ಎಂಸಿಸಿ ಬ್ಯಾಂಕ್‌ನ 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

Upayuktha
0

 



ಕಟಪಾಡಿ: ಎಂಸಿಸಿ ಬ್ಯಾಂಕ್ ನ 23ನೇ ಶಾಖೆಯು ಕಟಪಾಡಿಯಲ್ಲಿ ಭಾನುವಾರ, ಆಗಸ್ಟ್ 2, 2026ರಂದು ಉದ್ಘಾಟನೆಗೊಂಡಿತು. ನೂತನ ಶಾಖೆಯು ಕಟಪಾಡಿಯ ಮೂಡಬೆಟ್ಟು, ಹಳೆಯ ಅಂಚೆ ಕಚೇರಿ ರಸ್ತೆಯಲ್ಲಿರುವ ಗ್ಲೋಬಲ್ ರೆಸಿಡೆನ್ಸಿ ಕಟ್ಟಡದ ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸಲಿದೆ.


ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಂ. ಎ. ಗಫೂರ್ ಸೇಫ್ ರೂಂ ಅನ್ನು ಉದ್ಘಾಟಿಸಿದರು. ಕಟಪಾಡಿಯ ಸಂತ ವಿನ್ಸೆಂಟ್ ಡಿ ಪಾಲ್ ಚರ್ಚ್‌ನ ಧರ್ಮಗುರುಗಳಾದ ವಂ. ಫಾ| ರಾಜೇಶ್ ಪ್ರಸನ್ನ ಅವರು ದೀಪ ಪ್ರಜ್ವಲನೆ ನೆರವೇರಿಸಿ ನೂತನ ಶಾಖೆಯನ್ನು ಆಶಿರ್ವಚಿಸಿದರು.


ಸಿಎಸ್‌ಐ ಕ್ರೈಸ್ಟ್ ಚರ್ಚ್, ಕಟಪಾಡಿಯ ಪ್ರೆಸ್ಬಿಟರ್ ವಂ. ಅಕ್ಷಯ್ ಡಿ. ಅಮ್ಮಣ್ಣ, ಕರ್ನಾಟಕ ಕ್ರಿಶ್ಚಿಯನ್ ಸಹಕಾರ ಸಾಲ ಅಭಿವೃದ್ಧಿ ನಿಗಮ (ಕೆಸಿಸಿಡಿಸಿ), ಕರ್ನಾಟಕ ಸರ್ಕಾರದ ನಿರ್ದೇಶಕ ಪ್ರಶಾಂತ್ ಜತ್ತಣ್ಣ, ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಶ್ರೀಮತಿ ಗೀತಾಂಜಲಿ ಎಂ. ಸುವರ್ಣ, ಎಸ್‌ವಿಎಸ್ ವಿದ್ಯಾವರ್ಧಕ ಸಂಘ (ರಿ.), ಕಟಪಾಡಿಯ ಕಾರ್ಯದರ್ಶಿ ಶ್ರೀ ಕೆ. ಸತ್ಯೇಂದ್ರ ಪೈ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಪ್ರೀತೇಶ್ ಬರ್ಟನ್ ಡೆಸಾ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಕಟಪಾಡಿ ಗೌರವ ಅತಿಥಿಗಳಗಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿ'ಸಿಲ್ವಾ ಹಾಗೂ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮೆನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ ಸಹಕಾರ ಬ್ಯಾಂಕಿಂಗ್, ಗ್ರಾಹಕ ಕೇಂದ್ರಿತ ಸೇವೆ ಹಾಗೂ ಸುಸ್ಥಿರ ಬೆಳವಣಿಗೆಯತ್ತ ಬ್ಯಾಂಕ್‌ನ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್ ಸಾಧಿಸಿರುವ ಅಭೂತಪೂರ್ವ ಪರಿವರ್ತನೆ ಮತ್ತು ಪ್ರಗತಿಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು. ಕಟಪಾಡಿ ಭಾಗದ ಜನತೆ ಎಂಸಿಸಿ ಬ್ಯಾಂಕ್ ಮೇಲೆ ಇರಿಸಿರುವ ವಿಶ್ವಾಸವೇ ನೂತನ ಕಟಪಾಡಿ ಶಾಖೆಯನ್ನು ಮತ್ತೊಂದು ಯಶೋಗಾಥೆಯನ್ನಾಗಿ ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇವಲ ಆರು ತಿಂಗಳ ಅವಧಿಯಲ್ಲಿ ಈ ಶಾಖೆ ₹10 ಕೋಟಿ ವ್ಯವಹಾರದ ಗುರಿ ತಲುಪಲಿದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಇದು ಬ್ಯಾಂಕ್‌ನ ಮೇಲಿನ ಸಾರ್ವಜನಿಕರ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.


ಪ್ರಸ್ತುತ ಎಂಸಿಸಿ ಬ್ಯಾಂಕ್ ವಿಸ್ತರಣೆಯ ಪರ್ವವನ್ನು ಅನುಭವಿಸುತ್ತಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನರು ಬ್ಯಾಂಕ್ ಅನ್ನು ತಮ್ಮದೇ ಸಂಸ್ಥೆಯಾಗಿ ಆತ್ಮೀಯವಾಗಿ ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಪಾರದರ್ಶಕ ಆಡಳಿತ ಹಾಗೂ ಗ್ರಾಹಕರ ತೃಪ್ತಿಗೆ ಮೊದಲ ಆದ್ಯತೆ ನೀಡಿರುವುದೇ ಬ್ಯಾಂಕ್‌ನ ಯಶಸ್ಸಿನ ಮೂಲ ಕಾರಣಗಳಾಗಿವೆ ಎಂದು ಅವರು ತಿಳಿಸಿದರು.


ರೆ. ಫಾ. ರಾಜೇಶ್ ಪ್ರಸನ್ನ ಮಾತನಾಡಿ ಕಟಪಾಡಿಯಲ್ಲಿ ಎಂಸಿಸಿ ಬ್ಯಾಂಕ್‌ನ ನೂತನ ಶಾಖೆ ಆರಂಭಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, "ಎಂಸಿಸಿ ಬ್ಯಾಂಕ್ ನಮ್ಮೆಲ್ಲರ ಬ್ಯಾಂಕ್" ಎಂದು ಬಣ್ಣಿಸಿದರು. ಗ್ರಾಹಕ ಸ್ನೇಹಿ ಸೇವೆ, ಪಾರದರ್ಶಕ ಆಡಳಿತ ಮತ್ತು ಸಮರ್ಪಿತ ಕಾರ್ಯವೈಖರಿಯಿಂದ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಅವರು ಹೇಳಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು "ಬ್ಯಾಂಕುಗಳ ತೊಟ್ಟಿಲು" ಎಂದು ಉಲ್ಲೇಖಿಸಿದ ಅವರು, ಎಂಸಿಸಿ ಬ್ಯಾಂಕ್ ರಾಜ್ಯದ ಪ್ರಮುಖ ಸಹಕಾರ ಬ್ಯಾಂಕುಗಳಲ್ಲಿ ಒಂದಾಗಿ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿ, ಕಟಪಾಡಿ ಭಾಗದ ಜನರ ಸಂಪೂರ್ಣ ಬೆಂಬಲಭರವಸೆ ನೀಡಿದರು.


ಮುಖ್ಯ ಅತಿಥಿ ಶ್ರೀ ಎಂ.ಎ. ಅಬ್ದುಲ್ ಗಫೂರ್ ಮಾತನಾಡಿ ಎಂಸಿಸಿ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರನ್ನು ಅಭಿನಂದಿಸಿ, ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಅದ್ಭುತ ಬೆಳವಣಿಗೆಯನ್ನು ಶ್ಲಾಘಿಸಿದರು. ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಸಹಕಾರ ಚಳವಳಿಯ ಪರಿಕಲ್ಪನೆಯನ್ನು ಸ್ಮರಿಸಿದ ಅವರು, ಸಾಮಾನ್ಯ ಜನರ ಸಬಲೀಕರಣಕ್ಕಾಗಿ ಸಹಕಾರ ಸಂಸ್ಥೆಗಳು ಸ್ಥಾಪನೆಯಾಗಿದ್ದವು ಎಂದರು. ಪ್ರಾಮಾಣಿಕ, ಪಾರದರ್ಶಕ ಹಾಗೂ ಜನಸ್ನೇಹಿ ಸೇವೆಯ ಮೂಲಕ ಎಂಸಿಸಿ ಬ್ಯಾಂಕ್ ಆ ಆದರ್ಶಗಳನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ ಎಂದು ಪ್ರಶಂಸಿಸಿದರು. ಬ್ಯಾಂಕ್‌ನ ಆರ್ಥಿಕ ಪ್ರಗತಿ, ಅದರ ದೂರದೃಷ್ಟಿಯ ನಾಯಕತ್ವ ಹಾಗೂ ಸಾವಿರಾರು ಗ್ರಾಹಕರು ಇರಿಸಿರುವ ವಿಶ್ವಾಸಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಡೇವಿಡ್ ಡಿ'ಸೋಜಾ, ಜೆ. ಪಿ. ರೋಡ್ರಿಗಸ್, ಹೆರಾಲ್ಡ್ ಮೊಂತೆರೊ, ಎಲ್ರೊಯ್ ಕಿರಣ್ ಕ್ರಾಸ್ತೊ, ಐರಿನ್ ರೆಬೆಲ್ಲೊ, ವಿನ್ಸೆಂಟ್ ಲಸ್ರಾದೊ, ಆಂಡ್ರೂ ಡಿಸೋಜ, ರೋಶನ್ ಡಿಸೋಜ, ಫೆಲಿಕ್ಸ್ ಡಿ'ಕ್ರೂಜ್ ಹಾಗೂ ಸುಶಾಂತ್ ಸಲ್ಡಾನ್ಹಾ ಉಪಸ್ಥಿತರಿದ್ದರು.


ಬ್ಯಾಂಕಿನ ನಿರ್ದೇಶಕ ಡಾ| ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಅಲ್ವಿನ್ ದಾಂತಿ ಕಾರ್ಯಕ್ರಮವನ್ನು ನಿರೂಪಿಸಿದರು.

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top