ಯೋಜನೆ ಕಡ್ಡಾಯವಾಗಿ ಅನುಷ್ಠಾನಗೊಳಿಸದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸಂಸದ ಕ್ಯಾ. ಚೌಟ ಖಡಕ್ ಸೂಚನೆ
ಮಂಗಳೂರು: ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರ ಪ್ರಾಣ ಉಳಿಸುವುದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ರಾಹತ್ʼ ಯೋಜನೆಯನ್ನು ದಕ್ಷಿಣ ಕನ್ನಡದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಇಂದು ಆರೋಗ್ಯಾಧಿಕಾರಿಗಳು ಸೇರಿ ಸಂಬಂಧಪಟ್ಟ ಇಲಾಖೆಗಳ ಜತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಆ ಮೂಲಕ, ಪಿಎಂ ರಾಹತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ದಕ್ಷಿಣ ಕನ್ನಡವನ್ನು ಮಾದರಿ ಜಿಲ್ಲೆಯಾಗಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಜಾರಿಗೆ ತಂದಿರುವ ಪಿಎಂ ರಾಹತ್ (ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸೆ) ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತಂತೆ ಶಾಸಕ ವೇದವ್ಯಾಸ್ ಕಾಮತ್ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ತಿಮ್ಮಯ್ಯ ಹಾಗೂ ಡಿ.ಸಿ.ಪಿ ರವಿಶಂಕರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಂಸದರು ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಅವರ ಪ್ರಾಣ ರಕ್ಷಿಸುವಲ್ಲಿ ಪಿಎಂ ರಾಹತ್ ಅತ್ಯಂತ ಅವಶ್ಯಕ ಯೋಜನೆಯಾಗಿದೆ. ಒಂದುವೇಳೆ, ಆಸ್ಪತ್ರೆಗಳು ಯಾವುದೇ ಸಂತ್ರಸ್ತರನ್ನು ತುರ್ತು ಸಂದರ್ಭಗಳಲ್ಲಿ ದಾಖಲಿಸದೆ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ತೋರಿಸಿದರೆ ಅಂಥಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಕೂಡ ಸಭೆಯಲ್ಲಿ ಕ್ಯಾ. ಚೌಟ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
‘ಪಿಎಂ ರಾಹತ್’ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಯಾವುದೇ ದಾಖಲೆಗಳ ತೊಡಕಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 7 ದಿನಗಳವರೆಗೆ ಗರಿಷ್ಠ 1.50 ಲಕ್ಷ ರೂಪಾಯಿ ತನಕ ಉಚಿತ ತುರ್ತು ಚಿಕಿತ್ಸೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅಪಘಾತಕ್ಕೊಳಗಾದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸಾರ್ವಜನಿಕರಲ್ಲಿ ಯಾವುದೇ ಭಯ ಅಥವಾ ಹಿಂಜರಿಕೆ ಇರಬಾರದು ಎಂಬ ದೃಷ್ಟಿಯಿಂದ ಪ್ರಧಾನಿಯವರು ಈ ಅತ್ಯುತ್ತಮ ಯೋಜನೆಯನ್ನು ತಂದಿದ್ದಾರೆ. ಕೇಂದ್ರ ಸರ್ಕಾರ 2025ರಲ್ಲೇ ಈ ಯೋಜನೆಯನ್ನು ಆರಂಭಿಸಿದ್ದರೂ, ನಮ್ಮ ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ಚಾಲನೆ ನೀಡಿದೆ. ಆದ್ದರಿಂದ, ಇನ್ನಾದರೂ ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ಯೋಜನೆ ಸೌಲಭ್ಯ ವಿಳಂಬವಿಲ್ಲದೆ ಸಿಗಲು ಆಸ್ಪತ್ರೆಗಳಿಗೆ 'e-DAR' ನಮೂದು ಕಡ್ಡಾಯಗೊಳಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾದ 24 ಗಂಟೆಗಳಲ್ಲಿ (ವಿಷಮ ಸ್ಥಿತಿಯಲ್ಲಿದ್ದರೆ ಗರಿಷ್ಠ 48 ಗಂಟೆಗಳಲ್ಲಿ) e-DAR ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸಬೇಕು. ಆಸ್ಪತ್ರೆ ನೀಡಿದ ಮಾಹಿತಿಯನ್ನು ಪೊಲೀಸ್ ಇಲಾಖೆ ಪರಿಶೀಲಿಸಿ ಅನುಮೋದಿಸಿದ ತಕ್ಷಣ, ಅದು TMS ಪೋರ್ಟಲ್‌ಗೆ ರವಾನೆಯಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ದಾಖಲಿಸದಿದ್ದರೆ ಅರ್ಹ ಸಂತ್ರಸ್ತರು ಉಚಿತ ಚಿಕಿತ್ಸೆಯಿಂದ ವಂಚಿತರಾಗುವ ಅಪಾಯವಿರುವುದರಿಂದ, ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಂಸದರು ನಿರ್ದೇಶನ ನೀಡಿದ್ದಾರೆ.
ಪ್ರತಿ ತಾಲೂಕಿನಲ್ಲಿರುವ ಪ್ರಮುಖ ಆಸ್ಪತ್ರೆಗಳೊಂದಿಗೆ ತಾಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಿ, ಯೋಜನೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಕ್ಯಾ.ಚೌಟ ಅವರು ಸೂಚನೆ ನೀಡಿದ್ದಾರೆ.
ಯೋಜನೆಯಡಿ ಚಿಕಿತ್ಸೆ ಪಡೆದ ಸಂತ್ರಸ್ತರ ವ್ಯವಸ್ಥಿತ ಡೇಟಾ ನಿರ್ವಹಣೆ ಇರಬೇಕು ಮತ್ತು ಪ್ರತಿ ತಿಂಗಳು ಇದರ ಪ್ರಗತಿ ಪರಿಶೀಲನೆಗೆ ಮಾಸಿಕ ರಿವ್ಯೂ ಸಭೆ ನಡೆಸಬೇಕು ಎಂದು ನಿರ್ದೇಶಿಸಿದರು. ಇದರೊಂದಿಗೆ ಯೋಜನೆಯ ಕುರಿತು ಆಸ್ಪತ್ರೆಗಳ ಹಂತದಲ್ಲಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕು ಹಾಗೂ ಯೋಜನೆಯ ಫಲಾನುಭವ ಸಂತ್ರಸ್ತರಿಗೆ ಸರಿಯಾಗಿ ದೊರಕಿಸಿ ಕೊಡುವುದಕ್ಕೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಆಸ್ಪತ್ರೆಗಳು ಪೂರ್ಣ ಸಮನ್ವಯದಿಂದ ಕೆಲಸ ಮಾಡಬೇಕೆಂದು ಕ್ಯಾ. ಚೌಟ ಅವರು ಸಲಹೆ ನೀಡಿದ್ದಾರೆ.
ಇನ್ನು ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, "ಅಪಘಾತ ಸಂಭವಿಸಿದ ತುರ್ತು ಸಮಯದಲ್ಲಿ ಜೀವ ಉಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯ ಯಶಸ್ಸಿನಲ್ಲಿ ಆಸ್ಪತ್ರೆಗಳ ಪಾಲು ಬಹುಮುಖ್ಯವಾಗಿದೆ. ಹೀಗಾಗಿ ಯಾವುದೇ ಅಪಘಾತ ಗಾಯಾಳುಗಳು ಈ ಯೋಜನೆಯ ಉಚಿತ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗದಂತೆ ಆಸ್ಪತ್ರೆಗಳು ಎಚ್ಚರವಹಿಸಬೇಕು. ಇದರೊಂದಿಗೆ ಗಾಯಾಳುಗಳ ಜೀವ ಉಳಿಸಲು ಸಾರ್ವಜನಿಕರೂ ಸಹ ಯಾವುದೇ ಪೊಲೀಸ್ ಅಥವಾ ಕಾನೂನಿನ ಭಯವಿಲ್ಲದೆ ಮುಕ್ತವಾಗಿ ನೆರವಿಗೆ ಮುಂದೆ ಬರಬೇಕು" ಎಂದು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


