ಜೂನ್ 18 ರಂದು ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

Upayuktha
0

 ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ



ಬೆಂಗಳೂರು: ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ ನೆಲೆಗೊಂಡಿರುವ ಸ್ವಾನಂದಾಶ್ರಮ (ಶ್ರೀ ಗಣೇಶ ಮಹಾ ಸಂಸ್ಥಾನ) ಇಂದು ಗಣೇಶೋಪಾಸನೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ರಜತ ಮಹೋತ್ಸವದ ಸಂಭ್ರಮವನ್ನು ಆಚರಿಸಿರುವ ಈ ಕ್ಷೇತ್ರವು ಕೇವಲ ದೇವಾಲಯವಲ್ಲ; ಗಣೇಶತತ್ತ್ವ, ಭಾರತೀಯ ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಆಧ್ಯಾತ್ಮಿಕ ಸಾಧನೆಯ ಸಮಗ್ರ ಕೇಂದ್ರವಾಗಿದೆ.

ಸ್ವಾನಂದ ಬಾಲ ಗಣಪತಿಯ ಸನ್ನಿಧಿಯಲ್ಲಿ ಪ್ರತಿದಿನ ನಡೆಯುವ ಪೂಜೆ, ಹೋಮ, ಧಾರ್ಮಿಕ ಆಚರಣೆಗಳು ಹಾಗೂ ಗಣೇಶ ತತ್ತ್ವದ ಕುರಿತ ಜ್ಞಾನಪ್ರಚಾರ ಕಾರ್ಯಕ್ರಮಗಳು ಈ ಕ್ಷೇತ್ರವನ್ನು ವಿಶೇಷವಾಗಿಸಿವೆ. ಗ್ರಾಮೀಣ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕ ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಿರುವ ಆಶ್ರಮವು ಭಕ್ತಿ ಮತ್ತು ಸೇವೆಯ ಅಪೂರ್ವ ಮಾದರಿಯಾಗಿದೆ.

ಜೂನ್ 18ರಿಂದ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ, ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಹೊಯ್ಸಳ ಶೈಲಿಯ ನೂತನ ದೇವಾಲಯದ ಪ್ರಥಮ ಹಂತದ ಉದ್ಘಾಟನಾ ಸಮಾರಂಭ ಜೂನ್ 18, 2026ರಂದು ವೈಭವದಿಂದ ನೆರವೇರಲಿದೆ.

ಗಣೇಶ ಪುರಾಣ ಮತ್ತು ಮುದ್ಗಲ ಪುರಾಣಗಳಲ್ಲಿ ವರ್ಣಿತವಾಗಿರುವ ಗಣೇಶ ಮಹಿಮೆಯನ್ನು ಸಾಕಾರಗೊಳಿಸುವ ಈ ದೇವಾಲಯವು ಭಕ್ತಿ, ಶಿಲ್ಪಕಲೆ ಮತ್ತು ಆಧ್ಯಾತ್ಮಿಕತೆಯ ಅನನ್ಯ ಸಂಯೋಜನೆಯಾಗಿ ನಿರ್ಮಾಣಗೊಳ್ಳುತ್ತಿದೆ.

ಜೂನ್ 18 – ಪ್ರತಿಷ್ಠಾಪನಾ ಮಹೋತ್ಸವ

ಬೆಳಿಗ್ಗೆ 8.08 ರಿಂದ 9.06 ಗಂಟೆಯವರೆಗೆ ಕರ್ಕಾಟಕ ಲಗ್ನದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿಯ ಅಷ್ಟಬಂಧ ಪ್ರತಿಷ್ಠಾಪನೆ ನಡೆಯಲಿದೆ.

ಈ ಸಂದರ್ಭದಲ್ಲಿ:ಗಣೇಶ ಪುರಾಣೋಕ್ತ 32 ಗಣಪತಿ ಸ್ವರೂಪಗಳ ಪ್ರತಿಷ್ಠಾಪನೆ,ಮುದ್ಗಲ ಪುರಾಣೋಕ್ತ ಚತುರ್ಯುಗ ಗಣಪತಿಗಳ ಪ್ರತಿಷ್ಠಾಪನೆ;ವಿಶೇಷ ವೇದಿಕ ಮತ್ತು ಆಗಮೋಕ್ತ ಧಾರ್ಮಿಕ ವಿಧಿವಿಧಾನಗಳು

ಮಧ್ಯಾಹ್ನ 3.00 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ:ಶ್ರೀ ಕ್ಷೇತ್ರ ಹರಿಹರಪುರದ ಪರಮಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿಯವರು,ಭಾರತೀಯ ಯೋಗಧಾಮ (ರಿ), ಮೈಸೂರಿನ ಅಧ್ಯಕ್ಷರು ಹಾಗೂ ಖ್ಯಾತ ಯೋಗ–ಆಧ್ಯಾತ್ಮಿಕ ಚಿಂತಕರಾದ ಡಾ. ಕೆ.ಎಲ್. ಶಂಕರನಾರಾಯಣ ಜೋಯಿಸ್ಉಪಸ್ಥಿತರಿದ್ದು ಆಶೀರ್ವಚನ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.

ಜೂನ್ 20 – ವಿದ್ಯಾಚೇತನ ಸೇವಾ ಕಾರ್ಯಕ್ರಮ

ಆಶ್ರಮದ ಮಹತ್ವಾಕಾಂಕ್ಷೆಯ ಸಾಮಾಜಿಕ ಸೇವಾ ಯೋಜನೆಯಾದ ವಿದ್ಯಾಚೇತನ ಕಾರ್ಯಕ್ರಮದ ಅಂಗವಾಗಿ ಸುಮಾರು 25 ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯಧನದ ಸಂಕೇತವಾಗಿ ವಿದ್ಯಾ ಕಿಟ್‌ಗಳನ್ನು ವಿತರಿಸಲಾಗುವುದು.

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಕಿಟ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಲಿದ್ದಾರೆ.

ಜೂನ್ 21 – ಬ್ರಹ್ಮಕುಂಭಾಭಿಷೇಕ

ಭಾನುವಾರ ಮುಂಜಾನೆ 3.45 ಗಂಟೆಗೆ ಕವಾಟೋದ್ಘಾಟನೆ ನಡೆಯಲಿದೆ.

ಅನಂತರ:ಬ್ರಹ್ಮಕುಂಭಾಭಿಷೇಕ,ದ್ರವ್ಯ ಕಲಶಾಭಿಷೇಕ,ವಿಶೇಷ ಪೂಜೆಗಳು

ನೆರವೇರಲಿದ್ದು, ಬೆಳಿಗ್ಗೆ 9.30 ಗಂಟೆಯಿಂದ ಭಕ್ತರಿಗೆ ಶ್ರೀ ಏಕಾಕ್ಷರ ಮಹಾಗಣಪತಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಜೂನ್ 18ರ ಸಂಜೆ 5.30 ಗಂಟೆಯಿಂದ ಜೂನ್ 21ರ ಮುಂಜಾನೆ 3.00 ಗಂಟೆಯವರೆಗೆ ನಿರಂತರ ವೈದಿಕ ಹಾಗೂ ತಾಂತ್ರಿಕ ಧಾರ್ಮಿಕ ವಿಧಿವಿಧಾನಗಳು ನಡೆಯಲಿರುವುದರಿಂದ ದೇವಾಲಯದ ದ್ವಾರಗಳನ್ನು ಸಾರ್ವಜನಿಕ ದರ್ಶನಕ್ಕಾಗಿ ಮುಚ್ಚಲಾಗುತ್ತದೆ.ಜೂನ್ 19 ಮತ್ತು 20ರಂದು ಗರ್ಭಗುಡಿಯೊಳಗಿನ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಆಶ್ರಮದ ಆಡಳಿತ ಮಂಡಳಿ ತಿಳಿಸಿದೆ. ಅತ್ಯಂತ ಅಪರೂಪದ ಹಾಗೂ ಪುಣ್ಯಪ್ರದವಾದ ಈ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಗಣೇಶ ಉಪಾಸಕರು, ಧರ್ಮಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಏಕಾಕ್ಷರ ಮಹಾಗಣಪತಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸ್ವಾನಂದಾಶ್ರಮದ ಆಡಳಿತ ಮಂಡಳಿ ಮನವಿ ಮಾಡಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top