E20 ಪೆಟ್ರೋಲ್: ಏನಿದರ ಹಕೀಕತ್ತು? ವಿವಾದವೇಕೆ?

Upayuktha
0


-ಟಿ. ದೇವಿದಾಸ್

ನಾವು ನಮ್ಮ ಬೈಕ್ ಕಾರುಗಳಿಗೆ‌ ದಿನವೂ ಬಳಸುವ ಪೆಟ್ರೋಲಿನಲ್ಲಿ 20% ಇಥೆನಾಲ್ ಮತ್ತು 80% ಪೆಟ್ರೋಲ್ ಅಂಶವಿದೆ. ಇದನ್ನೇ E20 ಪೆಟ್ರೋಲ್ ಅಂತ ಕರೆಯುವುದು ಅಂತ ಎಷ್ಟೋ ಜನರಿಗೆ ಅರಿವಿಲ್ಲ. ಪೆಟ್ರೋಲ್ ಖಾಲಿಯಾದ ತಕ್ಷಣ ಬಂಕಿಗೆ ಹೋಗೋದು ಪೆಟ್ರೋಲ್ ತುಂಬಿಸಿಕೊಂಡು ಬರೋದು. ಜೊತೆಗೆ ಹಾಗೆ ತುಂಬಿಸುವಾಗ ರೇಟ್ ಬಗ್ಗೆ ಒಂದಷ್ಟು ಮೋದಿಗೆ, ಇನ್ನೊಂದಿಷ್ಟು ಸರ್ಕಾರಕ್ಕೆ ಅಂತ ಬೈಗುಳ ಹಾಕೋದು ನಮ್ಮ ಚಾಳಿ. ಅದು ಕೂಡ ಸ್ವಲ್ಪ ಸಮಯ ಮಾತ್ರ. ಆಮೇಲೆ ಮರೆತು ಹೋಗುತ್ತದೆ. ಮತ್ತೆ ನೆನಪಾಗೋದು ಪೆಟ್ರೋಲ್ ಖಾಲಿಯಾದಾಗಲೇ!


ಆದರೆ, ಯಾವತ್ತೂ ನಾವು ನಮ್ಮ ಗಾಡಿಗೆ ಹಾಕಿಸುವ ಪೆಟ್ರೋಲಲ್ಲಿ ಏನು ಮಿಶ್ರಣವಾಗಿರುತ್ತದೆ ಅಂತ ಆಲೋಚನೆಯನ್ನು ಕೂಡ ಮಾಡಿರುವುದಿಲ್ಲ. ನಮ್ಮ ಪಾಲಿಗೆ ಪೆಟ್ರೋಲ್ ಬಂಕ್ ಅಂದರೆ ಒಂಥರಾ ಎಣ್ಣೆ ಅಂಗಡಿ ಇದ್ದ ಹಾಗೆ! ಹಾಕಿದ ಮೇಲೆ ಮುಗಿತು. ಮತ್ತೆ ಮಾತಿಲ್ಲ. ಮತ್ತೆ ಮಾತು ಹುಟ್ಟಬೇಕು ಅಂದರೆ ಎಣ್ಣೆ ಹಾಕಬೇಕು. ಹೋಗ್ಲಿ ಬಿಡಿ. ಇದೆಲ್ಲ ಎಣ್ಣೆ ಮಹಿಮೆ. ನೆನಪಿರಲಿ; ಎಣ್ಣೆ ಅಂದ್ರೆ ಪೆಟ್ರೋಲ್ ಬಗ್ಗೆ ಹೇಳಿದ್ದು ನಾನು!.


೨೦೧೮ರಲ್ಲಿ‌ ಭಾರತ ಸರ್ಕಾರ biofuel ಅಂದರೆ ಜೈವಿಕ‌ ಇಂಧನದ ಬಗ್ಗೆ ಒಂದು ನೀತಿ‌ನಿಯಮವನ್ನು ರಚಿಸಿತ್ತು. ೨೦೨೨ಕ್ಕೆ E10 ಅಂದರೆ 10% ಇಥೆನಾಲ್ ಮತ್ತು 90% ಪೆಟ್ರೋಲ್ ಬಳಕೆ ಆರಂಭವಾಯಿತು. ೨೦೨೩ ರಿಂದ ಇಥೆನಾಲ್ 20% ಮತ್ತು ಪೆಟ್ರೋಲ್ 80% ಬಳಕೆ ಶುರುವಾಗಿ ಈಗ ಪ್ರತಿಯೊಂದು ವಾಹನವೂ E20 complaint ಆಗಿರಬೇಕೆಂಬ ನಿಯಮವನ್ನು ಭಾರತ ಸರ್ಕಾರ ಜಾರಿಗೊಳಿಸಿದೆ. ೨೦೨೬ಕ್ಕೆ ಪ್ರತಿ ವಾಹನವೂ E20 complaint ಆಗಿರಬೇಕು ಎಂಬುದು ಭಾರತ ಸರ್ಕಾರದ‌ ಪ್ರಮುಖ ಗುರಿ. 


ಇದೆಲ್ಲ ತಲೆಬಿಸಿ ನಮಗ್ಯಾಕೆ? ವಾಹನ ತಯಾರಕರು‌ ಮತ್ತು ಸರ್ಕಾರ ಮಾಡಿಕೊಳ್ಳಬೇಕಾದ ತಲೆಬಿಸಿಯ ವಿಚಾರ ಇದು. ನಮಗೆ ಪೆಟ್ರೋಲ್ ಸಿಕ್ಕಿದರಾಯ್ತು ಎಂಬುದಷ್ಟೇ ಜನರ ಮೈಂಡ್ ಸೆಟ್. ಉಹುಂ...ಇದು‌ ಸರಿಯಲ್ಲ. ಯಾವುದನ್ನೇ ಆಗಲಿ, ಸ್ವಲ್ಪ ಅರ್ಥಮಾಡಿಕೊಂಡರೆ ಒಳ್ಳೆಯದು.


ಇಥೆನಾಲಲ್ಲಿ ಆಕ್ಸಿಜನ್ (ನಾವು ಉಸಿರಾಡುವ ಆಮ್ಲಜನಕ) ಇರುತ್ತದೆ. ಪೆಟ್ರೋಲಲ್ಲಿ ಇರುವುದು ಹೈಡ್ರೋಕಾರ್ಬನ್ ಮಾತ್ರ. ಅದರಲ್ಲಿ ಆಮ್ಲಜನಕ ಇಲ್ಲ. ಅಂದರೆ, ಇಥೆನಾಲ್ ಉರಿದರೆ ಸಂಪೂರ್ಣವಾಗಿ ಉರಿದು‌ಹೋಗುತ್ತದೆ. ಅಂದರೆ clean burn. ಆದರೆ, ಪೆಟ್ರೋಲ್ ಉರಿದರೆ ಕಾರ್ಬನ್ ಮೊನಾಕ್ಸೈಡ್‌ ಮತ್ತು ಕಾರ್ಬನ್ ಡೈ ಆಕ್ಸೈಡ್ ನಂಥ ಮಾಲಿನ್ಯ ಉಂಟಾಗುತ್ತದೆ. ಇದು ಅಪಾಯಕಾರಿ. 


ಈ ಇಥೆನಾಲ್ ಇದೆಯಲ್ಲ, ಇದು ನೀರನ್ನು ಆಕರ್ಷಣೆ ಮಾಡುತ್ತದೆ. ಇದರಿಂದ ವಾಹನದ ಭಾಗಗಳು ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಪ್ಯೂಯೆಲ್ ಟ್ಯಾಂಕ್, ಪ್ಯೂಯೆಲ್ ಲೈನ್, ಪ್ಯೂಯೆಲ್ ಇಂಜೆಕ್ಷರ್‌, ಪ್ಯೂಯೆಲ್ ರಬ್ಬರ್ ಅಥವಾ ಪ್ಲಾಸ್ಟಿಕ್ ಸೀಲ್ ಇವುಗಳು ತುಕ್ಕು ಹಿಡಿಯುತ್ತವೆ. E20 ಪೆಟ್ರೋಲ್ ಬಳಕೆಯಿಂದ ಕ್ರಮೇಣ ಹಳೆಯ ಗಾಡಿಗಳು ಅಂದರೆ, ೨೦೨೦ ಕ್ಕಿಂತ ಹಿಂದಿನ‌ ವಾಹನಗಳು ಸಮಸ್ಯೆಗೆ ಒಳಗಾಗಬಹುದು. 


ಎಲ್ಲಕ್ಕಿಂತ ಮುಖ್ಯವಾಗಿ, ಪೆಟ್ರೋಲ್ ಶಕ್ತಿ ಲೀಟರಿಗೆ ೩೪ ಮೈಲೇಜಿದ್ದರೆ, ಇಥೆನಾಲ್ ಶಕ್ತಿ ಲೀಟರಿಗೆ ೨೪ ಮಾತ್ರ. ಆದ್ದರಿಂದ, ಇಥೆನಾಲನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮೈಲೇಜ್ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಆದರೆ, ಇಂಧನವು ಸಂಪೂರ್ಣವಾಗಿ ಉರಿದುಹೋಗುವುದರಿಂದ ಎಂಜಿನ್ ಗೆ ಸಮಸ್ಯೆಯಿಲ್ಲ ಎಂದೇ ತಿಳಿಯಬಹುದು. 


ಇಥೆನಾಲ್ ಅನ್ನು ನಮ್ಮ ದೇಶದಲ್ಲೇ ಉತ್ಪಾದನೆ ಮಾಡುವುದರಿಂದ ಪೆಟ್ರೋಲ್ ಜೊತೆ ಬಳಸುವುದು ಉತ್ತಮ. ಇದರಿಂದಾಗಿ ಪೆಟ್ರೋಲ್ ಆಮದು‌ ಅವಲಂಬನೆ ಕಡಿಮೆಯಾಗುತ್ತದೆ. ಆರ್ಥಿಕವಾಗಿ ಇದು ದೇಶಕ್ಕೆ ಒಳ್ಳೆಯದು. ಜನರಿಗೂ ಒಳ್ಳೆಯದು. ಇಥೆನಾಲನ್ನು ಕಬ್ಬಿನಿಂದ‌ ತಯಾರು ಮಾಡಲಾಗುತ್ತದೆ. ಪೆಟ್ರೋಲಿಗೆ ಹೋಲಿಸಿದರೆ ಇಥೆನಾಲ್ ಆವಿಯಾಗುವ ವೇಗ ಕಡಿಮೆ. ಅದಕ್ಕೆ ಉಷ್ಣತೆಯ ಶಕ್ತಿ ಬೇಕು. ನೀರನ್ನು ಆಕರ್ಷಣೆ ಮಾಡಿಕೊಳ್ಳುವ ಗುಣ ಇಥೆನಾಲಿಗೆ ಇರುವುದರಿಂದ ವಾಹನಗಳನ್ನು ಅದಕ್ಕೆ ವಿರುದ್ಧವಾದ ಮೆಟೆರಿಯಲ್ ಗಳಿಂದ ರಚನೆ ಮಾಡಬೇಕಾಗುತ್ತದೆ. ಅಂದರೆ,‌ E20 ಪೆಟ್ರೋಲಿಗೆ ಹೊಂದಿಕೊಳ್ಳುವಂತೆ ವಾಹನಗಳನ್ನು ತಯಾರು ಮಾಡಬೇಕಾಗುತ್ತದೆ. ಆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 


E10 ಪ್ರಮಾಣದಲ್ಲಿ ಇಥೆನಾಲ್ ಬಳಸಿದರೆ ವಾಹನಗಳು ಸುರಕ್ಷಿತ. E20 ಪ್ರಮಾಣದಲ್ಲಿ ಬಳಸಿದರೆ ವಾಹನಗಳ ಇಂಜಿನ್ ರಚನೆಯಲ್ಲಿ ಬದಲಾವಣೆ ಅಗತ್ಯ. ಭಾರತ ಸರ್ಕಾರ E20  ಪೆಟ್ರೋಲ್ ಗೆ ಹೊಂದಿಕೊಳ್ಳುವ ವಾಹನಗಳನ್ನು ತಯಾರಿಸುವಂತೆ ವಾಹನ‌ ತಯಾರಕರ ಜೊತೆ ಮಾತುಕತೆಯನ್ನು ೨೦೧೮ರಲ್ಲೇ ಭಾರತ ಸರ್ಕಾರ ಮಾಡಿದೆ. ಅದರ ಸೂಚನೆಯಂತೆಯೇ ನಡೆಯುತ್ತಿದೆ. 


E20 ಪೆಟ್ರೋಲ್ ಬಳಸುವುದರಿಂದ ದೇಶಕ್ಕೆ ಲಾಭವೇನು?


ಇಲ್ಲಿ ಲಾಭ ನಷ್ಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಇಂದಿನ ಅತಿ ಅಗತ್ಯ. ಕೊರತೆಯನ್ನು ಸರಿದೂಗಿಸುವ ಒಂದು ಪ್ರಯತ್ನ ಅಥವಾ ಪ್ರಯೋಗ ಅಂದುಕೊಂಡರೆ ಸರಿಯಾದೀತು. ಭಾರತದಲ್ಲಿ ತೈಲ ಸಂಪತ್ತು ನಿಕ್ಷೇಪಗಳ ಕೊರತೆ ಇದೆ. ಅದ್ದರಿಂದ, ಇಂದು ನಮ್ಮ ಆವಶ್ಯಕತೆ ವಿದೇಶಿ ಅಮದು ಮೇಲೆ ಅವಲಂಬಿತವಾಗಿದೆ. ವಿದೇಶಿ ವಿನಿಮಯ ಕಡಿಮೆ ಮಾಡಲು, ಬದಲಿ ವ್ಯವಸ್ಥೆ ರೂಪಿಸುವುದು ಈ ಕಾಲಘಟ್ಟದಲ್ಲಿ ಅನಿವಾರ್ಯ. ಅಲ್ಲದೆ, ರೂಪಾಯಿ-ಡಾಲರ್ ವಿನಿಮಯ ಮೌಲ್ಯ ಸ್ಥಿರತೆ ಇಲ್ಲದೆ ಇರುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮವಾಗುತ್ತದೆ.


ಇಥನಾಲನ್ನು ಪೆಟ್ರೊಲಿನಲ್ಲಿ ಶೇ.೨೦ ಬಳಸುವುದರಿಂದ, ವಿದೇಶಿ ವಿನಿಮಯ ಉಳಿತಾಯ ಆಗುತ್ತದೆ. ಅದಕ್ಕಾಗಿ ಭಾರತೀಯ ವಾಹನ ತಯಾರಕರು ಈ ಕುರಿತು ಅಗತ್ಯ ತಾಂತ್ರಿಕತೆಯನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ. E20 ಪೆಟ್ರೋಲ್ ಹಳೆಯ ವಾಹನಗಳ ಮೇಲೆ ಸ್ವಲ್ಪ ವ್ಯತಿರಿಕ್ತ ಪರಿಣಾಮ ಬೀರಬಹುದು. ಅದರೆ ಹೊಸ ವಾಹನಗಳು ಅಗತ್ಯ ತಂತ್ರಜ್ಞಾನಕ್ಕೆ ಹೊಂದಿವೆ.


ಅಷ್ಟಕ್ಕೂ ಕೇಂದ್ರ ಸರ್ಕಾರ ಇದನ್ನು ಪರಿಚಯಿಸುವುದು ಯಾಕೆಂದರೆ, ಕ್ರೂಡ್ ಆಯಿಲ್ ಆಮದು ಕಡಿಮೆ ಮಾಡುವುದಕ್ಕಾಗಿ, ಮಾಲಿನ್ಯ ಕಡಿಮೆ ಮಾಡುವುದಕ್ಕಾಗಿ, ರೈತರಿಗೆ ಆದಾಯ ಕೊಡುವುದಕ್ಕಾಗಿ ಎಂಬುದು ಅತ್ಯಂತ ಗಮನಾರ್ಹ.


ಹಾಗಾದರೆ E20 ಪೆಟ್ರೋಲ್ ಬಳಕೆಯಿಂದ ಸಮಸ್ಯೆಯಿರುವುದು ೫-೧೦ ವರ್ಷಗಳ ಹಿಂದಿನ ವಾಹನಗಳಿಗೆ. ಮತ್ತು E20 ಹೊಂದಿಕೆಯಾಗದ ವಾಹನಗಳಿಗೆ, ಅವುಗಳ ಮೈಲೇಜ್ ಕಡಿಮೆ, ಇಂಜಿನ್ ಡ್ಯಾಮೇಜ್, ಮೆಂಟೇನೆನ್ಸ್ ಖರ್ಚು ಹೆಚ್ಚಾಗಬಹುದು. ಪರಿಹಾರ ಏನೆಂದರೆ, ಇದ್ದುದ್ದಕ್ಕೆ ಹೊಂದಿಕೊಳ್ಳುವುದು, ಅಥವಾ ಹೊಸತನಕ್ಕೆ ತೆರೆದುಕೊಳ್ಳುವುದು.


ಭಾರತ ಸರ್ಕಾರ ಇದರ ಬಗ್ಗೆ ಅತ್ಯಂತ ಸಮರ್ಪಕವೂ ಸೂಕ್ತವೂ ಆದ ರೀತಿಯಲ್ಲಿ ಸರಿಹೊತ್ತಿನವರೆಗೆ ದೇಶದ ಜನರೊಂದಿಗೆ ವರ್ತಿಸಿದೆ. 


ಕೊನೆಯ ಮಾತು: ರಾಜಕೀಯವಿಲ್ಲದೆ ಇಂದಿನ ಜಗತ್ತು ಯಾವುದೇ ವಿಷಯಕ್ಕೂ ಮುಂದೆ ಹೋಗುವುದಿಲ್ಲ, ನಿತಿನ್ ಗಡ್ಕರಿ ಅವರು ಯಾವಾಗಲೂ ಜೈವಿಕ ಇಂಧನದ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಜೈವಿಕ ಇಂಧನದ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದ್ದಾರೆಂಬುದನ್ನು ಸುದ್ದಿ್ವಾಹಿನಿಗಳು ಹೇಳಿವೆ. ಇದು ಎಷ್ಟರಮಟ್ಟಿಗೆ ನಿಜವೆಂಬುದು ಗೊತ್ತಿಲ್ಲ. ಅನೇಕ ಸಕ್ಕರೆ ಕಾರ್ಖಾನೆಗಳು ರಾಜಕೀಯ ವ್ಯಕ್ತಿಗಳೇ ನಡೆಸುತ್ತಿರುವುದು. ಪಕ್ಷ ಯಾವುದೇ ಇರಲಿ, ಇದರಲ್ಲಿ ಲಾಭವಂತೂ ಇದ್ದೇ ಇದೆ. ಆದರೆ, ಜನ ಸಾಮಾನ್ಯರು ತಮ್ಮ ಲಾಭವನ್ನು ನೋಡಿಕೊಳ್ಳಬೇಕಷ್ಟೆ. ಆದರೆ, ಇದನ್ನು ಮಾತ್ರ ಕಾಲವೇ ನಿರ್ಧರಿಸಬೇಕು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top