ಹಾಸನ: ಶಾಲೆಗಳನ್ನು ಕಟ್ಟುವ, ಬೆಳೆಸುವ ಮತ್ತು ಉಳಿಸುವ ಜವಾಬ್ದಾರಿ ಗ್ರಾಮದ ಪ್ರತೀ ಸದಸ್ಯರಲ್ಲೂ ಇರಬೇಕು. ಶಾಲೆ ಬೆಲೆಕಟ್ಟಲಾಗದ ಆಸ್ತಿಯಾಗಿದ್ದು, ನಮಗೆ ಅಕ್ಷರ ಜ್ಞಾನದ ಸಂಪತ್ತನ್ನು ನೀಡುತ್ತದೆ. ಅಕ್ಷರ ಸಂಪತ್ತು ಎಂದೆಂದಿಗೂ ನಾಶವಾಗದ ಸಂಪತ್ತಾಗಿದೆ. ಇಂತಹ ಅಕ್ಷರ ಸಂಪತ್ತನ್ನು ನೀಡುವ ಶಾಲೆಯನ್ನು ನಾವೆಲ್ಲರೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿಶ್ವಮಾನವ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣಗೌಡ ಹೇಳಿದರು.
ತಾಲ್ಲೂಕಿನ ಜಿನ್ನೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ಮಾತನಾಡುತ್ತಾ, ಪ್ರತೀ ವರ್ಷ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ "ನಮ್ಮೂರ ಶಾಲೆ"ಎಂಬ ಪರಿಕಲ್ಪನೆಯಡಿಯಲ್ಲಿ ನಗದು ಬಹುಮಾನವನ್ನು ನೀಡುವ ಮೂಲಕ ಶಾಲು, ಹಾರ ಮತ್ತು ಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ ಎಂದರು. ಅದರಂತೆ ಈ ವರ್ಷವೂ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಮುಂದುವರಿದು, ಶಿಕ್ಷಣ ಎನ್ನುವುದು ಸರ್ಕಾರಿ ಶಾಲೆಗಳಲ್ಲಿ ಎಷ್ಟೊಂದು ಸುಲಭವಾಗಿ, ಸಹಜವಾಗಿ ಮತ್ತು ಉಚಿತವಾಗಿ ಸಿಗುತ್ತದೆ ಎಂದರೆ ಪ್ರಕೃತಿಯಲ್ಲಿ ಗಾಳಿ, ಬೆಳಕು, ನೀರು ಎಷ್ಟು ಉಚಿತವಾಗಿ ಸಿಗುತ್ತದೊ ಅಷ್ಟೇ ಉಚಿತವಾಗಿ ಸಿಗುತ್ತಿದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಉಚಿತ ಸೌಲಭ್ಯ ಇರುವುದರಿಂದ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಒಂದು ರಾಷ್ಟ್ರದ ಪ್ರಗತಿ ಶಿಕ್ಷಣ ರಂಗದ ಪ್ರಗತಿಯನ್ನು ಅವಲಂಭಿಸಿದೆ. ಶಿಕ್ಷಣ ರಂಗದ ಪ್ರಗತಿ ಆಗಬೇಕು ಎಂದರೆ ವಿದ್ಯಾರ್ಥಿಗಳು ಸರಸ್ವತಿ ಇರುವೆಡೆಗೆ ಹುಡುಕಿಕೊಂಡು ಹೋಗಬೇಕು. ಅದು ಸಾಧ್ಯವಿಲ್ಲದಾಗ ಸರಸ್ವತಿಯೇ ವಿದ್ಯಾರ್ಥಿಗಳನ್ನು ಹುಡಿಕಿಕೊಂಡು ಬರಬೇಕು. ಪ್ರಾಯಶಃ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಗಳ ಪ್ರಯತ್ನದಿಂದಾಗಿ ಶಿಕ್ಷಣ ರಂಗದಲ್ಲಿ ಆಗಿರುವ ಕ್ರಾಂತಿಯನ್ನು ನೋಡಿದರೆ ಪ್ರತೀ ಗ್ರಾಮದಲ್ಲಿ ಒಂದು ಸರ್ಕಾರಿ ಶಾಲೆ ಇರುವುದನ್ನು ಕಾಣಬಹುದಾಗಿದೆ. ಹಾಗಾಗಿ ಸರಸ್ವತಿಯೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬಂದ ಹಾಗೆ ಆಗಿದೆ. ಈ ಅವಕಾಶವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉಪಯೋಗಿಸಿ ಕೊಳ್ಳಬೇಕು. ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿದ್ದು ದೊಡ್ಡ ಸಾಧನೆ ಮಾಡಬೇಕು. ಈ ಶಾಲೆಯು ಶೇ 100 ರಷ್ಟು ಫಲಿತಾಂಶ ಸಾಧಿಸಿದ್ದು ಮುಖ್ಯ ಶಿಕ್ಷಕರು ಶಿಕ್ಷಕರು ಮತ್ತು ಸಿಬ್ಬಂದಿಗಳೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ರವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಉಚಿತ ಸೌಲಭ್ಯಗಳಿದ್ದು ಉತ್ತಮ ಪ್ರಲಿತಾಂಶ ಇದ್ದರೂ ಕೂಡಾ ದಾಖಲಾತಿ ಪ್ರಮಾಣ ಕಡಿಮೆ ಇದೆ. ಹಾಗಾಗಿ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಅನಿಲ್ ರವರು ಮಾತನಾಡುತ್ತ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದರೂ, ವಿಷಯವಾರು ಅರ್ಹ ಪರಿಣಿತ ಶಿಕ್ಷಕರಿದ್ದರೂ ಸಾರ್ವಜನಿಕರು ಬಳಸಿಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ದಿಡಗ ಪ್ರಾಂಶುಪಾಲರಾದ ಮಂಜುನಾಥ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಆನಂದ್ , ಶಿಕ್ಷಣ ಸಂಯೋಜಕರಾದ ಜೆ. ಇ.ಲೋಕೇಶ್, ಶ್ರೀನಿವಾಸ್, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮಂಜಣ್ಣ ಮಾತನಾಡಿದರು. ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ಜೆ.ಬಿ. ರುಕ್ಮಿಣಿ, ಮುಖ್ಯ ಶಿಕ್ಷಕರಾದ ಓಂಕಾರ ಮೂರ್ತಿ, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


