ಕವಿತೆ- ಬೆಳ್ವೊಲದ ಮಡಿಲು

Upayuktha
0


ನ್ನಡದ ಹಿರಿಮೆಯನು

ಅರಿತು ಬೆಳೆಸುವುದಕೆ

ಮಾತೃಭಾಷೆ ಅಭಿಮಾನ

ಕಾರ್ಯಗತಗೊಳಿಸಲಿಕೆ 

ಮನಸ್ವಿನಿ ಮನಸುಗಳು

ನಗುನಗುತ ಜೊತೆಯಾಗಿ

ಪಂಪಕವಿ ಮಾರ್ಗದಲಿ

ಪಯಣಿಸಿದರಂದು.


ಅಲ್ಲೊಂದು ಪಚ್ಚೆ ಪಸುರಿನ ಧಾಮ

ಬಲು ಪ್ರಸಿದ್ಧಿಯ ಪಡೆದು

ಬರಡು ಭೂಮಿಯನು ಮೆಟ್ಟಿ

ಸಸ್ಯಕಾಶಿಯ ಬೆಳೆದು  

ಚೆಲುವಿನೈಸಿರಿ ಹಸಿರಸಿರಿ ತಾಣವಾಗಿಹುದು !

ಬೆರಗುಗೊಳಿಸುವ ತೆರದಿ

'ಸುನೀತಾ ರತ್ನಾಕರ'ರು

ಪರಿಸರ ಪ್ರಿಯರವರು

ಸತತ ಪರಿಶ್ರಮದಿ

ಕಲ್ಲರಳಿಸಿ ಹೂವಾಗಿಸಿಹರು..!!


'ಬನವಾಸಿ'ಯೆಂಬೊಂದು

ಕಲ್ಪನೆಯ ಚಿತ್ತಾರ

ಸ್ಪೂರ್ತಿಧಾರೆಯನೆರೆದು

ಕನಸದು ಪೂರ್ಣ ಸಾಕಾರ..!

ಹೃದಯ ಸಿರಿತನದಿವರು

ಅತಿಥಿಗಳ ಸ್ವಾಗತಿಸುವರು !!


'ನಗುಮೊಗ'ದಿ ಮನತುಂಬಿ 

ಸೊಗದಿ ಒಳನಡೆಯೆ,

ಅಭಿಮುಖದಿ 'ಓಸರಿಗೆ'

ಪದದರ್ಥ ಪಡಸಾಲೆ,

ನಡುವೆ ಸಕಲದಕು ಧ್ಯಾನ 'ಪ್ರಣಾಮ'ದ ಕೋಣೆ 

ಮನೆಯ ಮಧ್ಯದ ಕೊಠಡಿ

'ಎಲೆಮನೆ'ಯಲಾತಿಥ್ಯ!!


ಸರಳ ಸಜ್ಜನಿಕೆಯ ಕಾಂತಿ 

ಆದರದ ಸಂಪ್ರೀತಿ 

ಗೃಹಿಣಿ ಸುನೀತರ

'ಒಲೆಮನೆ'ಯಡುಗೆ,

ಕನ್ನಡದ ಚೆನ್ನುಡಿಯ

ಹೊನ್ನುಡಿಯ ಕುಡಿಗಳು.

'ಕೃತಿ ಪ್ರಣವ'ರೆಂಬೆರಡು

 ಮುದ್ದು ಕಂದಮ್ಮಗಳು !!

 

ಕನ್ನಡದ ಅಭಿಧಾನ

ರಾರಾಜಿಸುತಲಿಹುದು

ಮನೆಯ ಒಳಹೊರಗೆಲ್ಲ 

ತೊನೆದಾಡುತಿಹುದು

ಗಡಿನಾಡು ಹೊರನಾಡು ದಾಟಿ,

ಮಲ್ಲಮೂಲೆಯ ಕೀರ್ತಿ

ಮನ್ನಣೆಯ ಪಡೆದಿಹುದು

ಪೆಸರು ಪಸರಿಸುತಾ..!!


ಗೋಡೆಯೊಳು ಅಲ್ಲಲ್ಲಿ 

ಕನ್ನಡದ ಸಿರಿನುಡಿ ಫಲಕ

ಆರಾಮ ಶಯನಗೃಹ,

ನೈರ್ಮಲ್ಯ ಸ್ವಚ್ಛದ ಕೊಠಡಿ !

'ಕಾಯಕವೆ' ಕೈಲಾಸ 

'ಪತ್ತಾಯ' ಭೂಷಣವು  

'ವಿರಾಮ'ವಿಶ್ರಾಂತಿಗೃಹ 

ಸ‌ಂಭಾಷ್ಯ 'ಸಲ್ಲಾಪ'

'ಸುಧಾಮ' ನೇಹಕ್ಕೆ

'ಪ್ರದ್ಯೋತಿ' ಜ್ಞಾನಕ್ಕೆ !!


'ಅಸೀಮ' ಸೀಮಾತೀತ 

'ಕರುಮಾಡ' ಮೇಲ್ಮಹಡಿ 

ಕೊಳವೊಂದು 'ಮಳೆ ಮಗಳು'

ಸುತ್ತ ಕೌಮುದಿ ಸೊಬಗು,

ಪ್ರಜ್ವಲಿಪುದು ನಿಶೆಯ

 ನೇಸರಣುಗ...!

ಭತ್ತ ಕೌಂಗಿನ ತೋಟ

ಹಸಿರುಸಿರು

ಜೀವಾಮೃತ ಪಡೆದು 

ಧನ್ಯತೆಯ ನೋಟ

ವಿಧವಿಧದ ಫಲಗಳಿಂ ಕಂಗೊಳಿಸುತಿಹುದೂ..!!


ಪೂರ್ಣಪ್ರಜ್ಞರ

ಅಸ್ಮಿತೆಯ ದನಿ

ಸಾಧಕರ ಬೆವರ ಹನಿ

ಸವಿಹೃದಯದಾತಿಥ್ಯ

ಮನೆತನದ ಔಚಿತ್ಯ!

ಕಲ್ಲುಕೋರೆಯು ಇಂದು

ಪುಷ್ಪರಾಗದ ಘಮಲು

'ಬನವಾಸಿ' ಉದ್ಯಾನ

ಆಹಾ ಬೆಳ್ವೊಲದ ಮಡಿಲು..!! 


- ಪ್ರಮೀಳಾ ಚುಳ್ಳಿಕ್ಕಾನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top