ಯ ದೊರಕಿತು ಎಂಬ ಮಾತು ಸದಾ ನೆನಪಿರಲಿ.


ಈ ದಿನದಂದು ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ನಮ್ಮ ತ್ರಿವರ್ಣ ಧ್ವಜವನ್ನು ಎತ್ತರದಲ್ಲಿಯೇ ಹಾರಾಡುವಂತೆ ನೋಡಿಕೊಳ್ಳುತ್ತೇನೆ. ನನ್ನ ನಾಡಿಗಾಗಿ, ನನ್ನ ದೇಶಕ್ಕಾಗಿ ಬದುಕುತ್ತೇನೆ. ಅಗತ್ಯವಿದ್ದರೆ ದೇಶಕ್ಕಾಗಿ ಪ್ರಾಣವನ್ನೂ ಕೊಡುತ್ತೇನೆ.  ಈ ಮಣ್ಣೇ ನನ್ನ ದೇವರು. ನನ್ನೂರಿನ ಜನರೇ ನನ್ನ ಉಸಿರು. ರಾಷ್ಟ್ರ ಧ್ವಜವೇ ನನ್ನ ಪ್ರಾಣ. ಜಾತಿ, ಮತ, ಭಾಷೆ, ಪ್ರಾಂತದ ಗೋಡೆಗಳನ್ನು ಒಡೆದು "ಒಂದೇ ಮಾತರಂ, ಒಂದೇ ದೇಶ, ನಾವು ಒಂದೇ" ಎಂಬ ಭಾವನೆ ನಮ್ಮ ಎದೆಯಲ್ಲಿ ಮೊಳಗಬೇಕು. 


ಹುತಾತ್ಮರ ರಕ್ತದಿಂದ ಪಡೆದ ಈ ತ್ರಿವರ್ಣಕ್ಕೆ ನಾವು ಮಾಡುವ ನಿಜವಾದ ಗೌರವವೆಂದರೆ, ನಮ್ಮ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವುದು, ನಮ್ಮ ಕೆಲಸವನ್ನು ದೇಶಕ್ಕಾಗಿ ಅರ್ಪಿಸುವುದು. ದೇಶವು ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ, ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ.


- ಮುತ್ತು ಯ. ವಡ್ಡರ  

ಶಿಕ್ಷಕರು, ಹಿರೇಮಾಗಿ  

ಬಾಗಲಕೋಟೆ

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top