ಆಕಾಶವಾಣಿಗೆ 90ರ ಹಿನ್ನೆಲೆಯಲ್ಲಿ ಒಂದು ಸವಿ ನೆನಪು
1970 ರಲ್ಲಿ ನಾನು ಆರನೇ ತರಗತಿಯಲ್ಲಿದ್ದಾಗ ನಮ್ಮ ಮನೆಗೆ ರೇಡಿಯೋ ಬಂತು. ಒಂದು ದಿನ ಸಂಜೆ, ಸಣ್ಣಗೆ ಮಳೆ ಜಿನುಗುತ್ತಿತ್ತು. ಬೆಳ್ಳಿಸರಿಗೆಯಂತೆ ಮಾಡಿನಿಂದ ಬೀಳುತ್ತಿದ್ದ ನೀರಿನ ಧಾರೆಯನ್ನು ನೋಡುತ್ತ ಚಾವಡಿಯಲ್ಲಿ ಕುಳಿತಿದ್ದವನಿಗೆ ಪುತ್ತೂರಿಗೆ ಹೋಗಿದ್ದ ಚಿಕ್ಕಪ್ಪ ಕೈಚೀಲವೊಂದನ್ನು ನೇತಾಡಿಸಿಕೊಂಡು ಕೊಡೆ ಹಿಡಿದು ಗದ್ದೆ ಬದುವಿನಲ್ಲಿ ಬರುತ್ತಿರುವುದು ಕಾಣಿಸಿತು. ಒಳಗೆ ಬಂದ ಚಿಕ್ಕಪ್ಪ ಕೈಚೀಲ ತೆರೆದರು. ನೋಡಿದರೆ ಅರೇ! ರೇಡಿಯೋ ಸೆಟ್!
ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಪುಟ್ಟ ಪೆಟ್ಟಿಗೆಯಿಂದ ಮಾತುಗಳು, ಹಾಡುಗಳು ಬರುತ್ತಿದ್ದುದನ್ನು ಕಂಡು ನಾವು ರೋಮಾಂಚನಗೊಂಡೆವು. ಕುಣಿದಾಡಿದೆವು.
ಮರುದಿನ ಬೆಳಗ್ಗೆ ಆರು ಗಂಟೆಗೆ ಅದನ್ನು ಚಿಕ್ಕಪ್ಪ ಆರಂಭಿಸಿದರು. ನಾವು, ಅಂದರೆ ನಾನು, ನನ್ನ ಇಬ್ಬರು ಅಕ್ಕಂದಿರು ಮತ್ತು ತಮ್ಮ ಬೇಗನೇ ಎದ್ದು ಅದರ ಸುತ್ತ ಕುಳಿತು ಮೈಯೆಲ್ಲ ಕಿವಿಯಾಗಿ ಆಲಿಸಿದೆವು. ಚಿಕ್ಕಪ್ಪನೂ ಹತ್ತಿರ ಕುಳಿತು ಕೇಳುತ್ತಿದ್ದರು. ಮೊದಲಿಗೆ ಒಂದು ಹಿತವಾದ ಮಧುರ ಸಂಗೀತಧ್ವನಿ ಬಂತು. ಆಮೇಲೆ ‘ಸುಪ್ರಭಾತ’ ಬರತೊಡಗಿತು. ಅದು ಎಂ. ಎಸ್. ಸುಬ್ಬಲಕ್ಷ್ಮಿಯವರು ಹಾಡಿ ರಾಷ್ಟ್ರದಾದ್ಯಂತ ಪ್ರಸಿದ್ಧವಾದದ್ದು ಎಂದು ದೊಡ್ಡವರಾದ ಮೇಲೆ ನಮಗೆ ಗೊತ್ತಾಯಿತು.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅರ್ಧರ್ಧ ಗಂಟೆ ರೇಡಿಯೋ ಆಲಿಸುತ್ತಿದ್ದೆವು. ನನ್ನ ಅಕ್ಕಂದಿರಿಗೆ ಸುಪ್ರಭಾತದ ಆಕರ್ಷಣೆ ಎಷ್ಟಾಯಿತೆಂದರೆ ಪ್ರತಿದಿನ ಅದರ ಎರಡೆರಡು ಸಾಲುಗಳನ್ನು ಬರೆದಿಡುತ್ತಿದ್ದರು. ಅಷ್ಟರಲ್ಲಿ ಅದು ಮುಂದೆ ಹೋಗುತ್ತಿತ್ತು. ಕೊನೆಗೊಂದು ದಿನ ಬರೆಯುವುದು ಮುಗಿಯಿತು. ಅನಂತರ ಬರೆದುದನ್ನು ನೋಡುತ್ತ ರೇಡಿಯೋದಲ್ಲಿ ಬರುವಂತೆಯೇ ಅನುಕರಿಸಿ ಹಾಡಲು ಕಲಿತರು!
ಆ ಕಾಲಕ್ಕೆ ನಮ್ಮ ಹಳ್ಳಿಯಲ್ಲಿ ಯಾರ ಮನೆಯಲ್ಲೂ ರೇಡಿಯೋ ಇರಲಿಲ್ಲ. ರೇಡಿಯೋ ಹೊಂದಿದ ಮನೆ ನಮ್ಮದೇ ಮೊದಲಾಗಿತ್ತು. ಆ ಮರ್ಫಿ ರೇಡಿಯೋಗೆ ಚಿಕ್ಕಪ್ಪ ನೂರು ರೂಪಾಯಿ ಕೊಟ್ಟಿದ್ದರಂತೆ. ಆಗ ರೇಡಿಯೋಗೆ ಲೈಸೆನ್ಸ್ ಬೇಕಾಗಿತ್ತು. ಪ್ರತಿವರ್ಷ ಪೋಸ್ಟ್ ಆಫೀಸ್ ನಲ್ಲಿ ಹದಿನೈದು ರೂಪಾಯಿ ಕಟ್ಟಿ ಪರವಾನಿಗೆ ಪುಸ್ತಕಕ್ಕೆ ಮೊಹರು (ಸೀಲ್) ಹಾಕಿಸಿಕೊಳ್ಳಬೇಕಾಗಿತ್ತು. ಅನಂತರ ಕೆಲವು ವರ್ಷಗಳಲ್ಲಿ ಲೈಸೆನ್ಸ್ ಪದ್ಧತಿಯನ್ನು ಸರಕಾರ ತೆಗೆದು ಹಾಕಿತು.
ರೇಡಿಯೋ ನಮ್ಮ ಮನೆಯ ಅವಿಭಾಜ್ಯ ಅಂಗವಾಯಿತು. ಚಿಕ್ಕಪ್ಪ ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ. ಮಕ್ಕಳು ಮುಟ್ಟಿದರೆ ಹಾಳಾಗುತ್ತದೆ ಎಂದು ನಮ್ಮನ್ನೆಲ್ಲ ಹೆದರಿಸಿದ್ದರು! ಅದನ್ನು ಶುರು ಮಾಡುವುದು ಮತ್ತು ಬಂದ್ ಮಾಡುವುದು ಎರಡೂ ಅವರೇ! ಚಾರ್ಜ್ ಮುಗಿದಾಗ ಅದಕ್ಕೆ ನಾಲ್ಕು ಡ್ರೈ ಬ್ಯಾಟರಿ ಸೆಲ್ ಹಾಕಬೇಕಾಗಿತ್ತು. ಅದನ್ನು ಚಿಕ್ಕಪ್ಪನೇ ನಿರ್ವಹಿಸುತ್ತಿದ್ದರು. ಅದಕ್ಕೆ ಇದ್ದುದು ನಾಲ್ಕೇ ನಾಲ್ಕು ಸ್ವಿಚ್. ಒಂದು ಆನ್ ಆಫ್ ಮಾಡಲು, ಒಂದು ಬ್ಯಾಂಡ್ ಬದಲಿಸಲು, ಇನ್ನೊಂದು ಸ್ಟೇಷನ್ ಬದಲಿಸಲು. ಮತ್ತೊಂದು (ವಾಲ್ಯೂಮ್) ಸ್ವರ ದೊಡ್ಡ ಸಣ್ಣ ಮಾಡಲು. ನಾನು ಶೀಘ್ರ ಅದನ್ನು ನೋಡಿ ಕಲಿತೆ. ಆದರೂ ಚಿಕ್ಕಪ್ಪ ನನ್ನನ್ನು ಮುಟ್ಟಲು ಬಿಡುತ್ತಿರಲಿಲ್ಲ. ಎಲ್ಲಾದರೂ ಹಾಳಾದರೆ!
ನಮಗೆ ಪ್ರತಿದಿನ ಸಂಜೆ ಹೊತ್ತು ರೈತಗೀತೆ ಕೇಳುವುದು ಅಭ್ಯಾಸವಾಗಿ ಹೋಯಿತು. ಚಿತ್ರಗೀತೆಗಳನ್ನು ಕೂಡ. ಆ ಮಾಯಾ ಪೆಟ್ಟಿಗೆಯೊಳಗಿಂದ ಹೇಗೆ ಹಾಡುಗಳು ಹೊರಡುತ್ತವೆ ಎಂಬುದು ನಮಗೆ ಯಕ್ಷಪ್ರಶ್ನೆಯಾಗಿತ್ತು. ಯಾರು ಅದನ್ನೆಲ್ಲ ಮಾಡುತ್ತಾರೆ, ಎಲ್ಲಿಂದ ಹಾಕುತ್ತಾರೆ, ಅದು ಹೇಗೆ ಈ ಪೆಟ್ಟಿಗೆಯೊಳಗಿಂದ ಮೂಡಿ ಬರುತ್ತದೆ ಒಂದೂ ಗೊತ್ತಾಗುತ್ತಿರಲಿಲ್ಲ. ಹೇಳುವವರು ಯಾರೂ ಇರಲಿಲ್ಲ.
ನನ್ನ ಆಕ್ಕಂದಿರು ರೇಡಿಯೋ ಕೇಳಿಯೇ ಹತ್ತಾರು ಭಾವಗೀತೆ/ಭಕ್ತಿಗೀತೆಗಳನ್ನು ಕಲಿತರು. ಸ್ಪರ್ಧೆಗಳಲ್ಲಿ ಬಹುಮಾನ ಪಡೆದರು. ನಾನು ಚಿಕ್ಕಪ್ಪನೊಂದಿಗೆ ತಪ್ಪದೆ ವಾರ್ತಾ ಪ್ರಸಾರ ಕೇಳುತ್ತಿದ್ದೆ.
ಅನಂತರ, ದೊಡ್ಡವನಾದ ಮೇಲೆ, 1988 ರಲ್ಲಿ, ಕೇಂದ್ರ ಸರಕಾರದ ಯು ಪಿ ಎಸ್ ಸಿ ಪರೀಕ್ಷೆ ಬರೆದು ನಾನು ರೇಡಿಯೋ ಕೇಂದ್ರ ಸೇರುವಂತಾದುದು ಒಂದು ಯೋಗಾಯೋಗ! ಸುಮಾರು ಮೂವತ್ತು ವರ್ಷಗಳ ಕಾಲ ಬೇರೆ ಬೇರೆ ಕೇಂದ್ರಗಳನ್ನು ನಿರ್ವಹಿಸಿ ಸೇವಾ ನಿವೃತ್ತನಾದೆ. ಆದರೆ 1970 ರಲ್ಲಿ ರೇಡಿಯೋದೊಂದಿಗೆ ಆರಂಭವಾದ ನಂಟಿನ ಗಂಟು ಒಂದು ಚೋದ್ಯವಾಗಿ ಉಳಿದುಕೊಂಡಿದೆ.
ಅಬ್ಬ! ಈ ಐವತ್ತೈದು ವರ್ಷಗಳಲ್ಲಿ ಎಂತಹ ಬದಲಾವಣೆ ಆಗಿ ಹೋಯಿತು! ಜಗತ್ತಿನಲ್ಲಿ ಯಂತ್ರ ನಾಗರಿಕತೆ ಆರಂಭವಾದ ಇನ್ನೂರ ಐವತ್ತು ವರ್ಷಗಳಲ್ಲಿ ಆದ ಬದಲಾವಣೆಯ ನಾಲ್ಕು ಪಟ್ಟು ಬದಲಾವಣೆ ಈ ಐವತ್ತು ವರ್ಷಗಳಲ್ಲಿ ಆಗಿ ಹೋಯಿತು!
– ಡಾ. ವಸಂತಕುಮಾರ ಪೆರ್ಲ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
