ಮನಸ್ವಿನಿ ಮಹಿಳಾ ವೇದಿಕೆ ಮತ್ತು ಬನವಾಸಿ ಸಾಹಿತ್ಯ ಯಾನ

Upayuktha
0

 

ಕಾಸರಗೋಡು ಗಡಿನಾಡ ಕನ್ನಡಿಗರದು ಸಂವೇದನಾಶೀಲ ಮನಸು. ಒಳನಾಡು ಕೈಬಿಟ್ಟರೂ ಇವರು ಕನ್ನಡವನ್ನು ಬಿಡಲಿಲ್ಲ; ಇವರ ಕನ್ನಡತನಕ್ಕೆ ಚ್ಯುತಿಯಿಲ್ಲ. ಇದಕ್ಕೆ ಸಾಕ್ಷ್ಯವೆಂಬಂತೆ ಕಾಸರಗೋಡು ತಾಲೂಕಿನ, ಕುಂಬಳೆ - ಬದಿಯಡ್ಕ ರಸ್ತೆಯ, ನೀರ್ಚಾಲಿನಲ್ಲೊಂದು ಪ್ರಕೃತಿಧಾಮವಿದೆ. ಇದರ ಹೆಸರು 'ಬನವಾಸಿ'. ಇಲ್ಲಿಗೆ ಸಾಗುವ ರಸ್ತೆಯ ಹೆಸರು 'ಪಂಪಮಹಾಕವಿ ಮಾರ್ಗ'..!


ನೀರ್ಚಾಲು ಎಂಬುದು ಕಾಸರಗೋಡು ಜಿಲ್ಲೆಯ ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಕೇಂದ್ರ. ಇಲ್ಲಿರುವ ಮಹಾಜನ ಸಂಸ್ಕೃತ ಕಾಲೇಜು ವಿದ್ಯಾಸಂಸ್ಥೆಗೆ ಶತಮಾನಗಳ ಭವ್ಯ ಚರಿತ್ರೆಯಿದೆ. ಕನ್ನಡ ನಾಡು ಹೆಮ್ಮೆ ಪಡುವ ಹಲವು ಮಹಾನ್  ವ್ಯಕ್ತಿಗಳನ್ನು  ರೂಪಿಸಿದ ಸಂಸ್ಥೆಯಿದು‌.  ಇಂತಹ ನೀರ್ಚಾಲಿನಲ್ಲಿ 'ಬನವಾಸಿ' ಧಾಮ ಇರುವುದು ಈ ನಾಡಿಗೆ ಹೆಚ್ಚಿನ ಸೊಬಗು. ಅದರ ಪ್ರತೀಕವಾಗಿ ಹಳೆ-ಹೊಸತು ಸಂಸ್ಕೃತಿ ಕುರುಹುಗಳು ಇನ್ನೂ ಜೀವಂತವಾಗಿವೆ. ಈ ಬಗ್ಗೆ ಕಾಳಜಿ ಇರುವ ಕನ್ನಡಿಗರು ಇಲ್ಲಿದ್ದಾರೆ. ಇಂತಹ ಒಂದು ಪ್ರೇಕ್ಷಣೀಯ ಸ್ಥಳದ ಪರಿಚಯ ಮತ್ತು ಸೌಂದರ್ಯವನ್ನು ಸಮಸ್ತ ಕನ್ನಡಿಗರಿಗೆ ಪರಿಚಯಿಸುವುದು ಈ ಲೇಖನದ ಉದ್ದೇಶ.


ನೀರ್ಚಾಲು ಸಮೀಪದಲ್ಲಿ ಬುರುಡಡ್ಕ ಎಂಬ ಬಂಜರು ಭೂಮಿಯನ್ನು ಫಲವತ್ತಾದ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ, ಅಲ್ಲೊಂದು ವಿನೂತನ ಮಾದರಿಯ ಗೃಹ ನಿರ್ಮಿಸಿ ಇಂದು ಹಲವಾರು ಜನರನ್ನು ಆಕರ್ಷಿಸುವ ಪ್ರವಾಸೀ ತಾಣವನ್ನಾಗಿಸಿದ ಕೀರ್ತಿ ಕಾಸರಗೋಡು ಸರಕಾರಿ ಪದವಿ ಕಾಲೇಜ್ ನ ಪ್ರೊಫೆಸರ್ ಡಾ. ರತ್ನಾಕರ ಮಲ್ಲಮೂಲೆಯವರಿಗೆ ಸಲ್ಲುತ್ತದೆ. ಇತ್ತೀಚೆಗೆ ಅಂದರೆ ಎರಡು ವರ್ಷಗಳ ಹಿಂದೆಯಷ್ಟೇ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿ ವಾಸ್ತವ್ಯ ಹೂಡಿದ್ದಾರೆ. ಆ ಮನೆಯ ಅಂದಚೆಂದ ವರ್ಣಿಸಲಸದಳ. ಅಂತೆಯೇ ಅವರ ಹಾಗೂ ಅವರ ಮನೆ ಮಂದಿಯ ಮನಸ್ಸು, ಹೃದಯ ಶ್ರೀಮಂತಿಕೆ  ಅನುಪಮ. ಅವರ ಅತಿಥಿ ಸತ್ಕಾರಕ್ಕೆ ಮಾರು ಹೋಗದವರೇ ಇಲ್ಲ. ಹೋದವರಿಗೇ ಗೊತ್ತು ಅದರ ಅನುಭವ. ಅವರ ಪತ್ನಿ ಸುನೀತಾ. ಎಂ ಟೆಕ್ ಪದವಿಯನ್ನು ಪಡೆದವರಾದರೂ  ಹಮ್ಮು ಬಿಮ್ಮುಗಳಿಲ್ಲದ ಸರಳ ಸಜ್ಜನಿಕೆಯ ಗುಣ ಸ್ವಭಾವದವರು. ಇವರ ಈರ್ವರು ಮಕ್ಕಳು ಕೃತಿ ಮತ್ತು ಪ್ರಣವ್ ಚಿನಕುರುಳಿಗಳು.ಬಾಲ್ಯದಲ್ಲೇ ಎಲ್ಲರನ್ನೂ ಆದರದಿಂದ ಬರ ಮಾಡಿಕೊಳ್ಳುವ ಸಂಸ್ಕೃತಿ ಹಿರಿಯರಿಂದ ಬಂದ ಸಂಸ್ಕಾರವೆಂದರೆ ಅತಿಶಯೋಕ್ತಿಯಲ್ಲ.



ವಾಸ್ತುಬದ್ಧವಾದ  ಮಾದರಿಯ ಮನೆ ಇದು.  ಸ್ಥಳೀಯ ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿಫಲಿಸುತ್ತಿದೆ. ಇನ್ನು ಮನೆಯ ಪ್ರತಿಯೊಂದು ಕೋಣೆಗೂ ಒಂದೊಂದು  ಅಪರೂಪದ ನಾಮಕರಣ ಮಾಡಿದ್ದಾರೆ. ಬನವಾಸಿಯ ಹೊರಾಂಗಣಕ್ಕೆ ಪ್ರವೇಶ ಪಡೆಯುತಿದ್ದಂತೆಯೇ ನಗುಮೊಗ (ಹೊರಚಾವಡಿ, ಜಗಲಿ) ನಮ್ಮನ್ನು ಕೈಬೀಸಿ ಕರೆಯುತ್ತದೆ. ಹೊಸ್ತಿಲು ದಾಟುತ್ತಿದ್ದಂತೆ ಓಸರಿಗೆ ಅಂದರೆ ಒಳ ಚಾವಡಿ. ಮುಂದಿನ ಕೋಣೆ ಎಲೆಮನೆ ಅಂದರೆ ಊಟದ ಕೊಠಡಿ. ಪಕ್ಕದಲ್ಲೇ ದೇವರ ಕೋಣೆ "ಪ್ರಣಾಮ". ಅದಕ್ಕೆ ತಾಗಿಕೊಂಡೇ ಒಲೆಮನೆ ಅಡುಗೆ ಕೋಣೆ. ದೇವರ ಕೋಣೆಯ ಬಲಭಾಗದಲ್ಲಿ ಆರಾಮ ಹೆಸರಿನ ಶಯನಗೃಹ ಬಳಿಕ ನೈರ್ಮಲ್ಯ ಎಂಬ ಹೆಸರಿನ ಬಚ್ಚಲುಮನೆ ಪಕ್ಕದಲ್ಲಿರುವ ಕೋಣೆ ವಿರಾಮ ಮಕ್ಕಳ ಕೊಠಡಿ. 


ಇನ್ನು ಮಹಡಿಯ ಮೇಲೆ ಹತ್ತಿದಾಗ ಕಾಣುವ ಹಜಾರ ಸಲ್ಲಾಪ- ಇದು ಮಾತುಕತೆಗೆ  ಮೀಸಲು. ಅದಕ್ಕೆ ತಾಗಿಕೊಂಡು ಸುಧಾಮ ಹೆಸರಿನ ಅತಿಥಿ ಗೃಹ (ಗೆಸ್ಟ್ ರೂಮ್) ಅದರ ಎದುರು ಬದಿಯಲ್ಲಿ ಪ್ರದ್ಯೋತಿ ಹೆಸರಿನ ಗ್ರಂಥಾಲಯ/ ವಾಚನಾಲಯ. ಒಂದಷ್ಟು ವ್ಯವಸ್ಥಿತವಾಗಿ ಜೋಡಿಸಲ್ಪಟ್ಟ ಪುಸ್ತಕಗಳು. ಅದಕ್ಕೆ ತಾಗಿಕೊಂಡು ಅಸೀಮ ಹೆಸರಿನ ಬಾಲ್ಕನಿ. ಇಲ್ಲಿ ಸೀಮಾತೀತವಾದ ಹಸಿರುಸಿರಿಯನ್ನು ಕಣ್ತುಂಬಿಕೊಳ್ಳಬಹುದು.... ಇನ್ನೂ ಇದೆ ಇದರ ಮೇಲಂತಸ್ತು ಕರುಮಾಡ.


ಮನೆಯಂಗಳದಲ್ಲಿ ಒಂದು ಸುಂದರವಾದ ಪುಷ್ಕರಿಣಿ ಗೋಚರವಾಗುತ್ತದೆ. ಅದು ಮಳೆನೀರಿನ ಸಂಗ್ರಹ ಮಾಡುವ ಪುಟ್ಟ ಸರೋವರದಂತಿದೆ. ಅದರ ಚೆಲುವಾದ ಹೆಸರೇ ಮಳೆಮಗಳು. ಇಲ್ಲಿನ ಸೋಲಾರ್ ಎನರ್ಜಿಯಿಂದ ಬನವಾಸಿ ಬೆಳಗುತ್ತದೆ. ಇದನ್ನು ನಿಯಂತ್ರಿಸುವ ಪುಟ್ಟ ಮನೆಗೆ ನೇಸರಣುಗ ಎಂದು ಹೆಸರಿಡಲಾಗಿದೆ. ಎಂತಹ ಸುಂದರ ಪರಿಕಲ್ಪನೆ ಅಲ್ಲವೇ.......!?


ನೂರಾರು ಹಣ್ಣು ಹಂಪಲುಗಳ ತೋಟ, ಔಷಧೀಯ ಗಿಡಮರಗಳು, ಅಡಿಕೆ, ತೆಂಗು, ಬಾಳೆ, ಭತ್ತದ ಗದ್ದೆ ದೂಪದ ಗಿಡ.... ಎಲ್ಲವೂ ಸುಮನೋಹರ. ವಸ್ತುಗಳ ಪ್ರದರ್ಶನವೋ ಎಂಬಂತೆ ಹಳೆ ಮೌಲ್ಯಯುತ ವಸ್ತುಗಳೂ ನೋಡುಗರ ಕಣ್ಮನ ಸೆಳೆಯದೆ ಇರವು. ಈ ಕನ್ನಡ ಕುರುಹುಗಳು ಅನುಗಾಲ ಉಳಿಯಲಿ ಎಂಬ ಆಶಯ ನಮ್ಮದೆಲ್ಲರದೂ ಆಗಿದೆ. 


ನೀರ್ಚಾಲು ಎಂಬುದು ಈ ಪ್ರದೇಶದ ಒಂದು ಸಾಂಸ್ಕೃತಿಕ ಕೇಂದ್ರ. ಇಲ್ಲಿ ಒಂದು ಸಂಸ್ಕೃತ ಕಾಲೇಜು ಈಗಲೂ ಜೀವಂತವಾಗಿ ಇದೆ.  ಕನ್ನಡ ಉಸಿರು ಇಲ್ಲಿ ಇನ್ನೂ  ಹಸಿರಾಗಿದೆ. ಇದು ಭಾಷಿಕ ಸಂಸ್ಕೃತಿಯ ಒಂದು ಗಟ್ಟಿ ಕುರುಹು.


ಇಲ್ಲಿಗೆ ನಮ್ಮ ಮನಸ್ವಿನಿ ಮಹಿಳಾ ಗಡಿನಾಡು ಕನ್ನಡ ಸಾಹಿತ್ಯ ಸಂಘಟನೆಯ ಸದಸ್ಯರು ಭೇಟಿ ನೀಡಿದರು. ಇದರ ಸದಸ್ಯರು ಪ್ರಮೀಳಾ ಚುಳ್ಳಿಕಾನ, ಲಕ್ಷ್ಮೀ ವಿ ಭಟ್ ತಲಂಜೇರಿ ಮಂಜೇಶ್ವರ, ಸುಶೀಲಾ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು, ನಿರ್ಮಲಾ ಸೇಸಪ್ಪ ಹಾಗೂ ಚುಳ್ಳಿಕ್ಕಾನ ಶ್ರೀಕೃಷ್ಣ ಭಟ್ ಮತ್ತು ಕುಟುಂಬಸ್ಥರಾದ ದಿವಂಗತ ಕೃಷ್ಣ ಭಟ್ ಪತ್ನಿ, ಮಕ್ಕಳು ಜೊತೆಯಲ್ಲಿದ್ದ ಈ ಕಿರು ಪ್ರವಾಸದ ಸದಸ್ಯರು. ನಾವು ಕನ್ನಡದ ನೆಲದಲ್ಲಿ ಇದ್ದೇವೆ ಎನ್ನುವ ಅಭಿಮಾನ  ನಮ್ಮೆಲ್ಲರಲ್ಲೂ ಮೂಡಿದ್ದು ಸತ್ಯ. ಇದೇ ನಮ್ಮ ಈ ದಿನದ ಹೆಗ್ಗಳಿಕೆ. 


ಪರಿಚಯಿಸಿದವರು- ಮನಸ್ವಿನಿ ಮಹಿಳಾ ಗಡಿನಾಡು ಕನ್ನಡ ಸಾಹಿತ್ಯಸಂಘದ ಸರ್ವ ಸದಸ್ಯರು.

ಅಕ್ಷರ ಪ್ರಸ್ತುತಿ: ಪ್ರಮೀಳಾ ಚುಳ್ಳಿಕ್ಕಾನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top