ಪುತ್ತೂರು: ಪದವಿಪೂರ್ವ ಶಿಕ್ಷಣ ಹಂತದಲ್ಲಿ ಕೈಗೊಳ್ಳುವ ನಿರ್ಧಾರಗಳು ಜೀವನವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರಮುಖ ಘಟ್ಟದಲ್ಲಿ ನೀಟ್, ಸಿಇಟಿ, ಜೆಇಇಯಂತಹ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗಿರುವುದರಿಂದ ಆಳವಾದ ಅಧ್ಯಯನ ಅಗತ್ಯ. ಈ ಹಂತದಲ್ಲಿ ಮೊಬೈಲ್, ಟಿವಿ, ಕ್ರೀಡೆ, ಮನೋರಂಜನಾತ್ಮಕ ಅಂಶಗಳನ್ನು ತ್ಯಾಗ ಮಾಡಿ ಸಂಪೂರ್ಣವಾಗಿ ಓದಿನಲ್ಲಿ ತೊಡಗಿಕೊಂಡಾಗ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯ ಎಂದು ಅಂಬಿಕಾ ಪದವಿಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯಲ್ಲಿನ ನೀಟ್ ಅಕಾಡೆಮಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ 2026ನೇ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಿ ಮಾತನಾಡಿದರು.
ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಹಲವಾರು ಗೊಂದಲಗಳನ್ನು ಎದುರಿಸುತ್ತಾರೆ. ಶಿಕ್ಷಣ ಹಾಗೂ ಸಂತೋಷಗಳ ನಡುವೆ ಘರ್ಷಣೆಗಳು ಏರ್ಪಡುವುದು ಸಹಜ ಪ್ರಕ್ರಿಯೆ. ಆದರೆ ಶಿಕ್ಷಣದತ್ತ ಗುರಿಯನ್ನು ಕೇಂದ್ರೀಕರಿಸಿದಲ್ಲಿ ಉತ್ತಮ ಉದ್ಯೋಗ ಪಡೆಯುವಲ್ಲಿ ನೆರವಾಗುತ್ತದೆ. ಆದ್ದರಿಂದ ಪೋಷಕರು ಹಾಗೂ ಉಪನ್ಯಾಸಕರಿಂದ ಸಮರ್ಪಕ ಮಾರ್ಗದರ್ಶನ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವ ಜೊತೆಗೆ ದೇಶದ ಉತ್ತಮ ನಾಗರಿಕನಾಗಿ ಬೆಳೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಸದುಪಯೋಗದೊಂದಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣದ ಲಾಭ ಪಡೆಯುವ ರೀತಿ ಸಕಲ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತಿದೆ. ಅಂಬಿಕಾದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡುವ ದೊಡ್ಡ ಶಕ್ತಿಗಳಾಗಿ ಬೆಳೆಯಬೇಕು ಎಂಬುದು ಸಂಸ್ಥೆಯ ಉದ್ದೇಶ.ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಸಂಯಮ ಅತೀ ಮುಖ್ಯ. ಪೋಷಕರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ಮೂಡಿಸುವುದು ಅವಶ್ಯ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ರಕ್ಷಕ ಶಿಕ್ಷಕ ಸಂಘದ ಸದಸ್ಯ, ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಬೋಧಕ ವೃಂದ ಉಪಸ್ಥಿತರಿದ್ದರು.
ಅಂಬಿಕಾ ನೀಟ್ ಅಕಾಡೆಮಿಯ ಪ್ರಾಂಶುಪಾಲ ಕೆ. ಕಿಶೋರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


