ಶಿಕ್ಷಕವೃತ್ತಿಯ ಗೌರವ ಮತ್ತು ಪಾವಿತ್ರ್ಯತೆ ಉಳಿಸಿಕೊಳ್ಳಿ - ಶ್ರೀ ಸೋಮಶೇಖರ ಶೆಟ್ಟಿ ಬಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಸೋಮಶೇಖರ ಶೆಟ್ಟಿ ಬಿ ಶಿಕ್ಷಕ ವೃತ್ತಿಯು ಪವಿತ್ರ ವೃತ್ತಿಗಳಲ್ಲಿ ಒಂದಾಗಿದೆ. ಶಿಕ್ಷಕರು ಕೇವಲ ಪಾಠ ಮಾಡುವುದಲ್ಲದೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೆಳಕು ಚೆಲ್ಲುವವರಾಗಿದ್ದಾರೆ ಮತ್ತು ವೃತ್ತಿಯ ಗೌರವವನ್ನು ಉಳಿಸಿಕೊಳ್ಳಲು ಶಿಕ್ಷಕರು ಪ್ರಾಮಾಣಿಕತೆ, ಸಮಯಪಾಲನೆ, ಶಿಸ್ತು ಮತ್ತು ಕರ್ತವ್ಯವನ್ನು ಕಾಪಾಡಿಕೊಳ್ಳಬೇಕು. ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ನೈತಿಕ ಮೌಲ್ಯಗಳನ್ನು ಪಾಲಿಸಬೇಕು. ಶಿಕ್ಷಕರ ನುಡಿ, ವರ್ತನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ನಿರಂತರ ಅಧ್ಯಯನ, ನೂತನ ಜ್ಞಾನಾರ್ಜನೆ ಮತ್ತು ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿಯ ಮೂಲಕ ಶಿಕ್ಷಕರು ತಮ್ಮ ವೃತ್ತಿಯ ಗೌರವವನ್ನು ಕಾಪಾಡಿ ಪಾವಿತ್ರ‍್ಯತೆ ಉಳಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲಿ ವಿಷಯ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಥೆಯು ನಿಮಗೆ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡುತ್ತದೆ ಎಂಬ ವಿಶ್ವಾಸವಿದೆ. ನೀವು ಆದರ್ಶ ಶಿಕ್ಷಕರಾಗಿ ದೇಶವನ್ನು ಕಟ್ಟುವ ಮತ್ತು ಸಮಾಜಸೇವೆಯನ್ನು ಮಾಡುವ ಅವಕಾಶ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಉಪನ್ಯಾಸಕ ಮಂಜು ಆರ್ ಡಿ.ಎಡ್. ಬೆಳೆದು ಬಂದ ಹಾದಿ, ಕೋರ್ಸ್ನ ಮಹತ್ವ ಅದರ ಸದುಪಯೋಗದ ಬಗ್ಗೆ ತಿಳಿಸಿ ಶಿಕ್ಷಣದ ವ್ಯವಸ್ಥೆಯಲ್ಲಿ ನಾವೆಲ್ಲರೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಇಲ್ಲವಾದಲ್ಲಿ ಕಾಲವೇ ನಮ್ಮನ್ನು ಬದಲಾಯಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಹುಲಿಗೆವ್ವ ಮತ್ತು ತಂಡದವರು ಪ್ರಾರ್ಥಿಸಿ, ಅನ್ವಿತಾ ಸ್ವಾಗತಿಸಿ, ಯಜ್ಞಶ್ರೀ ಅತಿಥಿ ಪರಿಚಯಿಸಿ, ತ್ರಿವೇಣಿ ವಂದಿಸಿ, ಚಿಂಚನ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


