'ಸೋಲನ್ನೇ ಗೆಲುವಿನ ಸೋಪಾನವಾಗಿಸಿ': ಸವಿತಕ್ಕ
ಬೆಂಗಳೂರು: "ಸಾಧನೆಯ ದಾರಿಯಲ್ಲಿ ಎದುರಾಗುವ ಅಪಮಾನ ಮತ್ತು ಅವಮಾನಗಳಿಗೆ ಕುಗ್ಗದೆ, ಸೋಲನ್ನೇ ಗೆಲುವಿನ ಸೋಪಾನವನ್ನಾಗಿ ಮಾಡಿಕೊಳ್ಳಬೇಕು" ಎಂದು ಪ್ರಸಿದ್ಧ ಜನಪದ ಗಾಯಕಿ ಹಾಗೂ ರಂಗನಟಿ ಸವಿತಕ್ಕ ಕರೆ ನೀಡಿದರು.
ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ವಿದ್ಯೆ ಮತ್ತು ಜ್ಞಾನದ ಗಳಿಕೆಯ ಜೊತೆಗೆ ಪ್ರೀತಿ, ಕರುಣೆ ಹಾಗೂ ವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಪುಸ್ತಕದ ಓದಿಗೆ ಸೀಮಿತವಾಗದೆ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು" ಎಂದರು. ಮುಂದುವರಿದು, ಸ್ವಾವಲಂಬಿ ಜೀವನ, ದುಡಿಮೆಗೆ ಗೌರವ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಾಳಜಿ ಹಾಗೂ ರಕ್ತಸಂಬಂಧಗಳಿಗೆ ನೀಡಬೇಕಾದ ಮೌಲ್ಯಗಳ ಕುರಿತು ಪ್ರೇರಣಾದಾಯಿ ಕಿವಿಮಾತು ಹೇಳಿದರು. ಉದ್ಘಾಟನೆಯ ಬಳಿಕ ತಮ್ಮ ಸುಮಧುರ ಕಂಠದಿಂದ ವಿವಿಧ ಜನಪದ ಹಾಡುಗಳನ್ನು ಗಾಯನ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಬಿ.ಎಂ.ಎಸ್.ಇ.ಟಿ. ಟ್ರಸ್ಟಿ ಹಾಗೂ ಬಿ.ಎಂ.ಎಸ್.ಸಿ.ಸಿ.ಎಂ. ಅಧ್ಯಕ್ಷ ಅವಿರಾಂ ಶರ್ಮಾ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ವಿತರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಘುಕುಮಾರ ಎನ್. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ವಿವಿಧ ಕೋರ್ಸ್‌ಗಳ ಪರಿಚಯವನ್ನು ಮಾಡಿಕೊಡಲಾಯಿತು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ಜರುಗಿದವು. ಸಮಾರಂಭದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್, ಐ.ಕ್ಯೂ.ಎ.ಸಿ. (IQAC) ಸಂಚಾಲಕರು, ಸಿ.ಓ.ಇ. (COE), ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


