ಮಂಗಳೂರು: ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆಯನ್ನು 2026ರ ಜುಲೈ 25ರಂದು ಮಂಗಳೂರಿನ ಮಾರ್ನಮಿಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ ಮಹಡಿಯಲ್ಲಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಖೆಯು 31 ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ ಸಂಭ್ರಮವನ್ನು ಸಹ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ನೂತನ ಶಾಖಾ ಕಛೇರಿಯನ್ನು ಕಾಸ್ಸಿಯಾದ ಸಂತ ರೀಟಾ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ| ರಿತೇಶ್ ರೋಡ್ರಿಗಸ್ ಆಶೀರ್ವದಿಸಿದರು. ಭದ್ರತಾ ಕೊಠಡಿಯನ್ನು ಎಂಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಜೇಮ್ಸ್ ವಿಕ್ಟರ್ ಡಿ'ಮೆಲ್ಲೊ, ಉದ್ಘಾಟಿಸಿದರು.
ಸಮಾಜಸೇವಕ, ನಾಟಕಕಾರ, ನಿರ್ದೇಶಕ ಹಾಗೂ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಹಾಗೂ ಹೆಲ್ತ್ ಮಾರ್ಟ್‌ನ ಮಾಲಕರಾದ ಕೃಷ್ಣ ಬಿಂದುಮನೆ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು, ನಿರ್ದೇಶಕರು, ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಎಂಸಿಸಿ ಬ್ಯಾಂಕ್ ನಿಜಾರ್ಥದಲ್ಲಿ "ಜನರ ಬ್ಯಾಂಕ್" ಎಂದು ಬಣ್ಣಿಸಿದ ಅವರು, ಭಾರತದ ಸ್ವಾತಂತ್ರ್ಯಕ್ಕೂ ಮುನ್ನವೇ ಸ್ಥಾಪನೆಯಾದ ಈ ಬ್ಯಾಂಕ್ ದೀರ್ಘಕಾಲದ ವಿಶ್ವಾಸ, ಸೇವೆ ಹಾಗೂ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಸುವಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ತಮ್ಮ ಬೆಂಬಲವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು. ಎಂಸಿಸಿ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕರ್ನಾಟಕ ಸರ್ಕಾರದ ದ್ವಂದ್ವ ನಿಯಂತ್ರಣದಡಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಠೇವಣಿಗಳಿಗೆ ಡಿಐಸಿಜಿಸಿ (Deposit Insurance and Credit Guarantee Corporation) ವಿಮಾ ರಕ್ಷಣೆ ದೊರೆಯುತ್ತದೆ ಎಂದು ಅವರು ತಿಳಿಸಿದರು.
ನಾಯಕತ್ವದ ಕುರಿತು ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಜವಾದ ನಾಯಕತ್ವವು ದೈಹಿಕ ಬಲದಲ್ಲಲ್ಲ, ಬಲಿಷ್ಠ ಮನೋಭಾವ, ದೂರದೃಷ್ಟಿ ಮತ್ತು ಮಾನವೀಯ ಹೃದಯದಲ್ಲಿದೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಬ್ಯಾಂಕಿನ ಆಡಳಿತಕ್ಕೆ ಸದಾ ಪ್ರೇರಣೆಯಾಗಿವೆ ಎಂದು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಗಮನಾರ್ಹ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಕರ್ನಾಟಕದಾದ್ಯಂತ ಬ್ಯಾಂಕ್ ತನ್ನ ಕಾರ್ಯವ್ಯಾಪ್ತಿಯನ್ನು ಯಶಸ್ವಿಯಾಗಿ ವಿಸ್ತರಿಸಿದ್ದು, ಎನ್‌ಪಿಎ, ಸಾಲ ಮತ್ತು ಮುಂಗಡಗಳು, ಕಾಸಾ, ಠೇವಣಿಗಳು, ಎಸ್‌ಎಲ್‌ಆರ್, ಸಿಆರ್‌ಆರ್ ಹಾಗೂ ಸಿಡಿ ಅನುಪಾತ ಸೇರಿದಂತೆ ಪ್ರಮುಖ ಬ್ಯಾಂಕಿಂಗ್ ಮಾನದಂಡಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿರುವ 262 ನಗರ ಸಹಕಾರಿ ಬ್ಯಾಂಕುಗಳ ಪೈಕಿ ಎಂಸಿಸಿ ಬ್ಯಾಂಕ್ ಮಾತ್ರವೇ ವಿಶೇಷ ಎನ್‌ಆರ್‌ಐ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದ್ದು, ಎನ್‌ಆರ್‌ಇ ಠೇವಣಿಗಳು ₹100 ಕೋಟಿಯನ್ನು ಮೀರಿವೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಬ್ಯಾಂಕಿನ ಸಿಬ್ಬಂದಿಗೆ ನಿರಂತರ ತರಬೇತಿ ನೀಡಿ ತ್ವರಿತ, ಪರಿಣಾಮಕಾರಿ ಹಾಗೂ ಗ್ರಾಹಕ ಸ್ನೇಹಿ ಸೇವೆಗಳನ್ನು ಒದಗಿಸಲಾಗುತ್ತಿದೆ. ಗ್ರಾಹಕರ ತೃಪ್ತಿಯೇ ಬ್ಯಾಂಕಿನ ಪ್ರಮುಖ ಧ್ಯೇಯವಾಗಿದೆ ಎಂದು ಅವರು ಹೇಳಿದರು.
ಮುಂದಿನ ವಿಸ್ತರಣಾ ಯೋಜನೆಗಳನ್ನು ವಿವರಿಸಿದ ಅವರು, 2026ರ ಆಗಸ್ಟ್ 2ರಂದು ಕಟಪಾಡಿಯಲ್ಲಿ ಬ್ಯಾಂಕಿನ 23ನೇ ಶಾಖೆಯನ್ನು ಉದ್ಘಾಟಿಸಲಾಗುವುದು ಹಾಗೂ ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಒಟ್ಟು 25 ಶಾಖೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಜೊತೆಗೆ, 2026ರ ಡಿಸೆಂಬರ್ ವೇಳೆಗೆ ಯುಪಿಐ ಸೇವೆಯನ್ನು ಆರಂಭಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಲಭ ಹಾಗೂ ವೇಗದ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುವುದು ಎಂದರು. ಗ್ರಾಹಕರು ಬ್ಯಾಂಕಿನ ರಾಯಭಾರಿಗಳಾಗಿ ತಮ್ಮ ಬಂಧು-ಮಿತ್ರರನ್ನು ಎಂಸಿಸಿ ಬ್ಯಾಂಕ್‌ನಲ್ಲಿ ವ್ಯವಹರಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ಅವರು, ಗ್ರಾಹಕರ ಸಲಹೆಗಳು ಹಾಗೂ ಅಹವಾಲುಗಳನ್ನು ಆಲಿಸಲು ತಾವು ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ ಫಾ| ರಿತೇಶ್ ರೋಡ್ರಿಗಸ್ ಅವರು ಶಾಖೆಯ ಸ್ಥಳಾಂತರದ ಪ್ರಯುಕ್ತ ಅಧ್ಯಕ್ಷರು, ನಿರ್ದೇಶಕ ಮಂಡಳಿ, ಆಡಳಿತ, ಸಿಬ್ಬಂದಿ ಹಾಗೂ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಸೌಹಾರ್ದತೆ, ಸರ್ವಧರ್ಮ ಸಮಭಾವ ಮತ್ತು ಸಮೃದ್ಧಿಯ ಮಹತ್ವವನ್ನು ಒತ್ತಿಹೇಳಿದ ಅವರು, ತಾವು ಕೂಡ ಗ್ರಾಹಕರಾಗಿ ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ನೇರವಾಗಿ ಕಂಡಿರುವುದಾಗಿ ಹೇಳಿದರು. ಬ್ಯಾಂಕ್ ಇನ್ನಷ್ಟು ಯಶಸ್ಸು ಸಾಧಿಸಲಿ ಹಾಗೂ ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ಜೇಮ್ಸ್ ವಿಕ್ಟರ್ ಡಿ'ಮೆಲ್ಲೊ ಅವರು ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ನಿರ್ದೇಶಕರನ್ನು ಅಭಿನಂದಿಸಿದರು. 1912ರಲ್ಲಿ ಸ್ಥಾಪನೆಯಾದ ಎಂಸಿಸಿ ಬ್ಯಾಂಕ್ ಮೊದಲ 106 ವರ್ಷಗಳಲ್ಲಿ ನಿಧಾನಗತಿಯಲ್ಲಿ ಬೆಳವಣಿಗೆ ಕಂಡಿದ್ದರೂ, 2018ರ ಬಳಿಕ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಆರು ಹೊಸ ಶಾಖೆಗಳು ಆರಂಭಗೊಂಡಿದ್ದು, ಬ್ಯಾಂಕಿನ ವಹಿವಾಟು ₹500 ಕೋಟಿಯಿಂದ ₹1,565 ಕೋಟಿಗೆ ಏರಿಕೆಯಾಗಿದೆ ಎಂದು ಶ್ಲಾಘಿಸಿದರು. 2018ರಲ್ಲಿ ಯುವ ಮತ್ತು ಕ್ರಿಯಾಶೀಲ ನಾಯಕತ್ವದ ಉದಯದೊಂದಿಗೆ ಬ್ಯಾಂಕಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಅನಿಲ್ ಲೋಬೊ ಅವರ ದೃಢ ಸಂಕಲ್ಪ, ಶಿಸ್ತು, ದೂರದೃಷ್ಟಿ ಹಾಗೂ ನಿರ್ದೇಶಕ ಮಂಡಳಿ, ಆಡಳಿತ, ಸಿಬ್ಬಂದಿ ಮತ್ತು ಗ್ರಾಹಕರ ಸಹಕಾರದಿಂದ ಬ್ಯಾಂಕ್ ತನ್ನ "ಸುವರ್ಣ ಯುಗ" ಪ್ರವೇಶಿಸಿದೆ ಎಂದು ಹೇಳಿದರು. ಶೈಕ್ಷಣಿಕ ಸಾಧಕರನ್ನು ಹಾಗೂ ಸಮಾಜ ಸೇವಕರನ್ನು ಗೌರವಿಸುವ ಮೂಲಕ ಎಂಸಿಸಿ ಬ್ಯಾಂಕ್ ಕೇವಲ ಲಾಭದ ಸಂಸ್ಥೆಯಾಗಿರದೆ, ದಾನಧರ್ಮ, ಶಿಕ್ಷಣ ಪ್ರೋತ್ಸಾಹ, ಪ್ರಾಯೋಜಕತ್ವ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಹಕರು ಹಾಗೂ ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದರು. ಗ್ರಾಹಕರ ವಿಶ್ವಾಸ ಮತ್ತು ಸಮಾಜದ ಬೆಂಬಲವೇ ಬ್ಯಾಂಕಿನ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿದೆ ಎಂದು ಅವರು ಹೇಳಿದರು ಹಾಗೂ ಬ್ಯಾಂಕ್ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ದೀರ್ಘಕಾಲದ ಗ್ರಾಹಕರಾದ ಕೃಷ್ಣ ಬಿಂದುಮನೆ ಅವರು ಅತಿಥಿಯಾಗಿ ಭಾಗವಹಿಸಲು ಅವಕಾಶ ನೀಡಿದಕ್ಕಾಗಿ ಬ್ಯಾಂಕ್‌ಗೆ ಧನ್ಯವಾದ ಸಲ್ಲಿಸಿದರು. ಬ್ಯಾಂಕಿನಿಂದ ತಮಗೆ ದೊರೆತ ಗೌರವ, ಪ್ರೋತ್ಸಾಹ ಹಾಗೂ ಗ್ರಾಹಕ ಸ್ನೇಹಿ ಸೇವೆಯನ್ನು ಮೆಚ್ಚಿಕೊಂಡ ಅವರು, ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಶೈಕ್ಷಣಿಕ ಸಾಧಕರಾದ ಕು. ಕರೆನ್ ಡಿ'ಕ್ರೂಜ್ ಹಾಗೂ ಕು. ಕಿನಾರಾ ಡಿ'ಕ್ರೂಜ್ ಅವರನ್ನು ಸನ್ಮಾನಿಸಲಾಯಿತು. ಮೋರ್ಗನ್ಸ್‌ಗೇಟ್ ಶಾಖೆಯ ಮಾಜಿ ವ್ಯವಸ್ಥಾಪಕರಾದ ಜಸಿಂತಾ ಸೆರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ವಿಶೇಷವಾಗಿ ಗೌರವಿಸಲಾಯಿತು. ಸಮಾಜ ಸೇವಕರಾದ ಜೇಮ್ಸ್ ವಿಕ್ಟರ್ ಡಿ'ಮೆಲ್ಲೊ ಹಾಗೂ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರನ್ನೂ ಸನ್ಮಾನಿಸಲಾಯಿತು. ಅಧ್ಯಕ್ಷರು ಗಣ್ಯ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಫೆಲಿಕ್ಸ್ ಡಿ'ಕ್ರೂಸ್, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ, ಮಹಾಪ್ರಬಂಧಕ ಸುನಿಲ್ ಮಿನೇಜೆಸ್, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.
ಎಂಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮೋರ್ಗನ್ಸ್‌ಗೇಟ್ ಶಾಖೆಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪ್ರೀತಂ ನೊರೊನ್ಹಾ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


