ಮನುಷ್ಯತ್ವ ಉಳಿಯಬೇಕಾದರೆ ಸಾಹಿತ್ಯ ಉಳಿಯಬೇಕು: ಡಾ. ಮಾನಸಾ ಕೀಳಂಬಿ

Upayuktha
0

 


ಮೂಡುಬಿದಿರೆ: ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವ ಶಕ್ತಿ ಸಾಹಿತ್ಯಕ್ಕಿದೆ. ಆದ್ದರಿಂದ ಸಾಹಿತ್ಯದ ಉಳಿವು ಎಂದರೆ ಮನುಷ್ಯತ್ವದ ಉಳಿವು ಎಂದು  ಖ್ಯಾತ ಸಾಹಿತಿ, ಬೋಧಕಿ ಹಾಗೂ ಬರಹಗಾರ್ತಿ ಡಾ. ಮಾನಸಾ ಕೀಳಂಬಿ ನುಡಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಕಾಲೇಜಿನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾಹಿತ್ಯ: ‘ಇ’ ಹೊತ್ತಗೆ – ಈ ಹೊತ್ತಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಹಿತ್ಯವೂ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಜನರಲ್ಲಿ ಸಮಯದ ಅಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಓದುವ ಹಾಗೂ ಅಭಿವ್ಯಕ್ತಿಸುವ ವಿಧಾನಗಳಲ್ಲೂ ಬದಲಾವಣೆಗಳಾಗುತ್ತಿವೆ. ಇಂದಿನ ದಿನಗಳಲ್ಲಿ ಸಾಹಿತ್ಯವು ಡಿಜಿಟಲ್ ಸ್ವರೂಪ ಪಡೆದುಕೊಂಡಿದ್ದು, ಇ-ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹೆಚ್ಚಿನ ಓದುಗರನ್ನು ತಲುಪುತ್ತಿದೆ. ‘ಇ-ಸಾಹಿತ್ಯ ಇಂದಿನ ಕಾಲಘಟ್ಟದ ಅನಿವಾರ್ಯತೆ’ ಎಂದು ತಿಳಿಸಿದ ಅವರು, ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟವಾಗುವ ಸಾಹಿತ್ಯಕ್ಕೆ ತಕ್ಷಣ ಪ್ರತಿಕ್ರಿಯೆ ದೊರೆಯುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿರುವ ಅಪರೂಪದ ಹಾಗೂ ಹಳೆಯ ಸಾಹಿತ್ಯ ಕೃತಿಗಳನ್ನೂ ಡಿಜಿಟಲ್ ಮೂಲಕ ಸುಲಭವಾಗಿ ಓದಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯ ಸೃಷ್ಟಿಸುವ ಅವಕಾಶವೂ ಇಂದು ದೊರೆತಿದೆ ಎಂದರು.

ಸಾಹಿತ್ಯದ ವ್ಯಾಪ್ತಿ ಸಾಂಪ್ರದಾಯಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕ ವಿಚಾರಗಳು, ಮಕ್ಕಳ ಮಾನಸಿಕ ಆರೋಗ್ಯ, ಲಿಂಗಾಧಾರಿತ ವಿಚಾರಗಳು ಹಾಗೂ ಸಮಕಾಲೀನ ಸಾಮಾಜಿಕ ಬದಲಾವಣೆಗಳು ಕೂಡ ಸಾಹಿತ್ಯಕ್ಕೆ ಪ್ರಮುಖ ವಸ್ತು ವಿಷಯಗಳಾಗುತ್ತಿವೆ. ಈ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸಾಹಿತ್ಯ ಪ್ರತಿಬಿಂಬಿಸುತ್ತಿದೆ ಎಂದರು. ಡಿಜಿಟಲ್ ಸಾಹಿತ್ಯದ ಬೆಳವಣಿಗೆಯಿಂದ ಭಾಷೆಯ ಬಳಕೆಯಲ್ಲಿಯೂ ಬದಲಾವಣೆಗಳಾಗುತ್ತಿವೆ. ಶುದ್ಧ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕವಿದ್ದರೂ, ಹೊಸ ತಲೆಮಾರನ್ನು ಸಾಹಿತ್ಯದತ್ತ ಸೆಳೆಯುವಲ್ಲಿ ಡಿಜಿಟಲ್ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.


ವಿಜ್ಞಾನ ಮತ್ತು ತಂತ್ರಜ್ಞಾನದಿAದ ಮಾತ್ರ ಮಾನವ ಬದುಕು ಸಂಪೂರ್ಣವಾಗುವುದಿಲ್ಲ. ಮಾನವನ ಮನಸ್ಸಿನ ವಿಕಾರಗಳನ್ನು ಕಡಿಮೆ ಮಾಡಿ ಮಾನವೀಯತೆಯನ್ನು ಬೆಳೆಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಓದುವುದರಿಂದ ಸ್ಪಷ್ಟವಾಗಿ ಮಾತನಾಡುವ ಸಾಮರ್ಥ್ಯ ವೃದ್ಧಿಸುವುದರೊಂದಿಗೆ ಸಾಂಸ್ಕೃತಿಕ ಮೌಲ್ಯಗಳು ಮತ್ತು ಉತ್ತಮ ಚಿಂತನೆಗಳು ಬೆಳೆಯುತ್ತವೆ. ಸಾಹಿತ್ಯ ರಚನೆ ಹಾಗೂ ಓದಿಗೆ ಏಕಾಗ್ರತೆ ಮತ್ತು ಧ್ಯಾನಸ್ಥ ಮನಸ್ಸು ಅಗತ್ಯ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಪುಸ್ತಕದ ಸ್ವರೂಪ ಹಾಗೂ ಓದುವ ವಿಧಾನಗಳು ಬದಲಾಗಬಹುದು; ಆದರೆ ಸಾಹಿತ್ಯದ ಮೂಲ  ಆಶಯ ಮತ್ತು ಅದರ ಸತ್ವ ಎಂದಿಗೂ ಬದಲಾಗಬಾರದು ಎಂದರು. ಇಂದಿನ ಮತ್ತು ಹಿಂದಿನ ಪೀಳಿಗೆಗಳ ನಡುವೆ ಅಂತರವಿದ್ದರೂ, ಹಿರಿಯರ ಅನುಭವ ಮತ್ತು ಯುವಜನರ ಜ್ಞಾನ-ಚಿಂತನೆಗಳು ಒಂದಾಗುವ ಮೂಲಕ ಹೊಸದನ್ನು ಸೃಷ್ಟಿಸಬಹುದು. ವೇಗದ ಜೀವನಶೈಲಿಯಿಂದ ವಿದ್ಯಾರ್ಥಿಗಳಲ್ಲಿ ತಾಳ್ಮೆಯ ಕೊರತೆ ಕಂಡುಬರುತ್ತಿದ್ದು, ಅವರು ತಾಳ್ಮೆ, ಶಿಸ್ತು ಮತ್ತು ನಿಯಂತ್ರಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಸ್ತು ಮತ್ತು ನಿಯಂತ್ರಣವನ್ನು ಬೆಳೆಸುವ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ  ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ ಎನ್, ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಇದ್ದರು.  


ಹಿಂದಿ ವಿಭಾಗದ ಉಪನ್ಯಾಸಕ ರಾಮಕೃಷ್ಣ ಸ್ವಾಗತಿಸಿ, ಕನ್ನಡ ವಿಭಾಗದ  ಉಪನ್ಯಾಸಕ ಡಿ.ವಿ. ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿ, ಕನ್ನಡ ವಿಭಾಗದ ಮಹೇಶ್ ವಂದಿಸಿದರು. 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top