ಆಟಿ ತಿಂಗಳಿಗೆ ವಿಶೇಷ ಸಾಂಸ್ಕೃತಿಕ, ಪ್ರಾಕೃತಿಕ ಮಹತ್ವವಿದೆ – ದಿನೇಶ್ ಸುವರ್ಣ ರಾಯಿ

Upayuktha
0

ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಟಿಡೊಂಜಿ ಗೌಜಿ




ಪುತ್ತೂರು: ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷ ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಮಹತ್ವವಿದೆ. ಆಟಿ ತಿಂಗಳು ಅನಿಷ್ಟ ತಿಂಗಳಲ್ಲ, ಅದು ಕಪ್ಪು ತಿಂಗಳು. ಪ್ರಕೃತಿಯೊಂದಿಗೆ ಬೆಸೆದ ತುಳುನಾಡಿನ ಸಂಪ್ರದಾಯ ಹಾಗೂ ಆಚರಣೆಗಳನ್ನು ಈ ತಿಂಗಳಲ್ಲಿ ಸ್ಮರಿಸಲಾಗುತ್ತದೆ. ಆಟಿ ಕಳೆಂಜ, ಆಟಿಕಷಾಯ, ಕಳಂಜದಂತಹ ಜನಪದ ಆಚರಣೆಗಳು ದುಷ್ಟಶಕ್ತಿಗಳನ್ನು ದೂರವಿರಿಸಿ ಮನೆಮಂದಿಗೆ ಆರೋಗ್ಯ ಹಾಗೂ ಸಮೃದ್ಧಿಯನ್ನು ತರುತ್ತವೆ ಎಂಬ ನಂಬಿಕೆಯಿದೆ ಎಂದು ತುಳು ಜನಪದ ಅಧ್ಯಯನಕಾರ ದಿನೇಶ್ ಸುವರ್ಣ ರಾಯಿ ಹೇಳಿದರು.


ಇತ್ತೀಚೆಗೆ ಸಂಪ್ಯದಲ್ಲಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಾದ ಅಕ್ಷಯ ಪದವಿ ಕಾಲೇಜು ಹಾಗೂ ಅಕ್ಷಯ ಪದವಿ ಪೂರ್ವ ಕಾಲೇಜಿನ ಜಂಟಿ ಸಹಯೋಗದಲ್ಲಿ, ಕಾಲೇಜಿನ ಲಲಿತಾ ಕಲಾ ಸಂಘ ಹಾಗೂ ಐಕ್ಯೂಎಸಿ ನೇತೃತ್ವದಲ್ಲಿ “ಅಕ್ಷಯಡ್ ಆಟಿಡೊಂಜಿ ಗೌಜಿ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಹಿಂಗಾರ ಅರಳಿಸಿ, ಕಳಸಕ್ಕೆ ಅಕ್ಕಿ ತುಂಬಿಸಿ ಮಾತನಾಡಿದರು.


ಮುಖ್ಯ ಅತಿಥಿ, ಹಿರಿಯ ನಾಟಿವೈದ್ಯ ಬಾಲಕೃಷ್ಣ ರೈ ಮಲಾರಬೀಡು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ನಾನೇನು ಕಾಲೇಜು ವಿದ್ಯಾಭ್ಯಾಸ ಓದಿದವನಲ್ಲ. ನನ್ನ ಸಣ್ಣ ಹರೆಯದಲ್ಲಿ ತಂದೆಯೊಟ್ಟಿಗೆ ಹಳ್ಳಿ ಮದ್ದು ಕಲಿಯುವ ಮೂಲಕ ಯಾವುದೇ ಫಲಾಪೇಕ್ಷೆಯಿಲ್ಲದೆ ಮದ್ದು ಕೊಡುತ್ತಾ ಬಂದಿದ್ದೇನೆ. ಆಟಿಯು ಕರ್ಕಾಟಕ ಮಾಸ ಹಾಗೂ ಸಿಂಹ ಮಾಸದ ನಡುವೆ ಬರುತ್ತದೆ. ಹಿರಿಯರ ತಿನಸುಗಳು, ಆಟಿ ಕಳೆಂಜ, ಆಟಿಕಷಾಯ ಸೇರಿದಂತೆ ಆಟಿಯ ಪ್ರಾಮುಖ್ಯತೆ ಹೆಚ್ಚಿಸುವ ಹಲವು ಆಚರಣೆಗಳಿವೆ” ಎಂದರು.


ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಹಿಂದಿನ ಕಾಲದ ತಿನಿಸುಗಳು ಹಾಗೂ ಹಿರಿಯರ ಜೀವನಶೈಲಿಯಲ್ಲಿ ದೇಹವನ್ನು ಸದೃಢಗೊಳಿಸುವ ಹಲವು ಅಂಶಗಳಿದ್ದವು. ಅವುಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಬದಲಾವಣೆ ಆದಂತೆ ಮನುಷ್ಯ ಕೂಡ ಬದಲಾವಣೆಯತ್ತ ಒಗ್ಗಿಕೊಂಡಿದ್ದಾನೆ. ತುಳುನಾಡಿನ ದೇವಾರಾಧನೆ, ದೈವಾರಾಧನೆ ಯಾವುದೇ ಇರಲಿ, ತುಳುನಾಡಿನ ವೈಶಿಷ್ಟ್ಯಗಳನ್ನು ಅರಿತು ಮುನ್ನಡೆಯುವಂತಾಗಬೇಕು ಎಂದರು.


ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ ಮಾತನಾಡಿ, “ಮುಂದೆ ಭವಿಷ್ಯ ಇರುವುದು ಕೃಷಿಯಲ್ಲೇ. ಬೆಂಗಳೂರಿನ ಐಟಿ-ಬಿಟಿಯಲ್ಲಿ ಕೆಲಸ ಮಾಡುವವರು ಇಂದು ಕೃಷಿಯತ್ತ ಒಲವು ತೋರಿಸುವ ಮೂಲಕ ಐಟಿಗೆ ಗುಡ್‌ಬೈ ಹೇಳುತ್ತಿದ್ದಾರೆ. ಹಿಂದಿನ ಹಿರಿಯರು ಕೃಷಿ ಬದುಕಿನಲ್ಲಿ ಉಪಯೋಗಿಸುತ್ತಿದ್ದ ಕೃಷಿ ಪರಿಕರಗಳಿಗೆ ಅಗಾಧ ಅರ್ಥವಿದೆ” ಎಂದರು.


ಹಿರಿಯ ಯಕ್ಷಗಾನ ಕಲಾವಿದ ಕೆ.ಎಂ. ದಾಸಪ್ಪ ರೈ ಮಾತನಾಡಿ, “1965ರಿಂದ ನಾನು ಯಕ್ಷಗಾನ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ. ಕಟೀಲು ಮೇಳ, ಮಂಗಳಾದೇವಿ ಮೇಳ ಸೇರಿದಂತೆ ಹಲವು ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸಿದ ಅನುಭವ ನನಗಿದೆ. ತುಳುನಾಡಿನ ಸಂಪ್ರದಾಯ, ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು” ಎಂದರು.


ಹಿರಿಯ ದೈವನರ್ತಕ ಕೋಟಿ ಪರವ ಮಾತನಾಡಿ, “ವಿದ್ಯಾರ್ಥಿಗಳ ಪಾಲಿಗೆ ಅಕ್ಷಯ ಪಾತ್ರೆಯಂತಿರುವ ಈ ಅಕ್ಷಯ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಮೂಲೆಮೂಲೆಗಳಲ್ಲಿ ನೆಲೆಸಿದರೂ ತಾನು ಪುತ್ತೂರಿನ ಅಕ್ಷಯ ಕಾಲೇಜಿನ ವಿದ್ಯಾರ್ಥಿ ಎನ್ನುವ ಹೆಮ್ಮೆಯನ್ನು ಪ್ರಚುರಪಡಿಸಬೇಕು” ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ 80ಕ್ಕೂ ಮಿಕ್ಕಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ವಿವಿಧ ಆಟಿ ಕಾಲದ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿದ್ದರು.



ಅಕ್ಕಿ ಸೇರು, ಅಕ್ಕಿ ಕಳಸ, ಮಜ್ಜೆ ಪತ್ರೋಡೆ, ಪತ್ರೋಡೆ ಗಸಿ, ತೇಟ್ಟ ತೇವು, ದಂಟ್‌ದ ಗಸಿ, ತಜಂಕ್ ಕರಿ, ತಜಂಕ್ ಸೊಪ್ಪು, ಚಟಿ, ಲಾಂಟನ್, ಕಣಿಲೆ ಪೆಲತ್ತರಿ ಗಸಿ, ಕಣಿಲೆ ಉಪ್ಪಕರಿ, ಕಣಿಲೆ ದೋಸೆ, ಮಂಜಲ್ ಅರೆತ್ತ ಅಡ್ಕೆ, ತೌತೆ ಪೆಲತ್ತರಿ ಸಾರು, ಉಪ್ಪಡ್ ಪಚ್ಚಿಲ್, ಸಾಂಬ್ರಾಣಿ ಪೋಡಿ, ಸಾಂಬ್ರಾಣಿ ಚಟ್ಟಿ, ಪೂಂಬೆ ಪೋಡಿ, ಬಾರೆಕಾಯಿ ಗಸಿ, ಕುಡುತ ಸಾರು, ಪೆಲಕಾಯಿದ ಗಟ್ಟಿ, ತುರೆತ ಪಾಯಸ, ಆಟಿ ಪಾಯಸ, ಕುಕ್ಕುದ ಪಾಯಸ, ಕಡ್ಲೆ ಬಲ್ಯಾರ್ ಆಚಾಯಿನ, ನೀರ್ ಪುಂಡಿ ಸೇರಿದಂತೆ ಸುಮಾರು 80ಕ್ಕೂ ಮಿಕ್ಕಿ ಘಮಘಮಿಸಿದ ಖಾದ್ಯಗಳು ಆಟಿಡೊಂಜಿ ಗೌಜಿಯಲ್ಲಿ ಗಮನ ಸೆಳೆದವು.


ಕಾರ್ಯಕ್ರಮದ ಅಂಗವಾಗಿ ಹಿಂದಿನ ಕಾಲದ ಕೃಷಿ ಪರಿಕರಗಳನ್ನು ಸಾಲಾಗಿ ಜೋಡಿಸಲಾಗಿತ್ತು. ಕಳಸ, ನೊಗ, ಅಡಿಪುನ ಉಜೆರ್ ಸೇರಿದಂತೆ ವಿವಿಧ ಪರಿಕರಗಳನ್ನು ಪ್ರದರ್ಶಿಸಲಾಗಿತ್ತು. ಜೊತೆಗೆ ವೇದಿಕೆಯನ್ನು ತೆಂಗಿನ ಗರಿಗಳಿಂದ ಸಿಂಗರಿಸಲಾಗಿತ್ತು. ಸಾಂಪ್ರದಾಯಿಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮ ಸಂಪೂರ್ಣವಾಗಿ ತುಳುಮಯವಾಗಿತ್ತು.


ಕಾರ್ಯಕ್ರಮದ ಆರಂಭದಿಂದ ಹಿಡಿದು ಸ್ವಾಗತ, ಅತಿಥಿಗಳ ಭಾಷಣ, ನಿರೂಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೆ ಎಲ್ಲವೂ ವಿಶೇಷವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.


ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಅಕ್ಷಯ ಪದವಿ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಅಕ್ಷಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅಭಿಲಾಷ್ ಕೆ., ಅಕ್ಷಯ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರ್ಯ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top