ಕಲಬುರಗಿ: ಹಿಂದುಳಿದ ವರ್ಗಗಳ ನಾಯಕ ಹಾಗೂ ಈಡಿಗ, ಬಿಲ್ಲವ ಸಮಾಜದ ಮುಖಂಡರಾದ ಬಿ.ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ರಾಜ್ಯದ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಹಾಗೂ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಅಭಿನಂದನೆ ಸಲ್ಲಿಸಿದೆ.
ಹಿಂದುಳಿದ ವರ್ಗಗಳ ನಾಯಕ ಹಾಗೂ ಈಡಿಗ ಸಮುದಾಯದ ಮುಖಂಡರಾದ ಹರಿಪ್ರಸಾದ್ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಲಭಿಸುವ ನಿರೀಕ್ಷೆಯಲ್ಲಿದ್ದ ಮಧ್ಯೆ ಅವರಿಗೆ ಹೈಕಮಾಂಡ್ ಪಕ್ಷಾಧ್ಯಕ್ಷ ಸ್ಥಾನವನ್ನು ನೀಡಿ ಅವರ ಪಕ್ಷ ನಿಷ್ಠೆಗೆ ಗೌರವ ಸ್ಥಾನ ನೀಡಿದೆ. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಸಂಸತ್ತಿನಲ್ಲಿ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಿದವರು. ಮಾತ್ರವಲ್ಲದೆ ದೀರ್ಘಕಾಲ ಎಐಸಿಸಿ ಕಾರ್ಯದರ್ಶಿಯಾಗಿ ನಾನಾ ರಾಜ್ಯಗಳ ಉಸ್ತುವಾರಿ ನಿರ್ವಹಣೆ ಮಾಡಿದ ಹಿರಿಯ ನಾಯಕರು. ಅನೇಕ ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕಳೆದ ಆರು ವರ್ಷ ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಅತಿ ಹಿಂದುಳಿದ ವರ್ಗದವರ ಪರವಾಗಿ ಗಟ್ಟಿಧ್ವನಿಯಾಗಿ ಕಾರ್ಯನಿರ್ವಹಿಸಿದವರು. ಹರಿಪ್ರಸಾದ್ ಅವರನ್ನು ಪಕ್ಷದ ಅಧ್ಯಕ್ಷರಾಗಿ ಹಾಗೂ ವಿಧಾನ ಪರಿಷತ್ತಿಗೆ ಅಭ್ಯರ್ಥಿಯಾಗಿ ಪುನರಾಯ್ಕೆ ಮಾಡಿರುವುದು ಅತಿ ಹಿಂದುಳಿದ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನೀಡಿದ ಗೌರವ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೆಂದ್ರ ಸ್ವಾಮೀಜಿ, ಚಲವಾದಿ ಪೀಠದ ಬಸವನಾಗಿ ದೇವ ಶರಣರು ಹಾಗೂ ಲಂಬಾಣಿ ಸಮಾಜದ ಸೇವಾಲಾಲ್ ಮಹಾರಾಜರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಬಿ.ಕೆ ಹರಿಪ್ರಸಾದ್ ಆಯ್ಕೆಯು ಸಮಸ್ತ ಈಡಿಗ,ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಅತ್ಯಂತ ಹರ್ಷದ ಸಂಗತಿಯಾಗಿದ್ದು ಇವರ ನಾಯಕತ್ವದಲ್ಲಿ ಸಮುದಾಯದ ಶ್ರೇಯೋಭಿವೃದ್ಧಿಗೆ ಹೆಚ್ಚಿನ ನೆರವು ಸಿಗುವಂತಾಗಲಿ. ವಿಧಾನ ಪರಿಷತ್ ಸದಸ್ಯರಾಗಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಅತ್ಯಂತ ಹಿಂದುಳಿದ ಸಮುದಾಯದವರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುವಂತಾಗಲಿ. ರಾಜ್ಯದ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳು ಅವರಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ.ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ. ಕಡೇಚೂರ್ ತಿಳಿಸಿದ್ದಾರೆ.
ಡಿಕೆಶಿ ಸಚಿವ ಸಂಪುಟದಲ್ಲಿ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಯಾರೊಬ್ಬ ಸಚಿವನನ್ನು ಸೇರ್ಪಡೆ ಮಾಡದಿರುವುದರಿಂದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಮುದಾಯದಿಂದ ಒಬ್ಬರನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು ಎಂದು ಹೋರಾಟ ಸಮಿತಿಯು ಒತ್ತಾಯಿಸುತ್ತಿದೆ ಎಂದು ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


