ಚಿಂ ಚಿಂ ಎನ್ನುತ್ತಾ ಮನೆಯ ಅಂಗಳದಲ್ಲಿ, ಕಿಟಕಿ,ಕಪಾಟು ಮತ್ತು ಮಾಡಿನ ಸಂದಿಗಳಲ್ಲಿ ಹಾರಾಡುತ್ತಿದ್ದ ಪುಟ್ಟ ಗುಬ್ಬಚ್ಚಿಗಳನ್ನು ನೋಡದ ಬಾಲ್ಯವಿಲ್ಲ. ಮಕ್ಕಳ ಕಥೆಗಳಲ್ಲಿ ಗುಬ್ಬಿ ಮರಿಯಾಗಿ, ಕವಿಗಳ ಕಾವ್ಯದಲ್ಲಿ ಬಹುಮುಖ್ಯ ಪಾತ್ರವಾಗಿದೆ. ಅಂದು ಗುಬ್ಬಿಚ್ಚಿಗಳನ್ನು ಹೊರ ಓಡಿಸುತ್ತಿದ್ದ ನಾವು ಇಂದು ಅವುಗಳನ್ನು ಕರೆಯಲು ಹುಡುಕಾಡುವ ಪರಿಸ್ಥಿತಿಗೆ ಬಂದಿದ್ದೇವೆ. ಮೊದಲೆಲ್ಲಾ ಮನೆಯ ಅಂಗಳದಲ್ಲಿ ಹಾಕುವ ಕಾಳುಗಳು ಗುಬ್ಬಚ್ಚಿಗಳ ಮೂಲ ಆಹಾರ ತಾಣಗಳಗಿದ್ದವು. ಅಂದು ನಾವು ಎಷ್ಟೇ ಓಡಿಸಿದರು ಅವು ಮರಳಿ ಬರುತ್ತಿದ್ದವು. ಆದರೆ ಕಾಲಕಳೆದಂತೆ ಎಲ್ಲವೂ ಬದಲಾಗಿದೆ ಇಂದಿನ ಸೂಪರ್ ಮಾರ್ಕೆಟ್ ಸಂಸ್ಕೃತಿಯಲ್ಲಿ ಎಲ್ಲವೂ ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಸಿಗುವುದರಿಂದ ಇವುಗಳಿಗೆ ಹಸಿವು ನೀಗಿಸಿಕೊಳ್ಳುವುದು ಕಷ್ಟವಾಗಿದೆ.
ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಗುಬ್ಬಚ್ಚಿ ಕೇವಲ ಪುಸ್ತಕದ ಚಿತ್ರವಾಗಬಹುದು ಅಂತಹ ಒಂದು ಸಂಧಿಗ್ದ ಪರಿಸ್ಥಿತಿ ಬರದಂತೆ ತಡೆಯಲು ನಾವು ಈಗಿನಿಂದಲೇ ಪುಟ್ಟ ಹೆಜ್ಜೆಗಳನ್ನು ಇಡಬೇಕು. ಒಂದು ಕಾಲದಲ್ಲಿ ಹಿಂಡು ಹಿಂಡಾಗಿ ಕಾಣಿಸುತ್ತಿದ್ದ ಗುಬ್ಬಚ್ಚಿಗಳು ಇಂದು ಹಳ್ಳಿಗಳಲ್ಲಿ ಕಾಣಿಸುವುದೇ ಅಪರೂಪವಾಗಿರುವ ಗುಬ್ಬಚ್ಚಿ ಮರಿಗಳು ಇನ್ನು ನಗರಗಳಲ್ಲಿ ಹೇಳೆ ಬೇಕೇ. ಇಂದಿನ ಆಧುನಿಕ ಜಗತ್ತಲ್ಲಿನಲ್ಲಿ ಎಲ್ಲಾ ಸ್ಥಳದಲ್ಲಿಯೂ ರಸ್ತೆ, ಅಪಾರ್ಟ್‌ಮೆಂಟ್‌ಗಳು ಮತ್ತು ಗ್ಲಾಸ್ ಬಿಲ್ಡಿಂಗ್‌ಗಳಲ್ಲಿ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಯಾವುದೇ ಜಾಗ ಸಿಗುವುದು ಉಂಟೆ.
ಮೊಬೈಲ್ ಗೋಪುರಗಳಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು ಗುಬ್ಬಿಚ್ಚಿಯ ಮೊಟ್ಟೆಗಳ ಜೀವಕೋಶಗಳನ್ನು ನಾಶಪಡಿಸುತ್ತವೆ ಎಂದು ಇತ್ತೀಚಿಗೆ ನಡೆದ ಸಂಶೋಧನೆಗಳು ಹೇಳುತ್ತವೆ. ಮನೆಯ ಮಹಡಿ ಅಥವಾ ತೋಟದ ಗಿಡಗಳ ರೆಂಬೆಗಳಿಗೆ ಪಾತ್ರೆಯಲ್ಲಿ ನೀರು ಮತ್ತು ಕಾಳುಗಳನ್ನು ಹಾಕುವುದು ಹಾಗೂ ಅವುಗಳು ವಾಸಿಸಲು ಮತ್ತು ತಮ್ಮ ಮರಿಗಳನ್ನು ರಕ್ಷಿಸಲು ಪ್ಲಾಸ್ಟಿಕ್ ಅಥವಾ ಕಾರ್ಡ್‌ಬೋರ್ಡ್ ಬಾಕ್ಸ್‌ಗಳಿಂದ ಸಣ್ಣ ಕೃತಕ ಗೂಡುಗಳನ್ನು ತಯಾರಿಸಿ ಮನೆಯ ಹೊರಗೆ ಸಿಗದ ಜಾಗದಲ್ಲಿ ಇಲ್ಲವೇ ಗಿಡಗಳಿಗೆ ತೂಗು ಹಾಕಬಹುದು ಹಾಗೇ ಎಲ್ಲರಲ್ಲಿಯೂ ಪಕ್ಷಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಯಾಂತ್ರಿಕ ಜೀವನದ ನಡುವೆಯೂ ಈ ಪುಟ್ಟ ಜೀವಿಗೆ ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗ ಮತ್ತು ಪ್ರೀತಿ ನೀಡಿದರೆ. ಪರಿಸರ ಮತ್ತಷ್ಟು ಹಸನ್ಮುಖಿಯಾಗುವುದರಲ್ಲಿ ಸಂಶಯವಿಲ್ಲ.
- ಸಾವಿತ್ರಿ ಬಸಪ್ಪ ಅಣ್ಣಿಗೇರಿ
ಬಸವೇಶ್ವರ ಕಲಾ ಮಹಾವಿದ್ಯಾಲಯ,
ಬಾಗಲಕೋಟ



