ಮಂಗಳೂರು: ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತು ಗಮನಹರಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.
ಈಚೆಗೆ ನಡೆದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.
ಮಳೆಗಾಲದಲ್ಲಿ ಅಡಿಕೆ ತೋಟಗಳಲ್ಲಿ ಕೊಳೆರೋಗ ನಿಯಂತ್ರಣಕ್ಕೆ ವ್ಯಾಪಕವಾಗಿ ಬಳಸಲಾಗುವ ಬೋರ್ಡೋ ದ್ರಾವಣ ತಯಾರಿಕೆಗೆ ಅಗತ್ಯವಿರುವ ಕಾಪರ್ ಸಲ್ಫೇಟ್ ಮತ್ತು ಸುಣ್ಣದ ಬಳಕೆ ಅತ್ಯಗತ್ಯವಾಗಿದೆ. ಆದರೆ ಇತ್ತೀಚೆಗೆ ಕಾಪರ್ ಸಲ್ಫೇಟ್ ಉತ್ಪಾದನೆಯಲ್ಲಿ ಕಚ್ಚಾ ವಸ್ತುಗಳ ಕೊರತೆ, ವಿಶೇಷವಾಗಿ ಸಲ್ಪ್ಯೂರಿಕ್ ಆಸಿಡ್ ಹಾಗೂ ತಾಮ್ರದ ಅಭಾವದಿಂದ ಸರಬರಾಜು ಸಮಸ್ಯೆ ಉಂಟಾಗಿದೆ. ಪರಿಣಾಮವಾಗಿ ಕಾಪರ್ ಸಲ್ಫೇಟ್ ದರ ಏರಿಕೆಯಾಗಿದ್ದು, ಕಳಪೆ ಗುಣಮಟ್ಟದ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು.
ಇದರ ಜೊತೆಗೆ ಬೋರ್ಡೋ ದ್ರಾವಣಕ್ಕೆ ಪರ್ಯಾಯವಾಗಿ ಬಳಸಬಹುದಾದ ಪರಿಣಾಮಕಾರಿ ಸಿಂಪಡಣೆಗಳ ಕುರಿತು ಕೇಂದ್ರ ತೋಟಗಾರಿಕಾ ಇಲಾಖೆ, ರಾಜ್ಯ ತೋಟಗಾರಿಕಾ ಇಲಾಖೆ ಹಾಗೂ ಸಿಪಿಸಿಆರ್‌ಐ ವೈಜ್ಞಾನಿಕ ಶಿಫಾರಸುಗಳನ್ನು ಪ್ರಕಟಿಸಬೇಕು. ಕಾಪರ್ ಸಲ್ಫೇಟ್‌ಗೆ ನೀಡುತ್ತಿರುವಂತೆ ಪರ್ಯಾಯ ರೋಗನಿಯಂತ್ರಣ ಉತ್ಪನ್ನಗಳಿಗೂ ಸಹಾಯಧನ ಒದಗಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.ಅದಲ್ಲದೆ, ಈಗಾಗಲೇ ಕಾಪರ್‌ಸಲ್ಪೇಟ್ ಗೆ ನೀಡುತ್ತಿರುವ ಸಹಾಯಧನ ಹಾಗೂ ಮಿತಿಗಳಲ್ಲಿ ಏರಿಕೆ ಮಾಡಬೇಕಾದ ಅಗತ್ಯ ಇದೆ. ಇದುವರೆಗೂ 2-3 ಸಿಂಪಡಣೆ ಸಾಕಾಗುತ್ತಿದ್ದರೆ ಈಗ ಕನಿಷ್ಟ 4-5 ಸಿಂಪಡಣೆ ಬೇಕಾಗಿದೆ. ಹೀಗಾಗಿ ಸಹಾಯಧನ ಏರಿಕೆ ಅಥವಾ ಮಿತಿಯಲ್ಲಿ ಏರಿಕೆ ಬೇಕಾಗಿದೆ.
ಹವಾಮಾನ ಆಧಾರಿತ ಅಡಿಕೆ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ಜುಲೈ ಅಂತ್ಯದವರೆಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿರುವ ಸಂಘ, ಕಳೆದ ಎರಡು-ಮೂರು ವರ್ಷಗಳಿಂದ ಅತಿಯಾದ ಬಿಸಿಲಿನ ಪರಿಣಾಮ ಎಳೆ ಅಡಿಕೆ ಉದುರುವುದು ಹಾಗೂ ಹಿಂಗಾರ ಒಣಗುವಂತಹ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದೆ. ಆದ್ದರಿಂದ ಮಳೆ ಹಾಗೂ ತಾಪಮಾನ ವೈಪರೀತ್ಯಗಳನ್ನು ವೈಜ್ಞಾನಿಕವಾಗಿ ದಾಖಲಿಸಿ, ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟಗಳಿಗೆ ಸೂಕ್ತ ಪರಿಹಾರ ಮತ್ತು ವಿಮೆ ಸೌಲಭ್ಯ ದೊರೆಯುವಂತೆ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ. ಅಷ್ಟೇ ಅಲ್ಲ, ಕಳೆದ ಸಾಲಿನ ಬೆಳೆ ವಿಮಾ ಅವಧಿ ಮುಗಿದಿದೆ. ತಕ್ಷಣವೇ ಇದರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿಯಂತೆ ಈ ಬಾರಿಯೂ ವಿಳಂಬ ಮಾಡಬಾರದು ಎಂದು ಆಗ್ರಹಿಸಿದೆ.g
ದೇಶಕ್ಕೆ ಕಳಪೆ ಗುಣಮಟ್ಟದ ಅಡಿಕೆ ಆಮದು ಆಗುತ್ತಿರುವುದು ಹಲವು ವರ್ಷಗಳಿಂದ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಅಕ್ರಮ ಮಾರ್ಗಗಳ ಮೂಲಕ ಆಮದು ಆಗುವ ಅಡಿಕೆ ದೇಶೀಯ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಳಪೆ ಗುಣಮಟ್ಟದ ಅಡಿಕೆ ಸಾಗಾಟಕ್ಕೆ ತಡೆ ಉಂಟಾಗಿರುವ ಘಟನೆಗಳು ಕೂಡ ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತವೆ. ಆದ್ದರಿಂದ ಕಳಪೆ ಗುಣಮಟ್ಟದ ಅಡಿಕೆ ಆಮದು ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
ಅಡಿಕೆ ಎಲೆಚುಕ್ಕಿ ಸೇರಿದಂತೆ ವಿವಿಧ ರೋಗಬಾಧೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ಹಲವು ಸುತ್ತಿನ ಸಿಂಪಡಣೆ ಅಗತ್ಯವಾಗಿದ್ದು, ಕಾರ್ಮಿಕರ ಕೂಲಿ ಹಾಗೂ ಇತರೆ ನಿರ್ವಹಣಾ ವೆಚ್ಚಗಳೂ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಅಡಿಕೆ ಉತ್ಪಾದನಾ ವೆಚ್ಚವು ಪ್ರತಿ ಕೆ.ಜಿ.ಗೆ ಸುಮಾರು ₹450 ತಲುಪಿದೆ. ಹೀಗಾಗಿ ಅಡಿಕೆಗೆ ಕನಿಷ್ಠ ಆಮದು ದರವನ್ನು ₹451ಕ್ಕೆ ಏರಿಸಿ ದೇಶೀಯ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಸಂಘ ಆಗ್ರಹಿಸಿದೆ.
ಕರ್ನಾಟಕದ ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಪ್ರವೇಶ ಕುರಿತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅದರ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸಂಘ ತಿಳಿಸಿದೆ. ಖಾಸಗೀಕರಣದಿಂದ ಕೃಷಿಕರು ಹಾಗೂ ಸಾಮಾನ್ಯ ವಿದ್ಯುತ್ ಗ್ರಾಹಕರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದೆ.
ಕೃಷಿ ಯಾಂತ್ರೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆಗೆ ಪೆಟ್ರೋಲ್ ಮತ್ತು ಡೀಸೆಲ್ ಅವಶ್ಯಕವಾಗಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಕ್ಯಾನ್‌ಗಳಲ್ಲಿ ಇಂಧನ ವಿತರಣೆ ಮಾಡುವುದಕ್ಕೆ ನಿರ್ಬಂಧಗಳಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬರುತ್ತಿವೆ. ಈ ಸಮಸ್ಯೆಯನ್ನು ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಪರಿಶೀಲಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.
ಇದಲ್ಲದೆ, ಕೃಷಿ ರಕ್ಷಣೆಗೆ ಸರ್ಕಾರದ ಅನುಮತಿಯೊಂದಿಗೆ ರೈತರು ಹೊಂದಿರುವ ಕೋವಿ ಪರವಾನಿಗೆಗಳ ನವೀಕರಣ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಣೆ ದೊಡ್ಡ ಸವಾಲಾಗಿರುವ ಹಿನ್ನೆಲೆಯಲ್ಲಿ, ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


