ಎನ್‌ಎಂಐಟಿ: ಹೈಡ್ರೋಜನ್ ಇಂಧನ ಚಾಲಿತ ಮಾನವರಹಿತ ವೈಮಾನಿಕ ವಾಹನದ (UAV) ಯಶಸ್ವಿ ತಂತ್ರಜ್ಞಾನ ಪ್ರದರ್ಶನ

Upayuktha
0



ಬೆಂಗಳೂರು: ‘ಹೈಡ್ರೋಜನ್ ಚಾಲಿತ ಡ್ರೋನ್‌ಗಳು ಒಂದು ಕ್ರಾಂತಿಕಾರಿ ಬದಲಾವಣೆಯಾಗಿ ಮಾರ್ಪಟ್ಟಿದೆ. ಏಕೆಂದರೆ ಅವು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ, ಕೈಗಾರಿಕೆಗಳಿಗೆ ಅಗತ್ಯವಿರುವ ದೀರ್ಘ ಶ್ರೇಣಿಯ ಶಕ್ತಿಯನ್ನು ಒದಗಿಸುತ್ತವೆ. 


ಹೈಡ್ರೋಜನ್ ಡ್ರೋನ್‌ಗಳು ನಮ್ಮ ಗಾಳಿಯನ್ನು ಸ್ವಚ್ಛವಾಗಿ ಮತ್ತು ನಮ್ಮ ಭೂಮಿಯನ್ನು ಆರೋಗ್ಯಕರವಾಗಿರಿಸಿಕೊಂಡು ನಾವು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡಲಿದೆ’ ಎಂದು ಡಿಆರ್‌ಡಿಒದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್‌ನ ಹಿರಿಯ ವಿಜ್ಞಾನಿ ದುರ್ಗಾಪ್ರಸಾದ್ ಎಂ. ಅಭಿಪ್ರಾಯಪಟ್ಟರು.


ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಅಡಿಯಲ್ಲಿರುವ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವು ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಚಾಲಿತ ಮಾನವರಹಿತ ವೈಮಾನಿಕ ವಾಹನದ ಯಶಸ್ವಿ ಉಡಾವಣಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


ಈ ಐತಿಹಾಸಿಕ ಪ್ರದರ್ಶನವನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್‌ನ ಹಿರಿಯ ವಿಜ್ಞಾನಿಗಳಾದ ಮದನ್ ಆರ್ ಮತ್ತು ಉಥಿರಬಾಲನ್ ಆರ್, ಸಿಪಿಆರ್‌ಐನ ಮಾಜಿ ನಿರ್ದೇಶಕ ಡಾ. ಸೀತಾರಾಮು ಮತ್ತು ಡಿಆರ್‌ಡಿಒದ ಮಾಜಿ ಹಿರಿಯ ವಿಜ್ಞಾನಿ ಶ್ರೀನಿವಾಸನ್ ಕೆ. ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ವೀಕ್ಷಿಸಿದರು. ಹೈಡ್ರೋಜನ್ ಚಾಲಿತ ಡ್ರೋನ್‌ನ ಅಭಿವೃದ್ಧಿಗೆ ಪುಣೆಯ ‘ಲಾ ಫೊಂಡೇಶನ್ ಡಸಾಲ್ಟ್ ಸಿಸ್ಟಮ್ಸ್'ನ ಕಾರ್ಯನಿರ್ವಾಹಕ ನಿರ್ದೇಶಕ ಸಲೀಂ ಹುಜೇಫಾ ಅವರು ಆರ್ಥಿಕ ನೆರವು ನೀಡಿದ್ದರು ಮತ್ತು ಫೌಂಡೇಶನ್‌ನ ಹಿರಿಯ ಕಾರ್ಯನಿರ್ವಾಹಕ ಶ್ರೀನಿವಾಸ ಪುದಿಪಟ್ಲ ಅವರು ಈ ಸಾಧನೆಯನ್ನು ಏರೋನಾಟಿಕಲ್ ಇಂಜಿನಿಯರಿAಗ್ ಮತ್ತು ಸುಸ್ಥಿರ ಇಂಧನ ಕ್ಷೇತ್ರದಲ್ಲಿನ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಶ್ಲಾಘಿಸಿದರು.


ಸಂಸ್ಥೆಯ ರಕ್ಷಣಾ ಮತ್ತು ಏರೋಸ್ಪೇಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥರಾದ ಡಾ. ಪ್ರಹ್ಲಾದ್ ಎನ್. ತೆಂಗಳಿ ಮಾತನಾಡಿ, ‘ಡ್ರೋನ್‌ನ ಒಟ್ಟಾರೆ ಸಹಿಷ್ಣುತೆಯನ್ನು ಹೆಚ್ಚಿಸಲು ಎಲ್ಲಾ ಫ್ಲೈಟ್ ಕಂಪ್ಯೂಟರ್‌ಗಳು ಮತ್ತು ನಿಯಂತ್ರಕಗಳಿಗೆ ಜಲಜನಕ ಶಕ್ತಿಯನ್ನು ಬಳಸಲಾಗಿದೆ. ಇದು ಡ್ರೋನ್‌ನ ಕಾರ್ಯಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. 


ಈ ಪ್ರದರ್ಶನದ ಪರಿಕಲ್ಪನೆ ನಮ್ಮ ದೇಶದಲ್ಲಿಯೇ ಮೊದಲನೆಯದಾಗಿದೆ. ಪ್ರಸ್ತುತ 3-4ರ ತಂತ್ರಜ್ಞಾನ ಸಿದ್ಧತೆಯ ಮಟ್ಟವನ್ನು ಹೊಂದಿರುವ ಈ ಡ್ರೋನ್‌ಗಳು, ಕ್ರಮೇಣ ನಮ್ಮ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗುವ ಸ್ಟಾರ್ಟ್ಅಪ್ ಕಂಪನಿಯ ಮೂಲಕ 7-8 ತಂತ್ರಜ್ಞಾನ ಸಿದ್ಧತೆಯ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆಯನ್ನು ಹೊಂದಿದೆ. ಜೊತೆಗೆ, ಪವನ ಮತ್ತು ಸೌರಶಕ್ತಿಯಿಂದ ಚಾಲಿತ ಎಲೆಕ್ಟ್ರೋಲೈಜರ್‌ಗಳ ಮೂಲಕ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಹೆಚ್ಚಿಸುವತ್ತ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.


ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ಸಹವರ್ತಿಗಳನ್ನೊಳಗೊಂಡ ಈ ತಂಡವು ಈಗ ಇಂಧನ ಕೋಶದ ತೂಕವನ್ನು ಕಡಿಮೆ ಮಾಡುವತ್ತ ಮತ್ತು ಸ್ವಚ್ಛ, ದೀರ್ಘಕಾಲಿಕ ಏರೋಸ್ಪೇಸ್ ತಂತ್ರಜ್ಞಾನದ ಹೊಸ ಯುಗವನ್ನು ಪ್ರಾರಂಭಿಸಲು ಹೈಡ್ರೋಜನ್ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top