ಮಾಸದ ನೆನಪು: ಅಪರೂಪದ ರಾಜಕಾರಣಿ ಕಡಪಟ್ಟಿ

Upayuktha
0

 



ಹುನಗುಂದ: ಸದಾ ಸರಳತೆಯ ಸ್ವಭಾವ ಮತ್ತು ನೇರ, ನಿಷ್ಠುರ ನಡೆಯ ರಾಜಕಾರಣಿಯಾಗಿದ್ದ ಶಿವಸಂಗಪ್ಪ ಸಿದ್ದಪ್ಪ ಕಡಪಟ್ಟಿ ನೆನಪು ಮೂರುವರೆ ದಶಕಗಳು ಸಂದರೂ ಇನ್ನೂ ಮಾಸದು. ಹೀಗೊಬ್ಬ ಶಾಸಕರು ಇದ್ದರಾ! ಎಂದು ಇಂದು ಊಹಿಸುವುದು ಸಾಧ್ಯವಿಲ್ಲ. 


ಹುನಗುಂದ ತಾಲೂಕಿನ ರಾಜಕಾರಣದಲ್ಲಿ ಅನೇಕರು ಬಂದು ಹೋಗಿದ್ದಾರೆ; ಶಾಸಕ, ಸಚಿವರೂ ಆಗಿದ್ದಾರೆ. ತಾನು ನಂಬಿದ ಆದರ್ಶ ಹಾಗೂ ತತ್ವಗಳಿಗೆ ಬದ್ಧರಾಗಿದ್ದ ಇಂಥ ರಾಜಕಾರಣಿಯನ್ನು ಇಂದು ಕಾಣುವುದು ದುರ್ಲಭ. ತಮ್ಮ ಎರಡು ಅವಧಿಯ ರಾಜಕೀಯದಲ್ಲಿ ಸರಳತೆ ಮತ್ತು ಜನಸೇವೆಗೆ ಒತ್ತು ನೀಡಿದ ಅಪರೂಪದ ರಾಜಕಾರಣಿ.


ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ, 1934 ರಲ್ಲಿ ಜನಿಸಿದ ಇವರು ಬಿ.ಕಾಂ. ಪದವೀಧರರು. ವಿದ್ಯಾಭ್ಯಾಸದ ನಂತರ ತಂದೆ ಸಿದ್ದಪ್ಪ ಮಾಸ್ತರ ಗರಡಿಯಲ್ಲಿ ಬೆಳೆದರು. ಅಪ್ಪನೊಂದಿಗೆ ಕೃಷಿ ಮತ್ತು ವ್ಯಾಪಾರ ಮಾಡುತ್ತಿದ್ದಾಗ ಆಕಸ್ಮಿಕವಾಗಿ ರಾಜಕೀಯದಲ್ಲಿ ಬಂದು 1983 ಮತ್ತು 1985 ರಲ್ಲಿ ಹುನಗುಂದ ವಿಧಾನಸಭಾ ಶಾಸಕರಾಗಿ ಎರಡು ಅವಧಿಗೆ ಕಾರ್ಯ ಮಾಡಿದರು.


ಜಿಗುಟುತನ ಮತ್ತು ಸ್ವಾಭಿಮಾನವನ್ನು ಬದುಕಿನುದ್ದಕ್ಕೂ ರೂಢಿಸಿಕೊಂಡಿದ್ದ ಇವರು ಮನಸು ಮಾಡಿದ್ದರೆ ಸಚಿವರಾಗಬಹುದಿತ್ತು. ಆಳುವ ಅಂದಿನ ಜನತಾದಳ ಪಕ್ಷದ ಸರ್ಕಾರಕ್ಕೆ ಎಸ್.ಏಕಾಂತಯ್ಯ ನೇತೃತ್ವದಲ್ಲಿ ಶಾಸಕರನ್ನು ಕೂಡಿಸಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಬೆಚ್ಚಿ ಬೀಳಿಸಿದ್ದು ಇವರ ನಾಯಕತ್ವ ಮತ್ತು ಜನಕಲ್ಯಾಣದ ರಾಜಕೀಯಕ್ಕೆ ಸಾಕ್ಷಿ.


1961ರಲ್ಲಿ ಹುನಗುಂದದಂತಹ ಗ್ರಾಮೀಣ ಪ್ರದೇಶದಲ್ಲಿ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಸ್ಥಾಪಿಸಿದ ಕೀರ್ತಿ ಇವರದು. ಆಧುನಿಕ ಶಿಕ್ಷಣ ಹಾದಿಗೆ ಈ ತಾಲೂಕನ್ನು ಮುಖ ಮಾಡಿಸಿದ್ದಕ್ಕೆ ಅವರು ಸ್ಥಾಪಿಸಿದ ಪಾಲಿಟೆಕ್ನಿಕ್ ಹತ್ತಾರು ಸಾವಿರ ಮಕ್ಕಳಿಗೆ ಬದುಕಿಗೆ ಬೆಳಕಾಯಿತು. ಇಲ್ಲಿನ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರ್ಮನ್ ಆಗಿ ಸಂಘವನ್ನು ಮುನ್ನಡಿಸಿದ್ದರು.


ಕೃಷಿಯಲ್ಲಿ ಅಪಾರ ಒಲವಿದ್ದ ಇವರು ಸುಧಾರಿತ ಕೃಷಿ ಪದ್ಧತಿ, ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆ ಬೆಳೆಯಲು ತಾವೇ ಪ್ರಯೋಗ ಮಾಡಿ ಮಾದರಿಯಾದರು.


ನಾರಾಯಣಪುರ ಜಲಾಶಯಕ್ಕೆ ಬಸವಸಾಗರ ಹೆಸರು, ಪ್ರಾದೇಶಿಕ ಅಸಮತೋಲನ ವರದಿ (ಡಾ.ಡಿ.ಎಂ. ನಂಜುಡಪ್ಪ ವರದಿ) ಸಾಕಾರ, ಶಿಕ್ಷಣ, ನೀರಾವರಿ ಮತ್ತು ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ ಜನಕಲ್ಯಾಣ ಬಯಸುವ ನಿಜ ಜನಪ್ರತಿನಿಧಿ. 


ಅಬ್ಬರ ಮತ್ತು ಪ್ರಚಾರ ರಾಜಕಾರಣದಿಂದ ತುಂಬಾ ದೂರವಿದ್ದ ಕಡಪಟ್ಟಿ ಅವರು ಅವಶ್ಯಕತೆ ಇದ್ದಾಗ ಮಾತ್ರ ರಾಜಧಾನಿಯಲ್ಲಿ ಇರುತ್ತಿದ್ದರು. ವೇದಿಕೆ ಏರದೆ ನೆಲದ ಮರೆಯ ನಿಧಾನದಂತೆ ಜನರ ಕೆಲಸ ಮಾಡುತ್ತಿದ್ದರು. ಎಂದೂ ಬಡಾಯಿ ಕೊಚ್ಚಿಕೊಳ್ಳದ ಸಜ್ಜನ ರಾಜಕಾರಣಿ ಎಂದರೆ ಅತಿಶಯೋಕ್ತಿಯಲ್ಲ.


ಯಾವತ್ತೂ ತಮ್ಮ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದ ಸರಳ ವ್ಯಕ್ತಿ. 90 ರ ದಶಕದ ರಾಜಕಾರಣ ಕ್ಷೇತ್ರದಲ್ಲಿನ ಅಭಿಮಾನಿಗಳ ಪ್ರೀತಿಯ 'ಅಣ್ಣಾವ್ರು' ಎಂದು ಕರೆಯಿಸಿಕೊಳ್ಳುವ ಕಡಪಟ್ಟಿಯವರು ಯಾವತ್ತೂ ಮರೆಯದ ಜನಜನಿತ ರಾಜಕಾರಣಿ.


- ಎಸ್ಕೆ ಕೊನೆಸಾಗರ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top