ಮೂಡುಬಿದಿರೆ: ಯುವಜನರು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ರವಿಪ್ರಸಾದ ಹೆಗ್ಡೆ ಹೇಳಿದರು.
ಕೇಂದ್ರ ಸರ್ಕಾರದ ‘ನಶಾಮುಕ್ತ ಭಾರತ್ ಅಭಿಯಾನ' ಅಂಗವಾಗಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಾದಕ ವಸ್ತು ನಿಯಂತ್ರಣ ಸಮಿತಿ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ವ್ಯಸನಮುಕ್ತ ಜೀವನ' ಕುರಿತ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮಾದಕ ವ್ಯಸನವು ಹೊಸ ಸಮಸ್ಯೆಯಲ್ಲ. ಪ್ರಾಚೀನ ಕಾಲದಿಂದಲೂ ವಿವಿಧ ರೂಪಗಳಲ್ಲಿ ಸಮಾಜವನ್ನು ಕಾಡುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಸ್ವರೂಪ ಮತ್ತಷ್ಟು ಅಪಾಯಕಾರಿಯಾಗಿದ್ದು, ಯುವಜನರನ್ನು ಹೆಚ್ಚು ಸೆಳೆಯುತ್ತಿದೆ.
ಸ್ನೇಹಿತರ ಒತ್ತಡ ಅಥವಾ ಕ್ಷಣಿಕ ಸುಖಕ್ಕಾಗಿ ಆರಂಭವಾಗುವ ಅಭ್ಯಾಸ ಕ್ರಮೇಣ ವ್ಯಕ್ತಿಯ ಆರೋಗ್ಯ, ಶಿಕ್ಷಣ, ವೃತ್ತಿ ಹಾಗೂ ಕುಟುಂಬ ಜೀವನವನ್ನೇ ಹಾಳು ಮಾಡುತ್ತದೆ. ವಿಷ ಸೇವಿಸಿದರೆ ಕ್ಷಣಮಾತ್ರದಲ್ಲಿ ಜೀವ ಕಳೆದುಕೊಳ್ಳಬಹುದು; ಆದರೆ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನ ವ್ಯಕ್ತಿಯನ್ನು ನಿಧಾನವಾಗಿ ಸಾವಿನತ್ತ ತಳ್ಳುತ್ತದೆ.
ಮೊದಲು ನಾವು ಸರಿಯಾದರೆ ಕುಟುಂಬ ಸರಿಯಾಗುತ್ತದೆ. ಕುಟುಂಬ ಸರಿಯಾದರೆ ಸಮಾಜ, ಗ್ರಾಮ, ಜಿಲ್ಲೆ, ರಾಜ್ಯ ಮತ್ತು ದೇಶವೂ ಉತ್ತಮ ದಿಕ್ಕಿನಲ್ಲಿ ಸಾಗುತ್ತದೆ. ಯಾವುದೇ ಮಾದಕ ವಸ್ತುವನ್ನು ಮುಟ್ಟುವುದಿಲ್ಲ ಎಂಬ ದೃಢ ನಿರ್ಧಾರವೇ ವ್ಯಸನಕ್ಕೆ ಶಾಶ್ವತ ಪರಿಹಾರ. ‘ಬೇಡ' ಎಂದು ಹೇಳುವುದು ದೌರ್ಬಲ್ಯವಲ್ಲ; ಅದು ವ್ಯಕ್ತಿಯ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಬಲದ ಸಂಕೇತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಕಾರ್ಯಕ್ರಮ ಸಂಯೋಜಕ ಟಿ.ಎ.ಎನ್. ಖಂಡಿಗೆ, ಇದ್ದರು. ಜೇಸನ್ ಕ್ಯಾಸ್ಟಿಲಿನೋ ಕಾರ್ಯಕ್ರಮ ನಿರೂಪಿಸಿದರು.


.jpg)
