ಒಂದಿಷ್ಟು ಕೆಲಸಗಳ ಗಡಿಬಿಡಿಯ ನಡುವೆಯೇ ನನ್ನ ಕಿವಿಗೆ ಬಿದ್ದ ಒಂದು ಘಟನೆ ಮನಸ್ಸನ್ನು ತಲ್ಲಣಗೊಳಿಸಿತು. ಬದುಕು, ವಿಧಿ ಮತ್ತು ದೈವಾನುಗ್ರಹದ ಕುರಿತು ಮತ್ತೊಮ್ಮೆ ಯೋಚಿಸುವಂತೆ ಮಾಡಿದ ಆ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಕಳೆದ ಜೂನ್ 25 ರಂದು ನಾನು ಮಂಗಳೂರಿನಿಂದ ಹೊರಟು, ಬೆಂಗಳೂರು ಮಾರ್ಗವಾಗಿ ಲಕ್ನೋ ತಲುಪುವ ವಿಮಾನ ಹತ್ತಿದ್ದೆ. ಅದು ಬೆಂಗಳೂರಿನಿಂದ ಕನೆಕ್ಟಿಂಗ್ ಫ್ಲೈಟ್ ಆಗಿತ್ತು. ಬೆಂಗಳೂರಿನಲ್ಲಿ ವಿಮಾನ ಹತ್ತಿದಾಗ ನನ್ನ ಪಕ್ಕದ ಆಸನದಲ್ಲಿ ಸುಮಾರು 35 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕುಳಿತಿದ್ದರು. ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಾನೇ ಮಾತಿಗೆ ಇಳಿದೆ.
ಹಾಗೇ ಉಭಯಕುಶಲೋಪರಿ, ಪರಿಚಯ ಎಲ್ಲ ಆಯ್ತು. ಅವರು ತಾನು ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದು, ಹೆಂಡತಿಯ ಮನೆ ಲಕ್ನೋದಲ್ಲಿದೆ, ಅಲ್ಲಿಗೇ ಹೋಗುತ್ತಿರುವುದಾಗಿ ತಿಳಿಸಿದರು. ಮೂಲತಃ ತಾವು ದೆಹಲಿಯವರು ಎಂದರು. ನಾನೂ ನನ್ನ ಪರಿಚಯ ಮಾಡಿಕೊಳ್ಳುತ್ತಾ, ಅವರಿಗೆ ಒಂದು ಪುಕ್ಕಟೆ ಸಲಹೆ ನೀಡಿದೆ: "ಸರ್, ಅಯೋಧ್ಯೆಗೆ ಹೋಗಿದ್ದೀರಾ?" ಎಂದೆ. ಅವರು "ಇಲ್ಲ" ಎಂದರು.
"ಹಾಗಾದರೆ ಒಂದು ಕೆಲಸ ಮಾಡಿ ಸರ್. ನಿಮಗೆಲ್ಲ ಕೆಲಸದ ಒತ್ತಡ ಹೆಚ್ಚಿರುತ್ತದೆ, ಸುಲಭವಾಗಿ ಎಲ್ಲೂ ಹೋಗಲಾಗುವುದಿಲ್ಲ. ಹೇಗೂ ಮಾವನ ಮನೆ ಲಕ್ನೋ ಎನ್ನುತ್ತಿದ್ದೀರಿ, ಎಷ್ಟೇ ಕಷ್ಟವಾದರೂ ಈ ಬಾರಿ ಹೆಂಡತಿಯನ್ನು ಕರ್ಕೊಂಡು ಅಯೋಧ್ಯೆಗೆ ಹೋಗಿ ಬನ್ನಿ. ಸರಯೂ ನದಿಯ ದರ್ಶನ ಮಾಡಿ, ರಾಮಲಲ್ಲಾನ ಮೂರ್ತಿ ಕಣ್ಣುಂಬಿಕೊಳ್ಳಿ" ಎಂದೆ. ಅಷ್ಟೇ ಅಲ್ಲ, "ನಿಮಗೆ ಸುಲಭ ದರ್ಶನಕ್ಕೆ ಬೇಕಾದರೆ ನಾನು ವ್ಯವಸ್ಥೆ ಮಾಡುತ್ತೇನೆ, ನಮ್ಮ ಗುರುಗಳು ಅಲ್ಲಿ ಟ್ರಸ್ಟಿ ಆಗಿದ್ದಾರೆ" ಎಂದು ವಿವರಿಸಿದೆ. ಅವರಿಗೆ ಆಶ್ಚರ್ಯವಾಯಿತು. "ಅಯ್ಯೋ.. ಅದೆಲ್ಲ ಯೋಚನೆ ಮಾಡಿಲ್ಲ ಸರ್, ಜಾಸ್ತಿ ರಜೆ ಇಲ್ಲ" ಎಂದರು. "ನೋಡಿ, ಯೋಚನೆ ಮಾಡಿ" ಎಂದು ನಾನು ಸುಮ್ಮನಾದೆ.
ನಂತರ ಜಾಗತಿಕ ವಿದ್ಯಮಾನಗಳು, ಯುದ್ಧದ ಪರಿಣಾಮವಾಗಿ ವಿಮಾನಗಳ ಇಂಧನ ಕೊರತೆ, ವಿಮಾನ ಸೇವೆ ರದ್ದು.. ಹೀಗೆ ಹರಟೆ ಮುಂದುವರಿಯಿತು. ಆದರೆ ಅವರು ಆರಂಭದಲ್ಲಿ ತಾನು ಯಾವ ಹುದ್ದೆಯಲ್ಲಿದ್ದೇನೆ ಎಂದು ಹೇಳಿರಲಿಲ್ಲ, ನಾನೂ ಕೇಳಿರಲಿಲ್ಲ. ಲಕ್ನೋ ತಲುಪಲು ಇನ್ನು ಹತ್ತು-ಹದಿನೈದು ನಿಮಿಷ ಇದೆ ಎನ್ನುವಾಗ ಅವರು ಕಿಸೆಯಿಂದ ತಮ್ಮ ಐಡಿ ಕಾರ್ಡ್ ತೆಗೆದು ತೋರಿಸಿದರು. ಅವರು ಕಸ್ಟಮ್ಸ್ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದರು! "ನಿಮ್ಮೊಂದಿಗೆ ಮಾತನಾಡಿದ್ದು ತುಂಬಾ ಖುಷಿಕೊಟ್ಟಿತು ಭಟ್ ಅವರೇ" ಎಂದರು.
ನನಗೋ ಆಶ್ಚರ್ಯ! "ಏನ್ ಸರ್.. ಇಷ್ಟೊತ್ತು ಇಷ್ಟು ದೊಡ್ಡ ಅಧಿಕಾರಿ ಅನ್ನೋದನ್ನ ಹೇಳಲೇ ಇಲ್ಲ ನೀವು! ನಿಮಗೊಂದು ಸಲ್ಯೂಟ್ ಸರ್" ಎಂದೆ. ಲಕ್ನೋ ಬಂದಾಗ ಇಬ್ಬರೂ ಪರಸ್ಪರ ಶುಭ ಹಾರೈಸಿ ಇಳಿದೆವು. ಹೋಗುವಾಗ ಮತ್ತೊಮ್ಮೆ ಅಯೋಧ್ಯೆಯ ಭೇಟಿಯನ್ನು ನೆನಪಿಸಿದೆ. ಅಲ್ಲಿಗೆ ಕಥೆಗೆ ಒಂದು ಅಲ್ಪವಿರಾಮ ಬಿತ್ತು.
ಅದಾಗಿ ಎರಡು ದಿನಗಳ ನಂತರ ಅವರದ್ದೇ ಫೋನ್ ಕರೆ ಬಂತು! "ಭಟ್ ಅವರೇ, ನೀವು ಹೇಳಿದ ವಿಷಯವನ್ನು ಹೆಂಡತಿ ಮತ್ತು ಅತ್ತೆ-ಮಾವನಿಗೆ ತಿಳಿಸಿದೆ. ಅವರೂ 'ಹಾಗೇ ಮಾಡಿ, ಒಳ್ಳೆಯ ಅವಕಾಶ' ಎಂದರು. ಹಾಗಾಗಿ ನಾವು ಅಯೋಧ್ಯೆಗೆ ಹೋಗುತ್ತಿದ್ದೇವೆ. ದರ್ಶನಕ್ಕೆ ಸ್ವಲ್ಪ ಸಹಾಯ ಮಾಡುತ್ತೀರಾ?" ಎಂದರು. ನನಗೆ ಅತೀವ ಸಂತೋಷವಾಯಿತು. ತಕ್ಷಣ ಅವರ ವಿವರಗಳನ್ನು ಪಡೆದು ವಿಐಪಿ ದರ್ಶನದ ಪಾಸ್ ಮಾಡಿಸಿಕೊಟ್ಟೆ. ಅದಾದ ಬಳಿಕ ನಾನು ಅಯೋಧ್ಯೆ, ಮಥುರಾ, ದೆಹಲಿ ಪ್ರವಾಸದಲ್ಲಿ ಬ್ಯುಸಿಯಾದೆ. ಅವರ ಸಂಪರ್ಕವೂ ಸಿಗಲಿಲ್ಲ.
ಇವತ್ತು ನನ್ನ ಊರಿಗೆ ಮರಳಿದ ತಕ್ಷಣ ಸಾಯಂಕಾಲ ಅವರ ನೆನಪಾಯಿತು. "ಸರ್, ಅಯೋಧ್ಯೆ ದರ್ಶನ ಎಲ್ಲ ಚೆನ್ನಾಗಿ ಆಯ್ತಾ?" ಎಂದು ಒಂದು ವಾಟ್ಸಾಪ್ ಸಂದೇಶ ಕಳುಹಿಸಿದೆ. ಆದರೆ, ಅದಕ್ಕೆ ಪ್ರತಿಯಾಗಿ ಅವರು ಮಾಡಿದ ಫೋನ್ ಕರೆ ನನ್ನನ್ನು ಧೃತಿಗೆಡಿಸಿತು!
"ಸರ್.. ನೀವೆಲ್ಲಿದ್ದೀರಾ? ನಾನು ನಿಮ್ಮನ್ನು ಖುಷಿಯಿಂದ ಕಾಣಬೇಕು ಸರ್. ನಿಜ ಹೇಳಬೇಕೆಂದರೆ, ನಾನು ಮತ್ತು ನನ್ನ ಹೆಂಡತಿ ಒಂದು ಭೀಕರ ಅಪಘಾತದಿಂದ ಪವಾಡಸದೃಶವಾಗಿ ಬದುಕಿ ಬಂದಿದ್ದೇವೆ! ಅದಕ್ಕೆ ಕಾರಣ ಅಯೋಧ್ಯೆಯ ರಾಮನ ದರ್ಶನ ಮತ್ತು ಅಂದು ನೀವು ನೀಡಿದ ಆ ಒತ್ತಾಯದ ಸಲಹೆ! ದಯವಿಟ್ಟು ಕ್ಷಮಿಸಿ ಸರ್, ನಿನ್ನೆಯಷ್ಟೇ ನಾನು ಮತ್ತು ನನ್ನ ಹೆಂಡತಿ ಐಸಿಯು (ಎಮರ್ಜೆನ್ಸಿ ವಾರ್ಡ್) ನಿಂದ ಸ್ಪೆಷಲ್ ವಾರ್ಡ್‌ಗೆ ಶಿಫ್ಟ್ ಆಗಿದ್ದೇವೆ..." ಎಂದು ಅವರು ವಿವರಿಸುತ್ತಿದ್ದಾಗ ನನಗೆ ಗಾಬರಿಯೋ ಗಾಬರಿ!
"ಯಾಕೆ ಸರ್ ಏನಾಯ್ತು? ಈಗ ಹೇಗಿದ್ದೀರಾ? ಅಪಾಯ ಏನೂ ಇಲ್ಲ ತಾನೇ? ಮೇಡಂ ಹೇಗಿದ್ದಾರೆ?" ಎಂದು ಪ್ರಶ್ನೆಗಳ ಸುರಿಮಳೆಗರೆದೆ.
ಅವರು ಗದ್ಗದಿತ ಕಂಠದಿಂದ ಹೇಳಿದರು: "ಹೌದು ಸರ್, ರಾಮನ ದಯೆಯಿಂದ ಬದುಕಿದ್ದೇವೆ. ಅಯೋಧ್ಯೆಯಿಂದ ವಾಪಸ್ ಲಕ್ನೋಗೆ ಬಂದ ನಂತರ ನಿಮಗೆ ಫೋನ್ ಮಾಡಬೇಕು ಅಂದುಕೊಂಡೆವು. ಆದರೆ ಅಲ್ಲಿಂದ ಖಾಸಗಿ ಬಸ್ ಮೂಲಕ ದೆಹಲಿಗೆ ಬರುತ್ತಿದ್ದಾಗ, ನಡುರಾತ್ರಿ ನಮ್ಮ ಬಸ್ ಭೀಕರ ಅಪಘಾತಕ್ಕೆ ಈಡಾಯಿತು. ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದಿಂದಾಗಿ ಬಸ್ ಒಂದು ಟ್ರಕ್‌ಗೆ ನೇರವಾಗಿ ಡಿಕ್ಕಿ ಹೊಡೆದು ಉರುಳಿಬಿಟ್ಟಿತು ಸರ್!"
ನಾನು ಧ್ವನಿ ತಡೆದು, "ಅಯ್ಯೋ ದೇವರೇ! ಆಮೇಲೆ ಏನಾಯ್ತು?" ಎಂದೆ.
"ನನ್ನ ಕೈ ಫ್ರಾಕ್ಚರ್ ಆಗಿದೆ, ಹೆಂಡತಿಗೂ ಗಾಯಗಳಾಗಿವೆ. ಆದರೆ ನಾವು ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದೇವೆ ಸರ್. ಆದರೆ... ಆ ಬಸ್ಸಿನಲ್ಲಿದ್ದ 16-17 ಜನ ಸ್ಥಳದಲ್ಲೇ ಸಾವನ್ನಪ್ಪಿದರು! ಉಳಿದವರು ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನಮ್ಮ ಸೀಟಿನ ಅಕ್ಕಪಕ್ಕದಲ್ಲೇ ಕುಳಿತು ಮಾತನಾಡುತ್ತಿದ್ದವರೂ ಕಣ್ಣಮುಂದೇ ಹೆಣವಾದರು ಸರ್. ಆ ದೃಶ್ಯ ನೆನೆಸಿಕೊಂಡರೆ ಎದೆಯೊಡೆಯುತ್ತದೆ. ಆದರೆ, ನಿಮ್ಮ ಮಾತನ್ನು ಕೇಳಿ ಅಯೋಧ್ಯೆಯ ರಾಮನ ದರ್ಶನ ಪಡೆದಿದ್ದಕ್ಕೇ ಆ ಪ್ರಭು ಶ್ರೀರಾಮನೇ ನಮ್ಮನ್ನು ಕಾಯ್ದಿದ್ದಾನೆ ಎಂದು ನನ್ನ ಹೆಂಡತಿ ಕಣ್ಣೀರಿಡುತ್ತಿದ್ದಾಳೆ ಸರ್" ಎಂದರು.
ನಾನು ಅವರಿಗೆ ಸಾಂತ್ವನ ಹೇಳುತ್ತಾ, "ಇಲ್ಲ ಸರ್, ನೀವು ಮಾಡಿದ ಯಾವುದೋ ಪುಣ್ಯದ ಕೆಲಸ ನಿಮ್ಮನ್ನು ರಕ್ಷಿಸಿದೆ. ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಈಗ ಎಲ್ಲಿದ್ದೀರಾ?" ಎಂದೆ. ಚಿಕಿತ್ಸೆಗಾಗಿ ದೀರ್ಘ ರಜೆ ಹಾಕಿ ದೆಹಲಿಯಲ್ಲೇ ಇರುವುದಾಗಿ ಹೇಳಿದರು. ತಕ್ಷಣ ವಿಶ್ರಾಂತಿ ಪಡೆಯುವಂತೆ ತಿಳಿಸಿ, ಧೈರ್ಯ ತುಂಬಿ ಫೋನ್ ಇಟ್ಟೆ.
ಈ ವಿಚಾರ ಕೇಳಿದಾಗಿನಿಂದ ನನ್ನ ಮನಸ್ಸು ಭಾರವಾಗಿದೆ. ಬುದ್ಧಿ ಭ್ರಮಿತನಾದಂತೆ ಭಾಸವಾಗುತ್ತಿದೆ. ಅದಕ್ಕೇ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
"ನಾವೊಂದು ಬಗೆದರೆ, ವಿಧಿಯೊಂದು ಬಗೆಯುವುದು" ಎನ್ನುವಂತೆ, ಮನುಷ್ಯ ಒಂದು ಯೋಚಿಸಿದರೆ ವಿಧಿ ಬೇರೊಂದನ್ನೇ ಯೋಚಿಸಿರುತ್ತದೆ. ಬದುಕು ನಿಜಕ್ಕೂ ವಿಚಿತ್ರ. ಡಿ.ವಿ.ಜಿ ಅವರ ಆ ಪ್ರಸಿದ್ಧ ಮಂಕುತಿಮ್ಮನ ಕಗ್ಗದ ಸಾಲುಗಳು ಮತ್ತೆ ಮತ್ತೆ ಕಿವಿಯಲ್ಲಿ ರಿಂಗಣಿಸುತ್ತಿವೆ:
"ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ,
ಮದುವೆಗೋ ಮಸಣಕೋ ವಿಧಿ ನೀನ್ ಪೇಳ್ದಂತೆ..."
- ಜಿ. ವಾಸುದೇವ ಭಟ್, ಪೆರಂಪಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


